ಮನರೇಗಾ ಅಂತಹ ಉತ್ತಮ ಯೋಜನೆಯನ್ನು ಹಾಳು ಮಾಡಿ ಜನರ ಹಕ್ಕುಗಳನ್ನು ಕಿತ್ತುಕೊಂಡರೆ ರಾಜ್ಯ ರಾಜ್ಯ ಸರ್ಕಾರ ಸುಮ್ಮನಿರಲು ಆಗುವುದಿಲ್ಲ. ಹೀಗಾಗಿ ಅಧಿವೇಶನದ ಮೂಲಕ ಅರಿವು, ಜಾಗೃತಿ ಮೂಡಿಸಿ ಮನರೇಗಾ ಪುನರ್‌ಸ್ಥಾಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ .ಪಾಟೀಲ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಮನರೇಗಾ ಅಂತಹ ಉತ್ತಮ ಯೋಜನೆಯನ್ನು ಹಾಳು ಮಾಡಿ ಜನರ ಹಕ್ಕುಗಳನ್ನು ಕಿತ್ತುಕೊಂಡರೆ ರಾಜ್ಯ ರಾಜ್ಯ ಸರ್ಕಾರ ಸುಮ್ಮನಿರಲು ಆಗುವುದಿಲ್ಲ. ಹೀಗಾಗಿ ಅಧಿವೇಶನದ ಮೂಲಕ ಅರಿವು, ಜಾಗೃತಿ ಮೂಡಿಸಿ ಮನರೇಗಾ ಪುನರ್‌ಸ್ಥಾಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ .ಪಾಟೀಲ್‌ ಹೇಳಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ವಿಬಿ ಜಿ ರಾಮ್‌ ಜಿ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷದ ಹಾದಿ ತುಳಿದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು.

ಒಕ್ಕೂಟ ವ್ಯವಸ್ಥೆಯೊಳಗೆ ರಾಜ್ಯದ ಜನರ ಹಕ್ಕುಗಳನ್ನು ಕಿತ್ತುಕೊಂಡರೆ ಸರ್ಕಾರ ಸುಮ್ಮನಿರಲಾಗುವುದಿಲ್ಲ. ನಾವು ಅಧಿವೇಶನ ಕರೆದು ಅರಿವು, ಜಾಗೃತಿ ಮೂಡಿಸಿ ಕೇಂದ್ರದ ವಿರುದ್ಧ ಒತ್ತಡ ತರದೆ ಇರಲಾಗುವುದಿಲ್ಲ. ಎಂಜಿ-ನರೇಗಾ ಯೋಜನೆ ಮರುಸ್ಥಾಪಿಸಲು ಒತ್ತಡ ತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಆರೇಳು ರಾಜ್ಯಗಳಿಂದ ವಿರೋಧ:ಕೇವಲ ನಮ್ಮ ರಾಜ್ಯ ಮಾತ್ರವಲ್ಲ ಆರೇಳು ರಾಜ್ಯಗಳು ತಮ್ಮ ಸ್ಪಷ್ಟ ನಿಲುವು ಹಾಗೂ ಅಸಮಾಧಾನವನ್ನು ಹೊರಹಾಕಿವೆ. ಪಂಜಾಬ್, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಧ್ವನಿ ಎತ್ತಿವೆ.

ಎಂ-ನರೇಗ ಕಾಯ್ದೆಯಡಿ ಕೇವಲ ಕೆಲಸ ಕೊಡುವುದು ಮಾತ್ರವಲ್ಲ, ಫಲಾನುಭವಿಗೆ ಕೆಲಸ ನೀಡಲಾಗದಿದ್ದರೆ ಉದ್ಯೋಗ ಭತ್ಯೆಯನ್ನು ನೀಡಬಹುದಿತ್ತು. ಪಂಚಾಯತಿಗಳಿಗೆ ಕೆಲಸಗಳ ಬಗ್ಗೆ ತೀರ್ಮಾನಿಸುವ ಹಕ್ಕು ಇತ್ತು.

