ರಿಯಲ್ ಎಸ್ಟೇಟ್ ಉದ್ಯಮಿ ಜೆ.ಸಿ. ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ಮೃತರ ವಿರುದ್ಧ ತನಿಖೆ ನಡೆಸುತ್ತಿದ್ದ ಕೇರಳ ಘಟಕದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಿಯಲ್ ಎಸ್ಟೇಟ್ ಉದ್ಯಮಿ ಜೆ.ಸಿ. ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ಮೃತರ ವಿರುದ್ಧ ತನಿಖೆ ನಡೆಸುತ್ತಿದ್ದ ಕೇರಳ ಘಟಕದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.ಭೂ ವ್ಯವಹಾರದಲ್ಲಿ ತೆರಿಗೆ ಪಾವತಿಸದೆ ರಾಯ್ ವಂಚಿಸಿರುವ ಬಗ್ಗೆ ಆರೋಪ ಬಂದಿತ್ತು. ಈ ಬಗ್ಗೆ ದಾಖಲೆಗಳನ್ನು ಶೋಧಿಸಿದಾಗ ಪೂರಕ ಸಾಕ್ಷ್ಯಗಳು ಲಭ್ಯವಾಗಿದ್ದವು. ಈ ಮಾಹಿತಿ ಮೇರೆಗೆ ರಾಯ್ ಅವರ ಕಚೇರಿಯಲ್ಲಿ ಶೋಧನೆ ನಡೆಸುವ ವೇಳೆ ಘಟನೆ ನಡೆದಿದೆ ಎಂದು ಕೇಂದ್ರಕ್ಕೆ ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಕೇರಳ ರಾಜ್ಯದಲ್ಲಿ ರಾಯ್ ಅವರ ವ್ಯವಹಾರಿಕ ನಂಟಿದೆ. ಅಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರದ ವಿಚಾರವಾಗಿ ಡಿ.3ರಂದು ದಾಳಿ ನಡೆಸಲಾಯಿತು. ಈ ಪ್ರಕರಣ ಸಂಬಂಧ ರಾಯ್ ಅವರು ಕೇರಳಕ್ಕೆ ಆಗಮಿಸಿ ಹೇಳಿಕೆ ಕೂಡ ಕೊಟ್ಟಿದ್ದರು. ಹೆಚ್ಚಿನ ತನಿಖೆ ಸಲುವಾಗಿ ಬೆಂಗಳೂರಿಗೆ ಬರುವುದಾಗಿ ಅವರಿಗೆ ಮಾಹಿತಿ ನೀಡಲಾಯಿತು. ಅಂತೆಯೇ ಶುಕ್ರವಾರ ಬೆಳಗ್ಗೆ ಅವರ ಕಚೇರಿಯಲ್ಲಿ ತಪಾಸಣೆ ನಡೆಸುತ್ತಿದ್ದವು. ಆಗ ಕೆಲ ಹೊತ್ತು ವಿಶ್ರಾಂತಿ ಪಡೆಯುವುದಾಗಿ ಕೋಣೆಗೆ ತೆರಳಿ ರಾಯ್ ಅವರು ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ನಾವು ಯಾವುದೇ ರೀತಿ ಒತ್ತಡ ಅಥವಾ ಬೆದರಿಕೆ ಹಾಕಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿರುವುದಾಗಿ ತಿಳಿದು ಬಂದಿದೆ.