ಮಾಗಡಿ: ತಾಲೂಕಿನ ಚಕ್ರಬಾವಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಚುನಾವಣೆ ನಡೆಸಬೇಕೆಂಬ ಇಂಗಿತ ನನಗೂ ಇರಲಿಲ್ಲ, ಮಾಜಿ ಶಾಸಕರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಹೇಳಿದರು.

ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಚಕ್ರಬಾವಿ ವಿಎಸ್ಎಸ್ ಎನ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಮನೆ ಮನೆ ಮತದಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾಜಿ ಶಾಸಕ ಎ.ಮಂಜುನಾಥ್ ಚಕ್ರಬಾವಿ ಸೊಸೈಟಿ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ಕಳೆದ 15 ವರ್ಷಗಳಿಂದಲೂ ಸೊಸೈಟಿಯಲ್ಲಿ ನಿರ್ದೇಶಕನಾಗಿ ಆಯ್ಕೆಯಾಗಿದ್ದು 40 ವರ್ಷಗಳಿಂದಲೂ ಅವಿರೋಧವಾಗಿ ಆಯ್ಕೆಯಾಗಿ ಚುನಾವಣೆ ನಡೆದಿರಲಿಲ್ಲ. ಈ ಬಾರಿಯೂ ಕೂಡ ಜೆಡಿಎಸ್ ಪಕ್ಷದವರಿಗೆ ಇಂತಿಷ್ಟು ಸ್ಥಾನ ಕೊಡಬೇಕೆಂದು ನಾಮಪತ್ರ ಹಿಂಪಡಿಯುವ ಕೊನೆಯ ದಿನ 3 ಗಂಟೆವರೆಗೂ ಸಂಧಾನಕ್ಕೆ ಬರುವರೆಂದು ಕಾದು ಕುಳಿತಿದ್ದೆವು. ಆದರೆ ಮಾಜಿ ಶಾಸಕ ಎ ಮಂಜುನಾಥ್ ತಮ್ಮ ಅಭ್ಯರ್ಥಿಗಳನ್ನು ಬಿಡದಿಯಲ್ಲಿ ಗೃಹಬಂಧನ ಮಾಡಿ ಸಂಜೆ 5ಗಂಟೆವರೆಗೂ ಅಭ್ಯರ್ಥಿಗಳನ್ನು ಸೊಸೈಟಿಗೆ ಬರದಂತೆ ತಡೆದಿದ್ದರು. ಈಗ ತಮ್ಮಿಂದಲೇ ಈ ಚುನಾವಣೆ ನಡೆಯುತ್ತಿದೆ ಹೇಳಿಕೊಳ್ಳುವುದು ಸರಿಯಲ್ಲ ಎಂದರು.

ಚುನಾವಣೆ ಮಾಡಬೇಕೆಂಬ ಇಂಗಿತ ನಮಗಿರಲಿಲ್ಲ. ರೈತರ ಸಂಸ್ಥೆ ಆಗಿರುವುದರಿಂದ ಚುನಾವಣೆ ನಡೆದರೆ ಸಂಘಕ್ಕೆ ನಷ್ಟವಾಗಲಿದೆ. ನಮ್ಮ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದು ತಾಲೂಕಿನಲ್ಲೇ ಮಾದರಿ ಕಟ್ಟಡ ಹಾಗೂ ರೈತರಿಗೆ ರಿಯಾಯಿತಿಯಲ್ಲಿ ಸಾಲ ವಿತರಣೆ ಮಾಡಲಾಗಿದೆ. ಈ ಹಿಂದೆ 10‌ ಸಾವಿರ ಸಾಲ ಪಡೆಯುತ್ತಿದ್ದ ರೈತ ಈಗ ಎರಡು ಲಕ್ಷದವರೆಗೂ ಪಡೆಯುವ ಹಂತಕ್ಕೆ ಬಂದಿದೆ. ಒಂದು ಕೋಟಿವರೆಗೂ ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ 10 ಲಕ್ಷದವರೆಗೂ ಸಾಲ ವಿತರಿಸಲಾಗುತ್ತಿದೆ. 11 ಜನ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು ರೈತರ ಪರವಾಗಿ ದುಡಿಯುತ್ತಿರುವ ಆಡಳಿತ ಮಂಡಳಿಗೆ ಮತದಾರರು ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಅಶೋಕ್ ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್ ಎನ್ ಅಶೋಕ್ ಚಕ್ರಬಾವಿ ವಿಎಸ್ಎಸ್ ಎನ್ ಸೊಸೈಟಿಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದು ಭಾನುವಾರದ ಚುನಾವಣೆ ಇರುವುದರಿಮದ ಮನೆಮನೆಗೆ ತೆರಳಿ ಮತಯಾಚಿಸಿದರು. ಅಭಿಮಾನಿಗಳು ಮತಯಾಚನೆ ವೇಳೆ ಎಚ್ ಎನ್ ಅಶೋಕ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.

ಅರಳುಕುಪ್ಪೆ ಚಕ್ರಬಾವಿ ಕೋರಮಂಗಲ, ಸಾಧಮರನಹಳ್ಳಿ, ಮರಳುದೇವನಪುರ, ಗ್ರಾಮಗಳಲ್ಲಿಗೆ ತೆರಳಿ ಮತಯಾಚಿಸಿದರು.


ಇದೆ ವೇಳೆ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾದ ಜೆ.ಪಿ. ಚಂದ್ರೇಗೌಡ, ಎಂ.ಕೆ.ಧನಂಜಯ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಚಕ್ರಬಾವಿ ಮಾರೇಗೌಡ, ಕಾಂತರಾಜು, ರವೀಂದ್ರ ಸೇರಿದಂತೆ ಕಾಂಗ್ರೆಸ್‌ ಬೆಂಬಲಿತ 11 ಅಭ್ಯರ್ಥಿಗಳು ಜೊತೆಯಲಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಚಕ್ರಬಾವಿ ವಿಎಸ್ಎಸ್ಎನ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಮನೆಮನೆಗೆ ತೆರಳಿ ಮತಯಾಚಿಸಿದರು.