ಮನುಷ್ಯಲೋಕದ ಸಂಪರ್ಕವೇ ಇಲ್ಲದಂತೆ ಬದುಕುತ್ತಿದ್ದೇವೆ: ಕಾಯ್ಕಿಣಿ

| Published : Jan 24 2024, 02:04 AM IST

ಮನುಷ್ಯಲೋಕದ ಸಂಪರ್ಕವೇ ಇಲ್ಲದಂತೆ ಬದುಕುತ್ತಿದ್ದೇವೆ: ಕಾಯ್ಕಿಣಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ ಎದ್ದು ಮೊಬೈಲ್ ಮೂಲಕ ಗುಡ್ ಮಾರ್ನಿಂಗ್ ಹೇಳುವವರು ಎದುರಿಗೆ ಸಿಕ್ಕರೂ ಒಂದು ಸಣ್ಣ ನಗುವನ್ನು ಬೀರುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ಬೇಕಿದೆ

ಕಾರವಾರ: ಇಡಿ ಜಗತ್ತು ಇಂದು ಸೆಲ್ಫಿ ಮೋಡಿನಲ್ಲಿದೆ. ಮನುಷ್ಯ ಲೋಕದ ಸಂಪರ್ಕವೇ ಇಲ್ಲದಂತೆ ಬದುಕುತ್ತಿದ್ದೇವೆ ಎಂದು ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಅಭಿಪ್ರಾಯಿಸಿದರು.

ನಗರದ ದಿವೇಕರ್ ವಾಣಿಜ್ಯ ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯ ಕುರಿತಾದ ಲೇಖನಗಳಿರುವ ಅದಮ್ಯ ಚೇತನ ಪ್ರೊ. ಜಿ.ವಿ.ಭಟ್ ಕೃತಿಯನ್ನು ಕಾಲೇಜ್‌ನ ಸಭಾಭವನದಲ್ಲಿ ಸೋಮವಾರ ಬಿಡುಗಡೆ ಮಾಡಿ ಮಾತನಾಡಿ, ಬೆಳಗ್ಗೆ ಎದ್ದು ಮೊಬೈಲ್ ಮೂಲಕ ಗುಡ್ ಮಾರ್ನಿಂಗ್ ಹೇಳುವವರು ಎದುರಿಗೆ ಸಿಕ್ಕರೂ ಒಂದು ಸಣ್ಣ ನಗುವನ್ನು ಬೀರುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ಬೇಕಿದೆ.ಅಂತಹ ಅಪರೂಪದ ವ್ಯಕ್ತಿ ಪ್ರೊ. ಜಿ.ವಿ.ಭಟ್ ಅವರದ್ದಾಗಿತ್ತು. ಮಮತೆ ಮತ್ತು ಸಮತೆಗೆ ಮಿಗಿಲಾದದ್ದು ಯಾವುದು ಇಲ್ಲ. ಪ್ರೀತಿ, ವಿಶ್ವಾಸ ಮತ್ತು ಸಮಾನತೆಯ ಆಧ್ಯಾತ್ಮಕ್ಕಾಗಿ ನಾವು ಮಂದಿರಕ್ಕೆ ಹೋಗಬೇಕೆಂದಿಲ್ಲ. ಸಂತೆ ಮಾರುಕಟ್ಟೆಯಲ್ಲೂ ಪಡೆಯಬಹದು ಇದೊಂದು ವಿಶೇಷ ಪುಸ್ತಕವಾಗಿದೆ. ಪ್ರೀತಿಯ ಅಂತಃಕರಣದ ಮನವರಿಕೆ ಇದರಲ್ಲಿದೆ ಎಂದರು.

ಹಿರಿಯ ಪತ್ರಕರ್ತ ಜಿ.ಯು. ಭಟ್ ಮಾತನಾಡಿ, ಅದಮ್ಯ ಚೇತನ ಜಿ.ವಿ. ಭಟ್ ಅವರ ಆದರ್ಶಗಳು ಎಲ್ಲರು ಮೆಚ್ಚುವಂತದ್ದಾಗಿದೆ.ಅವರ ವ್ಯಕ್ತಿತ್ವ ಈ ಪುಸ್ತಕದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಉತ್ತಮವಾಗಿದೆ ಎಂದು ಹೇಳಿದರು.

ಕೆನರಾ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ. ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕದ ಸಂಪಾದಕ ಡಾ. ಜಿ.ವಿ. ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಸ್ತಕದ ಇನ್ನೊಬ್ಬ ಸಂಪಾದಕ ಆರ್.ಎಸ್. ಹಬ್ಬು, ಕಾಲೇಜ್‌ನ ಪ್ರಾಚಾರ್ಯ ಡಾ. ಕೇಶವ ಕೆ.ಜಿ., ದಿ.ಜಿ.ವಿ.ಭಟ್ ಅವರ ಪತ್ನಿ ಅನಸೂಯಾ ಭಟ್, ಕಾಲೇಜ್ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಮ್ತಿಯಾಜ್ ಸಯ್ಯದ್, ಕಾರ್ಯದರ್ಶಿ ಅಜಯ ಸಾಹುಕಾರ್ ಇದ್ದರು.