ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ ಸಂಬಂಧ ಕಬ್ಬನ್‌ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಬುಧವಾರ ವಿಚಾರಣೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ ಸಂಬಂಧ ಕಬ್ಬನ್‌ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಬುಧವಾರ ವಿಚಾರಣೆ ನಡೆಸಿದೆ.

ನೋಟಿಸ್ ಹಿನ್ನೆಲೆಯಲ್ಲಿ ನಗರದ ಸಿಐಡಿ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ಕೆಎಸ್‌ಸಿಎ ಕಾರ್ಯದರ್ಶಿ ಆಗಿದ್ದ ಶಂಕರ್‌, ಖಜಾಂಚಿಯಾಗಿದ್ದ ಜಯರಾಮ್‌ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಎ.ಕೆ.ಗಿರೀಶ್ ಹಾಜರಾಗಿದ್ದರು. ಈ ಮೂವರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಸಿಐಡಿ ಹೇಳಿಕೆ ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ತಮ್ಮ ಮೇಲಿನ ಆರೋಪವನ್ನು ಈ ಮೂವರೂ ಬಲವಾಗಿ ನಿರಾಕರಿಸಿದ್ದಾರೆ. ನಾವು ಕಾರ್ಯಕ್ರಮ ಆಯೋಜಕರಲ್ಲ. ಜನರು ಸೇರಲು ಸರ್ಕಾರವೇ ಕಾರಣವಾಗಿದೆ ಎಂದು ಕೆಎಸ್‌ಸಿಎ ಪದಾಧಿಕಾರಿಗಳು ದೂರಿದ್ದಾರೆ ಎನ್ನಲಾಗಿದೆ. ಅದೇ ರೀತಿ ಆರ್‌ಸಿಬಿ ಹಾಗೂ ಕೆಎಸ್‌ಸಿಎ ಮೇಲೆ ಇನ್ಸ್‌ಪೆಕ್ಟರ್ ಗಿರೀಶ್‌ ಆಪಾದಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಲ್ತುಳಿತ ದುರಂತ ಬಳಿಕ ಇನ್ಸ್‌ಪೆಕ್ಟರ್ ಗಿರೀಶ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಇನ್ನು ಘಟನೆಗೆ ನೈತಿಕ ಹೊಣೆ ಹೊತ್ತು ಕೆಎಸ್‌ಸಿಎ ಆಡಳಿತಾತ್ಮಕ ಹುದ್ದೆಗಳಿಗೆ ಶಂಕರ್ ಹಾಗೂ ಜಯರಾಮ್ ರಾಜೀನಾಮೆ ಸಲ್ಲಿಸಿದ್ದರು. ವಿಚಾರಣೆಗೆ ತಮ್ಮ ವಕೀಲರ ತಂಡದೊಂದಿಗೆ ಕೆಎಸ್‌ಸಿಎ ಪದಾಧಿಕಾರಿಗಳು ಹಾಜರಾಗಿದ್ದರು. ಈಗಾಗಲೇ ಇವರ ಮೇಲೆ ಬಲವಂತದ ಕ್ರಮ ಜರುಗಿಸದಂತೆ ತನಿಖಾಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ.