ನಮ್ಮದು ಗಾಂಧಿ ಹಿಂದುತ್ವ, ಬಿಜೆಪಿದ್ದು ಗೋಡ್ಸೆ ಹಿಂದುತ್ವ: ಕೆ.ಎನ್‌. ರಾಜಣ್ಣ

| Published : Jan 17 2024, 01:48 AM IST

ನಮ್ಮದು ಗಾಂಧಿ ಹಿಂದುತ್ವ, ಬಿಜೆಪಿದ್ದು ಗೋಡ್ಸೆ ಹಿಂದುತ್ವ: ಕೆ.ಎನ್‌. ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನಾವೆಲ್ಲರೂ ಹಿಂದುಗಳೇ, ಆದರೆ ನಮ್ಮದು ಗಾಂಧಿಯ ಹಿಂದುತ್ವ ,ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ತುಮಕೂರು

ನಾವೆಲ್ಲರೂ ಹಿಂದುಗಳೇ, ಆದರೆ ನಮ್ಮದು ಗಾಂಧಿಯ ಹಿಂದುತ್ವ ,ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ-ತುಮಕೂರು ಜಿಲ್ಲೆ ಇವರು ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮ ಹಾಗೂ ಕೆ.ಎನ್.ಆರ್‌.ಪ್ರಶಸ್ತಿ ಪ್ರದಾನ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು.

ಗೋಡ್ಸೆ ಹಿಂದುತ್ವವದಲ್ಲಿ ಕೊಲೆ, ಸುಲಿಗೆಗಳಿಲ್ಲದೆ ಇನ್ನೇನು ಇರಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಮರಾಠರ ಹಿಂದೂ ಪೇಶ್ವೆಗಳು ಕರ್ನಾಟಕದ ಪ್ರಮುಖ ದೇವಾಲಯಗಳ ಮೇಲೆ ದಾಳಿ ನಡೆಸಿದಾಗ, ಅವರನ್ನು ಹಿಮ್ಮೆಟ್ಟಿಸಿದವ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಆತನನ್ನು ದೇಶದ್ರೋಹಿ ಎನ್ನುತ್ತಾರೆ. ಟಿಪ್ಪು ಸುಲ್ತಾನ್ ಆರಂಭಿಸಿದ ಕನ್ನಂಬಾಡಿ ಕಟ್ಟೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಪೂರ್ಣಗೊಳಿಸಿದರು ಎಂದರು.

ಟಿಪ್ಪು ಬಳಕೆ ಮಾಡುತ್ತಿದ್ದ ರಾಕೇಟ್ ತಂತ್ರಜ್ಞಾನವನ್ನು ಇಂದು ಇಸ್ರೋಗೆ ಬಳಕೆ ಮಾಡಲಾಗುತ್ತಿದೆ. ಇತಿಹಾಸವನ್ನು ತಿರುಚುವುದರಿಂದ ಕೆಲ ಕಾಲ ಸತ್ಯವನ್ನು ಮರೆ ಮಾಚಬಹುದು. ಹಾಗಾಗಿ ಹಿಂದುಳಿದ ವರ್ಗಗಳು ರಾಜಕೀಯ ಪ್ರಜ್ಞೆಯ ಜೊತೆಗೆ, ಇತಿಹಾಸ ಪ್ರಜ್ಞೆಯನ್ನು ಬೆಳೆಸಿಕೊಂಡು, ಮುನ್ನೆಡೆಯುವುದು ಸೂಕ್ತ ಎಂದು ನುಡಿದರು.

ಕಾಂಗ್ರೆಸ್ ಪಕ್ಷ ಯಾವತ್ತು ಜಾತಿ ಜನಸಂಖ್ಯೆಯನ್ನು ನೋಡಿ ಅಧಿಕಾರ ನೀಡಿಲ್ಲ. ದೇವರಾಜ ಅರಸು, ಧರ್ಮಸಿಂಗ್, ವೀರಪ್ಪಮೊಹಿಲಿ ಅವರುಗಳೆಲ್ಲಾ ಯೋಗ್ಯತೆಯಿಂದ ಅಧಿಕಾರ ಪಡೆದವರೇ ಹೊರತು ಜಾತಿಯ ಬಲದಿಂದಲ್ಲ ಎಂದರು.

