ನಾವೆಲ್ಲರೂ ಸೇರಿ ಸಂವಿಧಾನ ರಕ್ಷಿಸಬೇಕಿದೆ: ಆರ್.ವಿ. ದೇಶಪಾಂಡೆ

| Published : Oct 15 2025, 02:08 AM IST

ಸಾರಾಂಶ

ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ಭಾರತದ ದೇಶದಲ್ಲಿ ಮತಕಳ್ಳತನ ನಡೆದಿರುವುದು ಜನಸಾಮಾನ್ಯರ ಹಕ್ಕಿನ ಕಳ್ಳತನವಾಗಿದೆ.

ಮತಕಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಚಾಲನೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ಭಾರತದ ದೇಶದಲ್ಲಿ ಮತಕಳ್ಳತನ ನಡೆದಿರುವುದು ಜನಸಾಮಾನ್ಯರ ಹಕ್ಕಿನ ಕಳ್ಳತನವಾಗಿದೆ. ಕಾಂಗ್ರೆಸ್ ಮತಕಳ್ಳತನದ ವಿರುದ್ಧ ಆರಂಭಿಸಿರುವ ಈ ಅಭಿಯಾನವು ದೇಶದ ಜನಸಾಮಾನ್ಯರ ಧ್ವನಿಯಾಗಿ ರೂಪಗೊಳ್ಳಬೇಕಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.

ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಮತಕಳ್ಳತನ ವಿರುದ್ಧ ಸಹಿಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮತಗಳ್ಳತನ ನಿಲ್ಲಲಿ:

ಸಂವಿಧಾನವು ನಮಗೆಲ್ಲರಿಗೂ ಮತದಾನದ ಹಕ್ಕನ್ನು ನೀಡಿದೆ. ಸಂವಿಧಾನದಲ್ಲಿ ಒಬ್ಬ ವ್ಯಕ್ತಿ ಒಂದು ಮತ ಹೇಳಲಾಗಿದೆ, ಹೀಗಿರುವಾಗ ಇಂದು ಸಂವಿಧಾನವನ್ನು ಮೀರಿ ಮತಗಳ್ಳತನ ನಡೆದಿದೆ. ನಾವೆಲ್ಲರೂ ಸೇರಿ ನಮ್ಮ ಸಂವಿಧಾನವನ್ನು ರಕ್ಷಿಸಬೇಕಾಗಿದೆ ಎಂದರು.ಈ ದೇಶದಲ್ಲಿ ಎಲ್ಲರೂ ಸೇರಿ ಹೊಸ ಬದಲಾವಣೆ, ಹೊಸ ಕ್ರಾಂತಿ ಮಾಡಬೇಕಾಗಿದೆ. ಅದಕ್ಕಾಗಿ ನಮ್ಮ ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಎಷ್ಟು ಸಾಧ್ಯವೂ ಅಷ್ಟು ಜನರನ್ನು ಒಗ್ಗೂಡಿಸಿ ಮತಕಳ್ಳತನದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕಾಗಿದೆ, ಜನರ ಹಕ್ಕು ಕಾಪಾಡಲು ಪ್ರೇರೆಪಿಸಬೇಕಾಗಿದೆ ಎಂದರು.

ಪ್ರಜಾಪ್ರಭುತ್ವ ಸಂವಿಧಾನ ರಕ್ಷಣೆಯ ಹೋರಾಟ:

ಇಂದು ದೇಶದಲ್ಲಿ ನಮ್ಮ ನಾಯಕರಾದ ರಾಹುಲ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಆರಂಭಿಸಿದ ಮತಗಳ್ಳತನದ ವಿರೋಧಿ ಹೋರಾಟವು ಕೇವಲ ರಾಜಕೀಯ ಉದ್ದೇಶದ ಹೋರಾಟವಾಗಿಲ್ಲ, ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟವಾಗಿದೆ. ಜನರ ಮತಾಧಿಕಾರದ ರಕ್ಷಣೆಯ ಹೋರಾಟವಾಗಿದೆ ಎಂದರು.

ಇಂದು ದೇಶದ ಪ್ರತಿಯೊಬ್ಬರ ಮತಗಳನ್ನು ವ್ಯವಸ್ಥಿತವಾಗಿ ಕದಿಯಲಾಗುತ್ತಿದೆ. ಈ ಅಕ್ರಮವನ್ನು ನಾವು ಬಯಲಿಗೆಳೆಯಬೇಕು, ಅದಕ್ಕಾಗಿ ಹೋರಾಟದ ಜೊತೆಯಲ್ಲಿ ಜಾಗೃತಿ ಅಭಿಯಾನಗಳನ್ನು ನಾವು ಮಾಡಬೇಕಿದೆ ಎಂದರು. ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂವಿಧಾನ ಹಾಗೂ ನಮ್ಮ ಮತಗಳ ರಕ್ಷಣೆಗೆ ನಾವು ಪಣ ತೋಡಬೇಕಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಪ್ರಮುಖರಾದ ಅಜರ್ ಬಸರಿಕಟ್ಟಿ, ಅಲಿಂ ಬಸರಿಕಟ್ಟಿ, ಉಮೆಶ ಬೊಳಶೆಟ್ಟಿ, ರವಿ ತೋರಣಗಟ್ಟಿ, ಸತ್ಯಜಿತ ಗಿರಿ, ಮಾಲಾ ಬೃಗಾಂಜಾ, ಅನಿಲ ಫರ್ನಾಂಡೀಸ್, ಬಿ.ಡಿ. ಚೌಗಲೆ, ಪ್ರಮೋದ ಪಾಟೀಲ, ಅನಿಲ ಚವ್ಹಾನ, ಖಲೀಲ ದುಸಗಿಕರ, ಸಂಜು ಮಿಶಾಳೆ, ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.

ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಿಂದ ವನಶ್ರೀ ವೃತ್ತದವರೆಗೆ ಮತಗಳ್ಳತನ ವಿರೋಧಿಸಿ ಜಾಗೃತಿ ಮೆರವಣಿಗೆ ನಡೆಯಿತು.