ಬೃಂದಾವನಕ್ಕೆ ಕೈಮುಗಿಯುವುದು ನಮ್ಮ ಸಂಸ್ಕೃತಿ. ಆದರೆ ಕಾಂಗ್ರೆಸ್ಸಿಗರದ್ದು, ಸೂಟ್‌ಕೇಸ್‌ ಸಂಸ್ಕೃತಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಜಿ ಸಂಸದ ಡಿ.ಕೆ. ಸುರೇಶ್‌ ಮತ್ತು ಸಚಿವ ಎಚ್‌.ಸಿ. ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಬೃಂದಾವನಕ್ಕೆ ಕೈಮುಗಿಯುವುದು ನಮ್ಮ ಸಂಸ್ಕೃತಿ. ಆದರೆ ಕಾಂಗ್ರೆಸ್ಸಿಗರದ್ದು, ಸೂಟ್‌ಕೇಸ್‌ ಸಂಸ್ಕೃತಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಜಿ ಸಂಸದ ಡಿ.ಕೆ. ಸುರೇಶ್‌ ಮತ್ತು ಸಚಿವ ಎಚ್‌.ಸಿ. ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಬ್ಬರು ಮಹಾ ನಾಯಕರು, ಅಭಿವೃದ್ಧಿಯ ಹರಿಕಾರರು. ನಮ್ಮ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾವು ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಅಂದಿದ್ದಾರೆ. ಹೌದು, ನಾವು ಪೂಜಿಸುವುದು ಸಂಸ್ಕೃತಿಯ ಪ್ರತೀಕವಾದ ಬೃಂದಾವನವನ್ನು. ಆದರೆ ಅವರದ್ದು ಸೂಟ್‌ಕೇಸ್ ಬೃಂದಾವನ. ಎಲ್ಲಿ ಭೂಮಿ ಸಿಗುತ್ತದೆಯೋ ಅಲ್ಲೆಲ್ಲ ಲಪಟಾಯಿಸಿ ಬೃಂದಾವನ ಕಟ್ಟುವುದು ಅವರ ಸಂಸ್ಕೃತಿ’ ಎಂದು ಲೇವಡಿ ಮಾಡಿದರು.

ನೈಸ್‌ ಟೋಲ್‌ ಸಂಗ್ರಹಕ್ಕೆ ತಡೆಯೊಡ್ಡಿ:

ನೈಸ್‌ ಅಕ್ರಮದ ಬಗ್ಗೆ ಕಿಡಿಕಾರಿದ ಎಚ್‌ಡಿಕೆ, ರಸ್ತೆಗಾಗಿ 20 ವರ್ಷದಿಂದ ರೈತರ ಭೂಮಿ ವಶಕ್ಕೆ ಪಡೆದು ಇನ್ನೂ ಪರಿಹಾರ ಕೊಟ್ಟಿಲ್ಲ. ಅವರು ಟೇಪ್‌ ಹಿಡಿದುಕೊಂಡು ಅಳತೆ ಮಾಡಿ ಭೂಮಿ ಲಪಟಾಯಿಸಿ ಧೋಖಾ ಮಾಡುವವರು. ಅನಧಿಕೃತವಾಗಿ 20 ವರ್ಷಗಳಿಂದ ಸುಂಕ ವಸೂಲಿ ಮಾಡುತ್ತಿದ್ದಾರೆ. ಇದು ರಾಷ್ಟ್ರೀಯ ಹೆದ್ದಾರಿ ಅಲ್ಲ, ರಾಜ್ಯಕ್ಕೆ ಸೇರಿದ್ದಾಗಿರುವುದರಿಂದ, ಸರ್ಕಾರ ಕೂಡಲೇ ಟೋಲ್ ಸಂಗ್ರಹ ನಿಲ್ಲಿಸಬೇಕೆಂದು ಒತ್ತಾಯಿಸಿದರು.2 ವರ್ಷದಲ್ಲಿ ರಾಜ್ಯ ರಾಜಕಾರಣಕ್ಕೆ ಬರ್ತೇನೆ: ಎಚ್‌ಡಿಕೆಮುಂದಿನ ಎರಡು ವರ್ಷಗಳಲ್ಲಿ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಇಂಗಿತ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಅವರು, ‘ದೆಹಲಿಯಲ್ಲಿ ನನ್ನನ್ನು ಭೇಟೆಗೆ ಬರುವವರೆಲ್ಲರೂ ಶ್ರೀಮಂತರೇ ಆಗಿದ್ದಾರೆ. ಸಾಮಾನ್ಯ ಜನರು ನನ್ನನ್ನು ಭೇಟಿಯಾಗಲು ಆಗುತ್ತಿಲ್ಲ. ಅವರ ಕಷ್ಟ ಸುಖಕ್ಕೆ ಸ್ಪಂದಿಸಲಾಗುತ್ತಿಲ್ಲ. ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ಕಾಣುತ್ತಾರೆ. ಅವರ ಆಶೀರ್ವಾದದಿಂದಾಗಿ ಕೇಂದ್ರ ಸಚಿವನಾಗಲು ಸಾಧ್ಯವಾಗಿದೆ. ಮುಂದಿನ 2 ವರ್ಷ ಜಿಲ್ಲೆಗೆ ಕೈಗಾರಿಕೆಗಳನ್ನು ತಂದು ಜನರ ಋಣ ತೀರಿಸಿ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಸುಳಿವು ನೀಡಿದರು.ಜನರ ಬದುಕು ಸುಧಾರಿಸಲು ಮುಂದಿನ ಚುನಾವಣೆಯಲ್ಲಿ 5 ವರ್ಷಗಳ ಸರ್ಕಾರ ನೀಡುತ್ತಾರೆಂಬ ಭರವಸೆ ನನಗಿದೆ. ಜನರ ಆಶೀರ್ವಾದ ನನಗೆ ದೊಡ್ಡ ಶಕ್ತಿಯಾಗಿದ್ದು, ಇದರಿಂದಲೇ ಆರೋಗ್ಯದ ಸಮಸ್ಯೆ ಗೆದ್ದುಬಂದೆ ಎಂದು ಹೇಳಿದರು.