ಕಾಂಗ್ರೆಸ್‌ಗೆ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಎಲ್ಲರಿಗೂ ರಾಜಕೀಯ ಅಧಿಕಾರವನ್ನು ನೀಡಿದೆ. ಆದರೆ ಬಿಜೆಪಿ, ಜೆಡಿಎಸ್ ಪಕ್ಷದಿಂದ ಇದು ಸಾಧ್ಯವೇ ಎಂದು ಪ್ರಶ್ನಿಸಿದರು.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗುವ ಸಮಯದಲ್ಲಿ ಅವರು ಜನಪ್ರತಿನಿಧಿಯಲ್ಲ. ಅಂದಿನ ಎಐಸಿಸಿ ಕಾರ್ಯಕಾರಿ ಮಂಡಳಿ ಸದಸ್ಯರಾಗಿದ್ದ ಕೊಲ್ಲೂರು ಮಲ್ಲಪ್ಪ ಅವರ ಸಲಹೆಯಂತೆ ಇಂದಿರಾಗಾಂಧಿ ಅವರು ಅರಸು ಅವರನ್ನು ಮುಖ್ಯಮಂತ್ರಿ ಮಾಡಿದರು. ಆದರೆ ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ, ಜೀತ ವಿಮುಕ್ತಿ ಸೇರಿದಂತೆ ಹಲವಾರು ಯೋಜನೆಗಳು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಸರು ತಂದುಕೊಟ್ಟವು. ಹಾಗೆಯೇ ಬಂಗಾರಪ್ಪ ಅವರು ಸಹ ಜಾರಿಗೆ ತಂದ ವಿಶ್ವ, ಆರಾಧನಾ, ಆಶ್ರಯ, ಕನ್ನಡ ಮಾಧ್ಯಮ ಕೃಪಾಂಕ ಇವುಗಳು ಬಡವರ ಪರವಾಗಿ ಹೆಚ್ಚು ಜನಪ್ರಿಯತೆ ಪಡೆದವು. ಈ ಎಲ್ಲಾ ನಾಯಕರು ಜನರೊಂದಿಗೆ ಬೆರತು ಕೆಲಸ ಮಾಡಿದರು. ಜನರಿಂದ ಅಂತರ ಕಾಯ್ದು ಕೊಳ್ಳಲಿಲ್ಲ. ಜನರಿಂದ ದೂರ ಇದ್ದವ ಜನನಾಯಕನಾಗಲು ಸಾಧ್ಯವೇ ಇಲ್ಲ ಎಂದು ಕೆ.ಎನ್.ರಾಜಣ್ಣ ನುಡಿದರು.

ಮೊದಲು ಹಿಂದುಳಿದ ವರ್ಗಗಳಲ್ಲಿ ಶೈಕ್ಷಣಿಕ ಪ್ರಜ್ಞೆಯ ಜೊತೆಗೆ, ರಾಜಕೀಯ ಪ್ರಜ್ಞೆಯನ್ನು ಮೂಡಿಸಲು ಇದರಿಂದ ಸಾಧ್ಯ. ನನ್ನದು ಬಡವರ ಜಾತಿ. ನಾನು ಎಲ್ಲಾ ವರ್ಗದ ಬಡವರ ಪ್ರತಿನಿಧಿ ಎಂದ ಅವರು, ಇಂದಿಗೂ ಚಿಕ್ಕಪೇಟೆಯಲ್ಲಿ ಒಂದೊತ್ತಿನ ಊಟ ಮಾಡುವ ಬಡ ಬ್ರಾಹ್ಮಣರಿದ್ದಾರೆ. ಚುನಾವಣೆಗೋಸ್ಕರ ಶ್ರೀರಾಮನ ಜಪ ಮಾಡುತ್ತಿರುವ ಪಕ್ಷದ ಕಣ್ಣಿಗೆ ಇದು ಕಾಣುವುದಿಲ್ಲವೇ?, ಇಷ್ಟೊಂದು ಅಬ್ಬರದಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ಬಿಜೆಪಿಯದ್ದೋ, ಇಲ್ಲ ಮೋದಿ ಅವರದ್ದೋ ಎಂಬುದು ಐದಾರು ತಿಂಗಳಲ್ಲಿ ಗೊತ್ತಾಗಲಿದೆ. ಜನರ ಭಾವನೆಗಳೊಂದಿಗೆ ಆಟ ಆಡುವುದನ್ನು ನಿಲ್ಲಿಸಿದಷ್ಟು ಒಳ್ಳೆಯದು ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್ ಮಾತನಾಡಿ, ಕೊಟ್ಟ ಮಾತಿಗೆ ತಪ್ಪದ, ಇಟ್ಟ ಹೆಜ್ಜೆಯನ್ನು ಹಿಂದಿಡದ, ನೇರ, ನಿಷ್ಟೂರ ನಡೆಯ ಕೆ.ಎನ್.ರಾಜಣ್ಣ ಹಿಂದುಳಿದ ವರ್ಗಗಳಿಗೆ ಹೊಸ ಆಶಾಕಿರಣವಾಗಿದ್ದಾರೆ. ಬಿಹಾರ ಸರಕಾರಕ್ಕಿಂತ ಮೊದಲೇ ೨೦೧೬ರಲ್ಲಿ ಸಿದ್ದರಾಮಯ್ಯ ಅವರು ಕಾಂತರಾಜು ಆಯೋಗ ರಚಿಸಿ, ಅರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಿದ್ದರೂ ಇದುವರೆಗೂ ಸರಕಾರ ವರದಿ ಸ್ವೀಕರಿಸಿಲ್ಲ. ಸರಕಾರ ಕೂಡಲೇ ಕಾಂತರಾಜು ವರದಿಯನ್ನು ಸ್ವೀಕರಿಸಿ, ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡಬೇಕು. ಸಂಸದ ಆನಂತಕುಮಾರ್ ಹೆಗಡೆ ಹೇಳಿಕೆ ನೋವುಂಟು ಮಾಡಿದ್ದು, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಕೇಸು ದಾಖಲಿಸುವಂತೆ ಸಲಹೆ ಮಾಡಿದರು.

ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ರಾಜಕೀಯವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿರುವ ಹಿಂದುಳಿದ ಸಮುದಾಯಗಳು ಕೆ.ಎನ್. ರಾಜಣ್ಣ ಅವರ ಆಶಯದಂತೆ ಒಗ್ಗೂಡಿ ಒಂದು ವೇದಿಕೆಗೆ ಸೇರುತ್ತಿರುವುದು ಒಳ್ಳೆಯ ಬೆಳೆವಣಿಗೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ಜಿಲ್ಲೆಯ ಹಿಂದುಳಿದ ವರ್ಗಗಳಿಗೆ ಬೆನ್ನೆಲುಬಾಗಿ ನಿಂತು, ರಾಜಕೀಯವಾಗಿ, ಅರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸಚಿವರಾದ ಕೆ.ಎನ್. ರಾಜಣ್ಣ ಮಾಡುತಿದ್ದಾರೆ. ಅಂತಹವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ಹಿಂದುಳಿದ ವರ್ಗಗಳ ಶ್ರೇಯೋಬಿವೃದ್ದಿಗೆ ಶ್ರಮಿಸಿದವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದರು.

ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್. ಮಧುಕರ್ ಹಿಂದುಳಿದ ವರ್ಗಗಳ ಒಕ್ಕೂಟದ ಹಕ್ಕೋತ್ತಾಯ ಮನವಿಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ವಿವಿಧ ಸಮಾಜದ ಮುಖಂಡರಾದ ಆಡಿಟರ್ ಆಂಜನಪ್ಪ, ಡಾ. ಪಾಪಣ್ಣ, ಗುರುಪ್ರಸಾದ್, ಪಿ. ಮೂರ್ತಿ, ವೆಂಕಟಸ್ವಾಮಿ, ಚಿ.ನಿ. ಪುರಷೋತ್ತಮ್, ಡಿ.ಎಂ. ಸತೀಶ್, ಎಂ.ಜಿ. ಶ್ರೀನಿವಾಸಮೂರ್ತಿ, ಎ.ಡಿ. ಬಲರಾಮಯ್ಯ, ಕೊಟ್ಟ ಶಂಕರ್, ಪಿ.ಎನ್. ರಾಮಯ್ಯ, ಮೈಲಪ್ಪ, ಡಾ.ಕೆ.ವಿ. ಕೃಷ್ಣಮೂರ್ತಿ, ಮಲ್ಲಸಂದ್ರ ಶಿವಣ್ಣ, ಶಾಂತಕುಮಾರ್, ಮಂಜೇಶ್, ರೂಪೇಶ್ ಕೃಷ್ಣಯ್ಯ, ನಯಾಜ್ ಅಹಮದ್, ಗುರು ಡಿ., ರಾಜು, ಧನಿಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸುಮಾರು ೩೨ ಜನ ವಿವಿಧ ಸಮುದಾಯದ ಮುಖಂಡರುಗಳಿಗೆ ಕೆ.ಎನ್. ರಾಜಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕೋಟ್...............

ಸಂಘಟನೆ ಎಂಬುದು ಒಂದು ನಿರಂತರ ಪ್ರಕ್ರಿಯೆ. ಹಾಗಾಗಿ ಎಲ್ಲಾ ಹಿಂದುಳಿದ ವರ್ಗಗಳ ದಾರ್ಶಾನಿಕ ಜಯಂತಿಗಳನ್ನು ಹಿಂದುಳಿದ ವರ್ಗಗಳ ಒಕ್ಕೂಟದಿಂದ ಆಗಸ್ಟ್ ೨೦ರ ದೇವರಾಜು ಅರಸು ಜಯಂತಿಯಂದು ದಾರ್ಶಾನಿಕರ ದಿನವಾಗಿ ಆಚರಿಸುವುದರಿಂದ ಎಲ್ಲಾ ಹಿಂದುಳಿದ ವರ್ಗಗಳನ್ನು ಒಂದು ವೇದಿಕೆಯಲ್ಲಿ ತರಲು ಸಾಧ್ಯವಾಗುತ್ತದೆ.

ಕೆ.ಎನ್. ರಾಜಣ್ಣ, ಸಹಕಾರ ಸಚಿವ