ಸಾರಾಂಶ
ಮತಕ್ಷೇತ್ರದ ಮತದಾರರು ಕಳೆದ ನಾಲ್ಕು ಚುನಾವಣೆಗಳಲ್ಲಿ ನಮಗೆ ಮತದಾನ ನೀಡದಿರುವುದು ಬೇಜಾರು ಆಗಿದೆ ಎಂದು ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ವಿಷಾದಿಸಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಮತಕ್ಷೇತ್ರದ ಮತದಾರರು ಕಳೆದ ನಾಲ್ಕು ಚುನಾವಣೆಗಳಲ್ಲಿ ನಮಗೆ ಮತದಾನ ನೀಡದಿರುವುದು ಬೇಜಾರು ಆಗಿದೆ ಎಂದು ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ವಿಷಾದಿಸಿದರು.ಪಟ್ಟಣದಲ್ಲಿ ಗುರುಮಠಕಲ್ ಹಾಗೂ ಸೈದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗುರುಮಠಕಲ್ ಮತದಾರರು ಕಳೆದೆರಡು ವಿಧಾನಸಭೆ ಹಾಗೂ ಎರಡು ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದೆ ನಮ್ಮನ್ನು ಕಡೆಗಣಿಸುತ್ತಿರುವುದು, ಕ್ಷೇತ್ರಕ್ಕೆ ಇನ್ನೇನು ಮಾಡಬೇಕು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಗುರುಮಠಕಲ್ ಜನರಿಗಾಗಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೂ ಇಲ್ಲಿನ ಮತದಾರರು ನಮನ್ನು ಬೆಂಬಲಿಸುತ್ತಿಲ್ಲ. ನಮಗೆ ಅರ್ಥ ಆಗುತ್ತಿಲ್ಲ. ನೀವು ಮತದಾನ ಮಾಡದಿದ್ದರೂ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಕೆಲಸ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ, ರಾಧಾಕೃಷ್ಣ ದೊಡ್ಡಮನಿ ಅವರನ್ನು ಸಂಸದರಾಗಿ ಆರಿಸಿ ತಂದಿದ್ದು, ಕಲಬುರಗಿ ಕ್ಷೇತ್ರದ ಜನರು ಪುಣ್ಯವಂತರು. ಖರ್ಗೆ ಅವರ ಅಳಿಯಂದರು ಜತೆಗೆ ಸರಳ ಸಜ್ಜನ ಸ್ವಭಾವದವರು. ಅವರಿಂದ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದರು.
ಸುರಪುರ ಶಾಸಕ ವೇಣುಗೋಪಾಲ ನಾಯಕ ಮಾತನಾಡಿ, ಈ ಸಂದರ್ಭದಲ್ಲಿ ನನ್ನ ತಂದೆ ಶಾಸಕ ದಿ. ರಾಜಾ ವೆಂಕಟಪ್ಪ ನಾಯಕ ಅವರನ್ನು ಸ್ಮರಿಸಬೇಕಾಗಿದೆ. ರಾಧಾಕೃಷ್ಣ ದೊಡ್ಡಮನಿ ಜತೆಗೆ ಕಾಂಗ್ರೆಸ್ ಕಾರ್ಯಕರ್ತರು ನನಗೆ ಮಾರ್ಗದರ್ಶನ ನೀಡಿ ಗೆಲ್ಲಿಸಿದ್ದಾರೆ. ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನೂತನ ಎಂ.ಎಲ್.ಸಿ ಗಳಾದ ಚಂದ್ರಶೇಖರ ಪಾಟೀಲ್ ಹುಮನಾಬಾದ್ ಹಾಗೂ ಜಗದೇವ ಗುತ್ತೇದಾರ ಇಬ್ಬರಿಗೂ ಸನ್ಮಾನಿಸಲಾಯಿತು.
ರಾಜ್ಯ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿ ಕುಮಾರ್ ಧೋಕಾ, ಕೆಪಿಸಿಸಿ ಸದ್ಯಸ ಮರಿಗೌಡ ಹುಲಕಲ್, ಮುಖಂಡರಾದ ದತ್ತು ಬಸವಕಲ್ಯಾಣ, ವಿನೋದ್ ಗೌಡ, ಗುರುಮಿಠಕಲ್ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಸೈದಾಪುರ ಬ್ಲಾಕ್ ಅಧ್ಯಕ್ಷ ನಿರಂಜನರೆಡ್ಡಿ ಸೇರಿದಂತೆ ಕಾರ್ಯಕರ್ತರು ಇದ್ದರು.