ಬರ ಪರಿಹಾರಕ್ಕಾಗಿ ರೈತರೊಂದಿಗೆ ನಾವಿದ್ದೇವೆ

| Published : Apr 03 2024, 01:38 AM IST / Updated: Apr 03 2024, 09:03 AM IST

ಸಾರಾಂಶ

 ಬರ ಪರಿಹಾರ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಶುರುವಾದರೂ ರೈತರಿಗೆ ಸರಿಯಾಗಿ ತಲುಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ರೈತರೊಂದಿಗೆ ನಾವಿದ್ದೇವೆ ಎಂಬ ವಿನೂತನ ಅಭಿಯಾನ ಆರಂಭಿಸಿದೆ

ಧಾರವಾಡ:  ಕಳೆದ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದೆ. ಬರ ಪರಿಹಾರ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಶುರುವಾದರೂ ರೈತರಿಗೆ ಸರಿಯಾಗಿ ತಲುಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ರೈತರೊಂದಿಗೆ ನಾವಿದ್ದೇವೆ ಎಂಬ ವಿನೂತನ ಅಭಿಯಾನ ಶುರು ಮಾಡಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲೆಯ ರೈತರಿಗೆ ಕುಡಿಯುವ ನೀರು, ಜಾನುವಾರು ಮೇವು ಲಭ್ಯತೆಯ ಬಗ್ಗೆ ಮಾಹಿತಿ ನೀಡಲು ಮತ್ತು ಬರ ಪರಿಹಾರ ಪೂರಕ ಸೌಲಭ್ಯ ದೊರಕಿಸಲು ಅನುಕೂಲವಾಗುವಂತೆ ಕಂದಾಯ ಇಲಾಖೆ, ಪಶುಪಾಲನೆ ಇಲಾಖೆ ಹಾಗೂ ಪಂಚಾಯತ್‌ ರಾಜ್‌ ಇಲಾಖೆಗಳ ಸಹಯೋಗದಲ್ಲಿ ರೈತರಿಗೆ ಸರ್ಕಾರ ಮತ್ತು ಜಿಲ್ಲಾಡಳಿತವು ನಿಮ್ಮ ನೆರವಿಗೆ ಇದೆ ಎಂಬುದನ್ನು ತಿಳಿಸಲು ರೈತರೊಂದಿಗೆ ನಾವಿದ್ದೇವೆ.. ಎಂಬ ಅಭಿಯಾನ ಆರಂಭಿಸಿದೆ.

ಪ್ರತಿ ವಾರ ದನಗಳ ಸಂತೆ ಧಾರವಾಡ (ಮಂಗಳವಾರ), ಹುಬ್ಬಳ್ಳಿ (ಶನಿವಾರ), ನವಲಗುಂದ (ಬುಧವಾರ), ನೂಲ್ವಿ (ಗುರುವಾರ), ಕಲಘಟಗಿ (ಮಂಗಳವಾರ) ಮತ್ತು ಕುಂದಗೋಳದಲ್ಲಿ (ಸೋಮವಾರ) ಜರುಗುತ್ತದೆ. ಇಲ್ಲಿಗೆ ಬರುವ ರೈತರಿಗೆ ರೈತರೊಂದಿಗೆ ನಾವಿದ್ದೇವೆ... ಎಂಬ ಅಭಿಯಾನ ನಡೆಯುತ್ತಿದೆ. ಸಹಾಯವಾಣಿ ಹಾಗೂ ಇತರ ಸೌಲಭ್ಯಗಳ ಕುರಿತು ರೈತರಿಗೆ ಧ್ವನಿವರ್ಧಕ ಬಳಸಿ, ಪೋಸ್ಟರ್, ಬ್ಯಾನರ್ ಅಳವಡಿಕೆ, ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಅಭಿಯಾನದ ಭಾಗವಾಗಿ ಮಂಗಳವಾರ ಇಲ್ಲಿಯ ದನದ ಮಾರುಕಟ್ಟೆಗೆ ತೆರಳಿದ ಉಪ ವಿಭಾಗಾಧಿಕಾರಿ ಶಾಲಂ ಹುಸೇನ, ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ಜಾಗೃತಿ ಮೂಡಿಸಿದರು. ರೈತರ ನೆರವಿಗೆ ತಹಸೀಲ್ದಾರ್‌ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ತಮಗೆ ಮೇವು, ನೀರಿನ ಕೊರತೆ ಉಂಟಾದಲ್ಲಿ ತಕ್ಷಣ ಕರೆ ಮಾಡಿ, ಪರಿಹರಿಸುತ್ತೇವೆ. ಧಾರವಾಡದ ಮಾಧನಬಾವಿ ಸರ್ಕಾರಿ ಗೋಶಾಲೆ ಮತ್ತು ಧಾರವಾಡ ಎಪಿಎಂಸಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಪ್ರತಿ ಕೆಜಿ ಮೇವಿಗೆ ₹ 2ರ ದರದಲ್ಲಿ ಗರಿಷ್ಠ 50 ಕೆಜಿ ಮೇವನ್ನು ಒಬ್ಬ ರೈತನಿಗೆ ನೀಡಲಾಗುತ್ತದೆ. ರೈತರ ಕಷ್ಟಗಳಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಸದಾ ಸ್ಪಂದಿಸಿ, ಬೆನ್ನಿಗಿದೆ ಎಂದು ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ ಧ್ವನಿವರ್ಧಕ ಬಳಸಿ ಮಾತನಾಡಿದರು.

ರೈತರು ಬರ ಪರಸ್ಥಿತಿಯಿಂದ ಹೆದರುವ ಅಗತ್ಯವಿಲ್ಲ. ಸರ್ಕಾರ, ಜಿಲ್ಲಾಡಳಿತ ನಿಮ್ಮ ನೆರವಿಗಿದೆ. ರೈತರು ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುತ್ತಾರೆ ಎಂದು ಉಪವಿಭಾಗಾಧಿಕಾರಿ ಶಾಲಂ ಹುಸೇನ ಮಾಹಿತಿ ನೀಡಿದರು.

ರೈತರಿಗೆ ಬರ ಪರಿಹಾರ ಕಾಮಗಾರಿ ಬಗ್ಗೆ ಮಾಹಿತಿ ನೀಡಿ ಧೈರ್ಯ ತುಂಬಲು ಈ ಯೋಜನೆ ಜಾರಿ ಮಾಡಲಾಗಿದೆ. ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಮೂಲಕ ಗ್ರಾಮಗಳಲ್ಲಿ ಡಂಗುರ ಸಾರಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಮೇವು ಬ್ಯಾಂಕ್‌ಗಳಿಂದ ಈಗಾಗಲೇ 38 ರೈತರು 24.02 ಟನ್ ಮೇವು ಖರೀದಿಸಿದ್ದಾರೆ. ಮೇವು ಬ್ಯಾಂಕ್‌ಗಳಲ್ಲಿ ಒಟ್ಟು ಸಂಗ್ರಹಿತ 47.16 ಟನ್ ಮೇವಿನಲ್ಲಿ ಇನ್ನೂ 23.14 ಟನ್ ಮೇವು ಮಾರಾಟಕ್ಕೆ ಲಭ್ಯವಿದೆ. ರೈತರು ಮೇವಿಗಾಗಿ ಪರದಾಡುವ ಪ್ರಶ್ನೆಯೇ ಇಲ್ಲ. ಜೊತೆಗೆ ಕುಡಿಯುವ ನೀರಿನ ಲಭ್ಯತೆಯೂ ಇದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದ್ದಾರೆ.