ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇದಕ್ಕಾಗಿ ನೀವು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇದಕ್ಕಾಗಿ ನೀವು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.ಬೇವಿನಮಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ಸುಳ್ಳುಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಸಾಲ ಮಾಡಿದೆ ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಆರ್ಥಿಕ ನಿರ್ವಹಣೆ ಕಾಯ್ದೆಯ ಮಾನದಂಡ ಮೀರಿ ನಾವು ಸಾಲ ಮಾಡಿಲ್ಲ. ಈ ಸತ್ಯವನ್ನು ಬಿಜೆಪಿ ಹೇಳುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ಬರಲಿಲ್ಲ. ಜೊತೆಗೆ ಜಿಎಸ್‌ಟಿ ಮೂಲಕ ನಮಗೆ ಬರಬೇಕಿದ್ದ ತೆರಿಗೆ ಕೇಂದ್ರದ ಅವೈಜ್ಞಾನಿಕ ನೀತಿಯಿಂದಾಗಿ ₹10000 ಕೋಟಿ ಕಡಿಮೆಯಾಯಿತು. ಆದರೂ ನಾವು ಗ್ಯಾರಂಟಿ ಯೋಜನೆ ನಿಲ್ಲಿಸಲಿಲ್ಲ. ಜೊತೆಗೆ ಅಭಿವೃದ್ಧಿ ಕೆಲಸಗಳನ್ನೂ ಮುಂದುವರೆಸಿದ್ದೇವೆ. ಹೀಗಾಗಿ ನಮ್ಮದು ನುಡಿದಂತೆ ನಡೆದ ಪಕ್ಷ. ಅಧಿಕಾರ ಇದ್ದಾಗ ಕೆಲಸ ಮಾಡದೆ ಈ ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿಗೆ ನಿಮ್ಮ ಮತ ಪಡೆಯುವ ಯೋಗ್ಯತೆ ಇಲ್ಲ. ಯೋಗ್ಯತೆ ಇಲ್ಲದವರಿಗೆ ನಿಮ್ಮ ಮತ ಕೊಡಬೇಡಿ ಎಂದರು.
ಚನ್ನಪಟ್ಟಣ, ಶಿಗ್ಗಾಂವ್, ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಯ ಎಲ್ಲಾ ಅಪಪ್ರಚಾರ ನಡುವೆಯೂ ಗೆದ್ದಿದ್ದು ಕಾಂಗ್ರೆಸ್ ಪಕ್ಷವೇ. ಈ ಚುನಾವಣೆಯಲ್ಲೂ ಎರಡೂ ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ. ಜೊತೆಗೆ 2028ಕ್ಕೂ ನಾವೇ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸೋಲುವ ಭಯದಿಂದ ಬಿಜೆಪಿಯತ್ನಾಳ್ರನ್ನು ಕರೆಸಿದೆ: ಸಿದ್ದು
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಾಗಲಕೋಟೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ಭಯದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರನ್ನೇ ಗೊಗರೆದು ಕರೆತಂದು ಪ್ರಚಾರ ಕಾರ್ಯಕ್ಕೆ ಇಳಿಸಿದ್ದಾರೆ. ಇದು ಅವರ ದ್ವಂದ್ವ ನೀತಿ. ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸ್ಥಿತಿಯಲ್ಲಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.=========================================== ಇನ್ನು ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಾರೆಂದು ತಿಳಿದು ಮುಖ್ಯಮಂತ್ರಿಯನ್ನು ಐದು ದಿನ ಪ್ರಚಾರಕ್ಕೆ ಇಳಿಸಿದ್ದಾರೆ. ಒಂದೂವರೆ ತಿಂಗಳು ಮಾತ್ರ ಸಿಎಂ ಅಧಿಕಾರದಲ್ಲಿರುತ್ತಾರೆ’ ಎಂಬ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಸೋಮಣ್ಣ ಅವರಿಗೆ ಪ್ರಚಾರ ಮಾಡಲು ಸಮಯವಿಲ್ಲ. ಬಿಜೆಪಿ ಸೋಲುತ್ತದೆ ಎಂದು ಗೊತ್ತಾಗಿರುವುದರಿಂದ ಹೆಚ್ಚು ಪ್ರಚಾರ ಮಾಡುತ್ತಿಲ್ಲ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಲು ಅವರೇನು ಕಾಂಗ್ರೆಸ್ ಹೈಕಮಾಂಡ್ ಅಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಂದು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ:ಎರಡೂ ಕಡೆ ಗೆಲುವು ನಮ್ಮದೇ:
ಉಪಚುನಾವಣೆ ಫಲಿತಾಂಶ ಸಿಎಂ ಸ್ಥಾನದ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಎರಡೂ ಕಡೆ ನಮ್ಮ ಪಕ್ಷ ಗೆಲ್ಲಲಿದ್ದು, ಪರಿಣಾಮ ಹೇಗೆ ಬೀರಲು ಸಾಧ್ಯ ಎಂದು ಪ್ರಶ್ನಿಸಿದರು.ರಾಜ್ಯದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂಬ ಯತ್ನಾಳ ಆರೋಪಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಅಲ್ಪಸಂಖ್ಯಾತರು ಈ ರಾಜ್ಯದ ನಾಗರಿಕರಲ್ಲವೇ? ಅವರ ಜನಸಂಖ್ಯೆ ಶೇ.14ರಷ್ಟಿದ್ದು ಎಲ್ಲರಿಗೂ ಅನುದಾನ ನೀಡಿದಂತೆ ಅವರಿಗೂ ನೀಡಲಾಗಿದೆ ಎಂದರು.
ಅಧಿಕಾರ ಮತ್ತು ಹಣದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಹಾಗೇನಾದರೂ ಹಣ ಮತ್ತು ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದರೆ ಅದು ಬಿಜೆಪಿ ಎಂದು ಹೇಳಿದರು.