ಗದಗ: ಭಾರತ ವೈವಿಧ್ಯಮಯ ದೇಶ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಇಲ್ಲಿ ಬೇರೆ ಬೇರೆ ಧರ್ಮ, ಜಾತಿಗಳು ಭಿನ್ನ ಆಚರಣೆಗಳನ್ನು ಹೊಂದಿದ್ದರೂ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ ಎಂಬ ಭಾವನೆ ಹೊಂದಿರುವುದು ಭಾರತೀಯತ್ವದ ಸಂಕೇತ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2798ನೇ ಶಿವಾನುಭವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಂಜಾರ ಸಮಾಜದ ಸಂಸ್ಕೃತಿ ಮತ್ತು ಆಚರಣೆ ಬಹಳ ವೈಶಿಷ್ಟ್ಯವಾಗಿವೆ. ಈ ಸಮುದಾಯದವರು ಮೂಲತಃ ಪ್ರಕೃತಿ ಆರಾಧಕರು ಎಂದರು.

ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎಂ.ಆರ್. ಚವ್ಹಾಣ ಮಾತನಾಡಿ, ಬಂಜಾರ ಸಮುದಾಯ ಇಡೀ ಏಷ್ಯಾ ಖಂಡವನ್ನು ವ್ಯಾಪಿಸಿಕೊಂಡಿದೆ ಎಂದರು.

ರವಿಕಾಂತ್ ಅಂಗಡಿ ಮಾತನಾಡಿ, ಬಂಜಾರ ಸಮಾಜವು ಮೂಲತ ಅಲೆಮಾರಿಗಳಾಗಿದ್ದರು. ಅನೇಕ ಶತಮಾನಗಳ ಕಾಲ ಆಧುನಿಕ ಜಗತ್ತಿನಿಂದ ದೂರವಿದ್ದು ಬದುಕು ಸಾಧಿಸಿದವರು. ಗದಗ ಪರಿಸರದಲ್ಲಿ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು ಅಕ್ಷರದ ಅರಿವು ಮೂಡಿಸಿ ಹೊರ ಜಗತ್ತಿಗೆ ಬಂಜಾರ ಸಮಾಜವನ್ನು ಪರಿಚಯಿಸಿದ ಮಹನೀಯರು ಎಂದರು.

ಡಾ. ಬಿ.ಎಲ್. ಚವಾಣ್, ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀಕಾಂತ್ ಜಾಧವ ಮಾತನಾಡಿದರು. ಸಂಜನಾ ಎಂ. ಹದ್ಲಿ ಧರ್ಮಗ್ರಂಥ ಪಠಿಸಿದರು. ಸನ್ನಿಧಿ ಎಂ. ಹದ್ಲಿ ವಚನ ಚಿಂತನ ನಡೆಸಿದರು. ಮೃತ್ಯುಂಜಯ ಹಿರೇಮಠ ಹಾಗೂ ಸಂಗಡಿಗರು ವಚನ ಸಂಗೀತ ನೆರವೇರಿಸಿದರು. ಬಂಜಾರ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಡಾ. ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ದರಾಮ ಪಟ್ಟೆದ, ಪ್ರತಿಭಾ ಬಡ್ನಿ, ವೀರಣ್ಣ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕಮಠ, ಆದೇಶ ಅಂಗಡಿ, ಡಾ. ನರೇಂದ್ರ ಪವಾರ, ಡಾ. ಕಿಶೋರ ಪವಾರ ಇದ್ದರು. ಡಾ. ರಮೇಶ ಎಂ. ಕಲ್ಲನಗೌಡರ ಕಾರ್ಯಕ್ರಮ ನಿರೂಪಿಸಿದರು. ಡಾ. ಉಮೇಶ ಪುರದ ಸ್ವಾಗತಿಸಿದರು.