ಬಸ್ ನಿಲ್ದಾಣ, ವಿ.ವಿ. ರಸ್ತೆ, ಹಾಸನ ರಸ್ತೆಯಲ್ಲಿ ಸಂಚರಿಸಿದ ಅಕ್ಕಪಡೆ ಸಾರ್ವಜನಿಕರನ್ನು ಆಕರ್ಷಿಸಿತಲ್ಲದೆ, ಅಕ್ಕಪಡೆಯ ಬಗ್ಗೆ ಪೂರ್ಣ ಮಾಹಿತಿ ಸಾಮಾನ್ಯರಿಗಿಲ್ಲದ ಕಾರಣ ಹಲವರಲ್ಲಿ ಇದೇನು ಪೊಲೀಸರ ಹೊಸ ಜೀಪ್ ಎನ್ನುವ ಚರ್ಚೆಗೆ ಕಾರಣವಾಯಿತಲ್ಲದೆ, ಇದರ ಬಗ್ಗೆ ತಿಳಿದು ಸರ್ಕಾರದ ಕ್ರಮ ಮಹಿಳೆಯರಿಗೆ ರಕ್ಷಣೆ ನೀಡಲು ಉತ್ತಮ ಯೋಜನೆಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಅಕ್ಕಪಡೆ ಯೋಜನೆಯ ಹಿನ್ನೆಲೆ ಪಟ್ಟಣದ ಬಸ್ ನಿಲ್ದಾಣ ಮತ್ತು ಇತರೆಡೆಗಳಲ್ಲಿ ಅಕ್ಕಪಡೆ ಯಿಂದ ಮಹಿಳೆಯರನ್ನು ಆಕರ್ಷಿಸಿ ಭದ್ರತೆ ಹಾಗೂ ಸಾಮಾಜಿಕ ಜವಾಬ್ದಾರಿ, ಮಹಿಳೆಯರ ಹೆಣ್ಣು ಮಕ್ಕಳ ರಕ್ಷಣೆ, ಸರಗಳ್ಳರ ಬಗ್ಗೆ ಎಚ್ಚರಿಕೆ ಕುರಿತಂತೆ ಮಾಹಿತಿ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಿಯಾನ ನಡೆಸಲಾಯಿತು.

ಆಕರ್ಷಿಕ ಗುಲಾಬಿ ಮಿಶ್ರಿತ ಬಿಳಿ ಬಣ್ಣದ ಜೀಪ್ ನಲ್ಲಿ ಆಗಮಿಸಿದ ಪೊಲೀಸ್ ಇಲಾಖೆಯ ಅಕ್ಕಪಡೆಯ ಸಿಬ್ಬಂದಿ ಬಸ್ ನಿಲ್ದಾಣ ಮತ್ತು ಪಟ್ಟಣದ ವಿವಿಧೆಡೆ ತೆರಳಿ ಜನತೆಯಲ್ಲಿ ಅದರಲ್ಲೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ತಮ್ಮ ಸಮಸ್ಯೆಗಳೆನೇ ಇದ್ದರೂ ನಮ್ಮ ಗಮನಕ್ಕೆ ತನ್ನಿ ಎಂದು ಹತ್ತು ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಂಡು ಮಾಹಿತಿ ಪಡೆದರು.

ಬಸ್ ನಿಲ್ದಾಣ, ವಿ.ವಿ. ರಸ್ತೆ, ಹಾಸನ ರಸ್ತೆಯಲ್ಲಿ ಸಂಚರಿಸಿದ ಅಕ್ಕಪಡೆ ಸಾರ್ವಜನಿಕರನ್ನು ಆಕರ್ಷಿಸಿತಲ್ಲದೆ, ಅಕ್ಕಪಡೆಯ ಬಗ್ಗೆ ಪೂರ್ಣ ಮಾಹಿತಿ ಸಾಮಾನ್ಯರಿಗಿಲ್ಲದ ಕಾರಣ ಹಲವರಲ್ಲಿ ಇದೇನು ಪೊಲೀಸರ ಹೊಸ ಜೀಪ್ ಎನ್ನುವ ಚರ್ಚೆಗೆ ಕಾರಣವಾಯಿತಲ್ಲದೆ, ಇದರ ಬಗ್ಗೆ ತಿಳಿದು ಸರ್ಕಾರದ ಕ್ರಮ ಮಹಿಳೆಯರಿಗೆ ರಕ್ಷಣೆ ನೀಡಲು ಉತ್ತಮ ಯೋಜನೆಯಾಗಿದೆ ಎಂದು ಪ್ರಶಂಸಿದರು.