ಹೊಸ ಕಾಯ್ದೆಯಡಿ ಪಂಚಾಯತಿಗಳಿಗೆ ಅಧಿಕಾರವಿಲ್ಲ. ಪಂಚಾಯತಿಗಳ ವ್ಯಾಪ್ತಿಗೂ ಬರುವುದಿಲ್ಲ. ಕೇಂದ್ರ ಸರ್ಕಾರವೇ ಎಲ್ಲಿ ಕಾಮಗಾರಿ ನಡೆಯಬೇಕೆಂದು ನಿರ್ಧರಿಸಲಿದೆ. ಇದು ವಿಕೇಂದ್ರೀಕರಣ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಿದಂತೆ ಎಂದು ಎಚ್.ಕೆ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಜತೆಗೆ, ಗ್ರಾಮೀಣ ಭಾಗದಲ್ಲಿ ಆಸ್ತಿಯನ್ನು ಸೃಜಿಸಲು ಅವಕಾಶವಿತ್ತು. ಇದರಡಿ ಕೊಟ್ಟಿಗೆ ನಿರ್ಮಾಣ, ಕೃಷಿ ಹೊಂಡ, ಆಟದ ಮೈದಾನ, ಕಣ ನಿರ್ಮಾಣದಂತಹ ಹಲವು ಆಸ್ತಿ ಸೃಜನೆ ಕೆಲಸಗಳನ್ನು ಕಾರ್ಮಿಕರು ಮಾಡಿಕೊಳ್ಳುತ್ತಿದ್ದರು. ಅದನ್ನು ರದ್ದುಪಡಿಸಲಾಗಿದೆ ಎಂದರು.

ಲೆಕ್ಕಪರಿಶೋಧನೆಯಲ್ಲಿ ಅವ್ಯವಹಾರ ಪತ್ತೆಯಾಗಿದೆ ಎಂಬ ಆರೋಪಕ್ಕೆ, ನಮ್ಮ ರಾಜ್ಯದಲ್ಲಿ ಲೆಕ್ಕ ಪರಿಶೋಧನೆಯ ಉದ್ದೇಶವೇ ಅವ್ಯವಹಾರಗಳನ್ನು ಪತ್ತೆ ಹಚ್ಚಬೇಕೆನ್ನುವುದು. ರಾಜ್ಯದಲ್ಲಿ ಈ ಬಗ್ಗೆ ಕ್ರಮವನ್ನೂ ಕೈಗೊಳ್ಳಲಾಗಿದೆ. ಮೋದಿಯವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನರೇಗಾ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದ್ದರು. ಮುಂದಿನ 12 ವರ್ಷಗಳಲ್ಲಿ ಇದೇ ಯೋಜನೆಯನ್ನು ಹೊಗಳಿದ್ದರು. ಆದರೆ ರಾಜ್ಯ ಬಿಜೆಪಿಯವರು ಜನರಿಗೆ ಅನ್ಯಾಯ ಮಾಡುವ ಕಾನೂನು ಒಪ್ಪಬಾರದಿತ್ತು ಎಂದು ತಿರುಗೇಟು ನೀಡಿದರು.

ಕೇಂದ್ರ ಸರ್ಕಾರವು ರಾಮ್‌ ಜಿ ಹೆಸರಿನಲ್ಲಿ ಭಾವನಾತ್ಮಕ ಅಂಶದಡಿ ಆಶ್ರಯ ಪಡೆಯುತ್ತಿರುವುದು ದುರದೃಷ್ಟಕರ. ಇದರಲ್ಲಿ ರಾಮ್ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನಿಸಿದರು.---

ಬಾಕ್ಸ್....

ಸಂಪುಟ ಸಭೆಯಲ್ಲಿ 1 ಗಂಟೆ ಪಿಪಿಟಿ

ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ದಿ ಕಾರ್ಯದರ್ಶಿ ಸಮೀರ್ ಶುಕ್ಲಾ ಅವರು ಮ-ನರೇಗಾ ಹಾಗೂ ವಿಬಿಜಿ ರಾಮ್ ಜಿ ಯೋಜನೆಗಳ ನಡುವಿನ ವ್ಯತ್ಯಾಸವನ್ನು 1 ಗಂಟೆ ಕಾಲ ಪಿಪಿಟಿ ಮೂಲಕ ವಿವರಿಸಿದರು. ಇದೇ ವೇಳೆ ಅಧಿವೇಶನದಲ್ಲಿ ಮ-ನರೇಗಾ ಯೋಜನೆಯನ್ನು ಸಮರ್ಥಿಸಿ ವಿಬಿಜಿ ರಾಮ್‌ ಜಿ ಲೋಪಗಳನ್ನು ಎತ್ತಿ ತೋರಬೇಕು. ಇದಕ್ಕಾಗಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಶರಣ್‌ಪ್ರಕಾಶ್ ಪಾಟೀಲ್‌, ದಿನೇಶ್ ಗುಂಡೂರಾವ್ ಸಜ್ಜಾಗಬೇಕು ಎಂದು ಸಂಪುಟದಲ್ಲಿ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.