ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮೈಕ್ರೋ ಫೈನಾನ್ಸ್‌ಗಳು ನಿಯಮ ಉಲ್ಲಂಘನೆ ಮಾಡಿ ಬಡವರಿಗೆ ಅನವಶ್ಯಕವಾಗಿ ತೊಂದರೆ ನೀಡಿ ಹಣ ವಸೂಲಿಮಾಡುವ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದರೆ ಸಹಿಸಲ್ಲ. ಅಧಿಕಾರಿಗಳು ತಕ್ಷಣ ಅಂತವರ ಮೇಲೆ ಕ್ರಮ ಜರುಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ತಡೆಗಟ್ಟುವ ಕುರಿತು ಅಧಿಕಾರಿಗಳಿಗೆ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಷ್ಟು ಮೈಕ್ರೋ ಫೈನಾನ್ಸ್‌ಗಳು ನೋಂದಣಿ ಆಗಿವೆ, ಆಗದೆ ಇರುವವು ಎಷ್ಟು, ಅವುಗಳು ಕಾನೂನು ಚೌಕಟ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆಯಬೇಕು. ಇಲ್ಲಿಯವರೆಗೆ ಈ ಕುರಿತು ಯಾವುದಾದರೂ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದರೆ ಮಾಹಿತಿ ನೀಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.ಕೆಲವೊಂದು ಫೈನಾನ್ಸ್‌ಗಳು ನಿಯಮ ಉಲ್ಲಂಘನೆ ಮಾಡಿ ಹಣ ವಸೂಲಿ ಹಾಗೂ ದಿನದ ಬಡ್ಡಿ ಹಾಕುವವರು ಇದ್ದಾರೆ. ಅಂಥವರ ಮೇಲೆ ಒಂದು ಕಣ್ಣು ಇಡಿ. ಇದು ವಿಶೇಷವಾಗಿ ನೀರಾವರಿ ಭಾಗದ ಗಂಗಾವತಿ. ಕಾರಟಗಿ ಸೇರಿದಂತೆ ಇತರೆ ಕಡೆ ಹೆಚ್ಚಾಗಿ ಕಂಡು ಬರುತ್ತದೆ. ವ್ಯಾಪಾರ ವಹಿವಾಟಿಗೆ ಬ್ಯಾಂಕ್ ಮತ್ತು ಫೈನಾನ್ಸ್‌ಗಳು ಬೇಕು ಆದರೆ ಅವು ತಮ್ಮ ಇತಿಮಿತಿ ಹಾಗೂ ನಿಯಮ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಬಡವರಿಗೆ ತೊಂದರೆ ನೀಡಿ ಹಣ ವಸೂಲಿ ಮಾಡುವ ಫೈನಾನ್ಸ್‌ಗಳಿಗೆ ಎಚ್ಚರಿಕೆ ನೀಡಬೇಕೆಂದು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಇಂಥ ಯಾವುದೇ ಪ್ರಕರಣಗಳು ಕಂಡು ಬರಬಾರದು. ಫೈನಾನ್ಸ್‌ಗಳಿಂದ ಕಿರುಕುಳ ಪ್ರಕರಣ ವರದಿಯಾದಲ್ಲಿ ಅದನ್ನು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಒಂದು ವೇಳೆ ಕಿರುಕುಳ ನೀಡುತ್ತಿರುವುದು ನಿಜ ಎಂದು ಕಂಡು ಬಂದರೆ ಅಂತವುಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕೆಂದರು.ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಸಾರ್ವಜನಿಕರು ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆಯುವ ಮುಂಚೆ ಫೈನಾನ್ಸ್‌ಗಳ ಬಡ್ಡಿದರ, ಇಎಂಐ ಮತ್ತು ಮರು ಪಾಯತಿ ನಿಯಮಗಳ ಮಾಹಿತಿಯನ್ನು ಮೊದಲು ಸಂಪೂರ್ಣವಾಗಿ ತಿಳಿದುಕೊಂಡ ನಂತರ ತಮಗೆ ಸರಿ ಅನಿಸಿದಾಗ ಮಾತ್ರ ಅವರಿಂದ ಸಾಲ ಪಡೆಯಬೇಕು ಮತ್ತು ತಮಗೆ ಎಷ್ಟು ಬೇಕು ಅಷ್ಟನ್ನೆ ಪಡೆಯಬೇಕು. ತಮ್ಮ ಸಾಲ ಮರುಪಾವತಿ ಮಾಡಲು ಅನುಕೂಲಕರವಾಗುವ ರೀತಿಯಲ್ಲಿ ಇದ್ದಾಗ ಮಾತ್ರ ಅದನ್ನು ಹಿಂದಿರುಗಿಸಲು ಸಾಧ್ಯ. ಯಾವುದೇ ಫೈನಾನ್ಸ್ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾದಾಗ ಅವರು ತಮ್ಮ ನಿಯಮಗಳು ಪಾಲನೆ ಮಾಡಿದ್ದಾರೆಯೇ ಹಾಗೂ ಅವರ ಮೈಕ್ರೋ ಫೈನಾನ್ಸ್‌ಗಳ ನಿಯಮ ಏನಿವೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡುವ ಕೆಲಸ ಮೊದಲು ಮಾಡಬೇಕು ಅಂದಾಗ ನಿಜವಾದ ಮಾಹಿತಿ ತಮಗೆ ಸಿಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ ಕುಮಾರ್, ಲೀಡ್ ಬ್ಯಾಂಕ್ ಮಾನೇಜರ್ ವೀರೇಂದ್ರ ಕುಮಾರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಸೀಲ್ದಾರರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರಿದ್ದರು.