ಮಹಿಳಾ ಮುಖ್ಯಪೇದೆ ಪಲ್ಲವಿ, ವಾಹನ ಚಾಲಕ ನಜೀರ್ ಹಾಗೂ ಸಿಬ್ಬಂದಿಗಳಾದ ಭವಾನಿ ಮತ್ತು ಪೂರ್ಣಿಮಾ ಎಲ್ಲಡೆ ಸಂಚರಿಸಿ ಮಹಿಳೆಯರಿಂದ ತಮ್ಮ ಕರ್ತವ್ಯ ಏನು, ತಾವು ಕಾರ್ಯನಿರ್ವಹಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿನೀಡಿ ನಿಮಗಾಗಿ ನಾವಿದ್ದು ನಮ್ಮ ಬಳಿ ತಮ್ಮ ಏನೆ ಸಮಸ್ಯೆಗಳಿದ್ದರೂ ಹೇಳಿಕೊಳ್ಳಿ ಅದಕ್ಕೆ ಪರಿಹಾರ ಸೂಚಿಸುವುದಾಗಿ ಧೈರ್ಯ ತುಂಬಿದರು.

ಯಾವುದೆ ಸಂದರ್ಭದಲ್ಲಿ ರಕ್ಷಣೆಗಾಗಿ ಮಹಿಳಾ ಸಹಾಯವಾಣಿ 181, ತುರ್ತು ಸಹಾಯವಾಣಿ 112, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡುವಂತೆ ಮಾಹಿತಿ ನೀಡಿದ ಸಿಬ್ಬಂದಿ, ಈಗ ವಾರಕ್ಕೆ ಒಮ್ಮೆ ಒಂದು ತಾಲೂಕಿಗೆ ಭೇಟಿ ಮಹಿಳೆಯರಿಗೆ ಮಾಹಿತಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಒಂದು ತಂಡ ರಚನೆಯಾಗಲಿದೆ ಎಂಬ ಪ್ರಾಥಮಿಕ ಮಾಹಿತಿ ನೀಡಿದರು.

ಸಂತೆ, ದೇವಸ್ಥಾನ, ಜಾತ್ರೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವಂತೆ ಅಕ್ಕಪಡೆ ಸಿಬ್ಬಂದಿಗೆ ಸೂಚಿಸಲಾಗಿದೆ. ಪಡೆಗೆ ಪ್ರತ್ಯೇಕ ವಾಹನದ ಸೌಲಭ್ಯವಿದ್ದು, ಅದರಲ್ಲಿ ಪೊಲೀಸ್ ಇಲಾಖೆಯ ವಾಹನ ಚಾಲಕ ಹಾಗೂ ಮಹಿಳಾ ಪೊಲೀಸ್ ಪೇದೆ ಇರುತ್ತಾರೆ ಎಂದು ತಿಳಿಸಿದರು.

ಮಹಿಳೆಯರು ಮಾತನಾಡಿ, ಸರ್ಕಾರ ಮಹಿಳೆಯರ, ಹೆಣ್ಣುಮಕ್ಕಳ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಅಕ್ಕಪಡೆ ರಚನೆ ಮಾಡಿರುವುದು ನಮ್ಮಂತಹ ಸಾಮಾನ್ಯ ಮಹಿಳೆಯರಿಗೆ ನೈತಿಕವಾಗಿ ಧೈರ್ಯ ತುಂಬುವುದಾಗಿದೆ ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸುವುದಾಗಿ ಹೇಳಿದರು.