ಸಾರಾಂಶ
ರಾಮನಗರ: ಪ್ರತಿ ಬೂತ್ ಗಳಲ್ಲಿ ಸ್ಥಳೀಯವಾಗಿ ಮುಖ ಪರಿಚಯವಿರುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಎಲ್ ಎ 2 ಗಳನ್ನಾಗಿ ನೇಮಕ ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಶಾಸಕ ಇಕ್ಬಾಲ್ ಹುಸೇನ್ ಸಲಹೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಗ್ರಾಮಾಂತರ, ಟೌನ್ ಹಾಗೂ ಹಾರೋಹಳ್ಳಿ- ಮರಳವಾಡಿ ಬ್ಲಾಕ್‌ಗಳ ಎಲ್ಲ ಬೂತ್‌ಗಳಲ್ಲಿ ಪಕ್ಷದ ಏಜೆಂಟ್ (ಬಿಎಲ್ ಎ- 2) ನೇಮಕ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾಧ್ಯಕ್ಷರ ಸಲಹೆ, ಮಾರ್ಗದರ್ಶನದಂತೆ ಪಕ್ಷ ಸಂಘಟನೆ ಮಾಡಲು ನಾವು ತಯಾರಿ ದ್ದೇವೆ. ವಿಧಾನಸಭಾ ಚುನಾವಣೆಗೂ ಮುನ್ನಾ ಬೂತ್ ಮಟ್ಟದ ಏಜೆಂಟ್ ನೇಮಕ ಮಾಡಲಾಗಿತ್ತು. ಆದರೆ ಅವರಿಗೆ ಚುನಾವಣೆ ನಂತರ ಸಭೆ ನಡೆಸಿ ಅವರ ಮುಖಾಂತರ ಪಕ್ಷ ಸಂಘಟಿಸುವ ಕೆಲಸ ಮಾಡಿಲ್ಲ. ಅವರಿಗೆ ಸೂಕ್ತ ಸ್ಥಾನ ನೀಡಿ ಪಕ್ಷ ಸಂಘಟಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸದೃಢ ಸಂಘಟನೆ ಮಾಡಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ರೂಪಿಸಿದ ಎಲ್ಲ ಯಶಸ್ವಿ ಹೋರಾಟಗಳು ಜನರು ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತು, ಅಧಿಕಾರಕ್ಕೆ ಬಂದು ನಿಮ್ಮಗಳ ಸೇವೆ ಮಾಡಲು ಸಾಧ್ಯವಾಯಿತು. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಗ್ರಾಪಂನಲ್ಲಿ 8 ಕೋಟಿ ರು. ವೆಚ್ಚದ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಡಿಸೆಂಬರ್ ನಲ್ಲಿ ಗ್ರಾಪಂ ಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹಾಗಾಗಿ ತಳ ಮಟ್ಟದಲ್ಲಿ ಮುಖಂಡರು ಜವಾಬ್ದಾರಿ ತೆಗೆದುಕೊಂಡು ಎಲ್ಲರ ವಿಶ್ವಾಸ ಪಡೆದು ಸಂಘಟನೆ ಮಾಡಬೇಕು. ನಿಮಗೆ ಶಕ್ತಿ ತುಂಬಲು ನಾವು ಸಿದ್ದರಿದ್ದೇವೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಮಾತನಾಡಿ, ಗ್ರಾಪಂ, ತಾಪಂ, ಜಿಪಂ ಚುನಾವಣೆಗಳು ಒಟ್ಟಾಗಿ ಎದುರಾಗುವ ಸಾಧ್ಯತೆಯಿದೆ. ಪ್ರತಿ ಗ್ರಾಪಂ ವ್ಯಾಪ್ತಿ ಯಲ್ಲಿ ಬರುವ ಬೂತ್ ಗಳಲ್ಲಿ ಏಜೆಂಟ್ ನೇಮಕ ಮಾಡಲು ಜವಾಬ್ದಾರಿ ವಹಿಸುವುದು. ಒಂದು ವೇಳೆ ಈಗಾಗಲೇ ನೇಮಕ ಮಾಡಿದ್ದರೆ ಅಥವಾ ಪುನರ್ ನೇಮಕ ಮಾಡಿ ಚುನಾವಣೆ ಎದುರಿಸಲು ಬೇರು ಮಟ್ಟದಿಂದ ಕಾರ್ಯಕರ್ತರು, ಮುಖಂಡರನ್ನು ಅಣಿಗೊಳಿಸಿ ಎಂದು ಬ್ಲಾಕ್ ಅಧ್ಯಕ್ಷರಿಗೆ ಸೂಚನೆ ನೀಡಿದರು.
ಮತಚೋರಿ ಸಹಿ ಅಭಿಯಾನ:ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಎನ್ ಡಿಎ ನಾಯಕರ ಕುತಂತ್ರದಿಂದ ಮತಗಳ್ಳತನ (ಮತಚೋರಿ) ನಡೆದಿರುವುದರ ವಿರುದ್ದ ಧ್ವನಿ ಎತ್ತಿದ್ದು, ಅದನ್ನು ಬೆಂಬಲಿಸಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಸಹಿ ಅಭಿಯಾನ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಕನಕಪುರ ತಾಲೂಕು ಹೊರತುಪಡಿಸಿ ಮತ್ಯಾವ ತಾಲೂಕುಗಳಲ್ಲಿಯೂ ಸಹಿ ಅಭಿಯಾನ ನಡೆದಿಲ್ಲ. ಕೂಡಲೇ ಉಳಿದ ತಾಲೂಕುಗಳಲ್ಲಿ ಶೀಘ್ರವಾಗಿ ಸಹಿ ಅಭಿಯಾನ ನಡೆಸಿ ಕೆಪಿಸಿಸಿಗೆ ವರದಿ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಬಿ.ಚೇತನ್ ಕುಮಾರ್, ವಿ.ಎಚ್.ರಾಜು, ಅಶೋಕ್, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ನಗರಸಭೆ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಅಜ್ಮತ್, ಬೈರೇಗೌಡ, ನಿಜಾಂ ಷರೀಫ್, ಅಣ್ಣು, ಮುಖಂಡರಾದ ರೇವಣ್ಣ, ಅಮ್ಜದ್ ಸಾಹುಕಾರ್, ಗುರುಪ್ರಸಾದ್ ಉಪಸ್ಥಿತರಿದ್ದರು.6ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗ್ರಾಮಾಂತರ, ಟೌನ್ ಹಾಗೂ ಹಾರೋಹಳ್ಳಿ- ಮರಳ ವಾಡಿ ಬ್ಲಾಕ್‌ಗಳ ಎಲ್ಲ ಬೂತ್ ಗಳಲ್ಲಿ ಪಕ್ಷದ ಏಜೆಂಟ್ (ಬಿಎಲ್ ಎ- 2) ನೇಮಕ ಸಂಬಂಧ ನಡೆದ ಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿದರು.