ಸಾರಾಂಶ
ಎಂಎಲ್ ಸಿ ಸೂರಜ್ ರೇವಣ್ಣ ಬಂಧನ ವಿಚಾರ ಬಗ್ಗೆ ಮಾತನಾಡಿದ ಗುಂಡೂರಾವ್, ಸೂರಜ್ ರೇವಣ್ಣ ತಪ್ಪು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಸೆಕ್ಷನ್ 377 ಪ್ರಕಾರ ಸಲಿಂಗ ಕಾಮ ಈಗ ತಪ್ಪಲ್ಲ. ಅದು ಅವರವರಿಗೆ ಬಿಟ್ಟಿರುವ ವಿಚಾರ. ಆದರೆ ಒತ್ತಡ ಮಾಡಿ ಕಿರುಕುಳ ಕೊಟ್ಟು ಲೈಂಗಿಕ ಸಂಪರ್ಕ ಆಗಿದ್ದರೆ ಅದು ತಪ್ಪು ಎಂದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿಚಾರದಲ್ಲಿ ಯಾರೇನು ಮಾಡುವುದಕ್ಕೆ ಆಗುತ್ತದೆ, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ನಾವು ಹುಟ್ಟು ಹಾಕಿದ್ದೇವಾ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿದ್ದಾರೆ.ಕುಶಾಲನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಎಂಎಲ್ ಸಿ ಸೂರಜ್ ರೇವಣ್ಣ ಬಂಧನ ವಿಚಾರ ಬಗ್ಗೆ ಮಾತನಾಡಿದ ಅವರು, ಸೂರಜ್ ರೇವಣ್ಣ ತಪ್ಪು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಸೆಕ್ಷನ್ 377 ಪ್ರಕಾರ ಸಲಿಂಗ ಕಾಮ ಈಗ ತಪ್ಪಲ್ಲ. ಅದು ಅವರವರಿಗೆ ಬಿಟ್ಟಿರುವ ವಿಚಾರ. ಆದರೆ ಒತ್ತಡ ಮಾಡಿ ಕಿರುಕುಳ ಕೊಟ್ಟು ಲೈಂಗಿಕ ಸಂಪರ್ಕ ಆಗಿದ್ದರೆ ಅದು ತಪ್ಪು ಎಂದರು.
ಈಗ ದೂರು ಇರುವುದು ಕಿರುಕುಳ ಕೊಟ್ಟು ಸಲಿಂಗ ಲೈಂಗಿಕ ಸಂಪರ್ಕ ಮಾಡಿದ್ದಾರೆಂದು. ಕಾನೂನು ಪ್ರಕಾರ ಎಲ್ಲರೂ ಒಂದೇ. ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಎರಡೂ ಪ್ರಕರಣಗಳನ್ನು ಬ್ಯಾಕ್ ಟು ಬ್ಯಾಕ್ ನಾವು ಸೃಷ್ಟಿ ಮಾಡಿದ್ದಲ್ಲ. ‘ಬ್ಯಾಕ್ ಟು ಬ್ಯಾಕೋ ಇಲ್ಲ ಫ್ರಂಟ್ ಟು ಫ್ರಂಟೋ’ ನಮಗೇನು ಗೊತ್ತು ಎಂದು ಗುಂಡೂರಾವ್ ವ್ಯಂಗ್ಯವಾಡಿದರು.ದೇವೇಗೌಡರ ಕುಟುಂಬವನ್ನು ನಾಶ ಮಾಡಲು ಹೀಗೆಲ್ಲ ಮಾಡಲಾಗುತ್ತದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ದಿನೇಶ್,
ಅವರು ಗೆಲ್ಲಬೇಕು ಎಂದು ಅವರು, ನಾವು ಗೆಲ್ಲಬೇಕು ಎಂದು ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಆದರೆ ಇದನ್ನೆಲ್ಲಾ ಅವರು ವೈಯಕ್ತಿಕವಾಗಿ ಬೆಳೆಸಿಕೊಂಡರೆ ನಾವೇನು ಮಾಡಲಾಗದು ಎಂದರು. ರಾಜಕೀಯದಲ್ಲಿ ನಮ್ಮ ಎದುರಾಳಿಯನ್ನು ನಾವು ಎದುರಿಸಬೇಕು. ಯಾರೂ ಕೂಡ ನಮ್ಮ ಎದುರಾಳಿ ಗೆದ್ದುಕೊಂಡು ಹೋಗಲಿ ಎಂದು ಬಿಡುವುದಿಲ್ಲ. ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವಂತಹದ್ದು ಏನು ಇಲ್ಲ. ಇದನ್ನು ವೈಯಕ್ತಿಕ ಪ್ರತಿಷ್ಠೆ ಮಾಡಿಕೊಂಡು ಜನರ ಅನುಕಂಪ ಪಡೆದುಕೊಳ್ಳುವ ಪ್ರಯತ್ನ ಅಷ್ಟೆ ಇದು ಎಂದರು.ಬಿಜೆಪಿ ರಾಜಕೀಯ ಆರೋಪ:
ಲೋಕ ಸಭಾ ಹಂಗಾಮಿ ಸ್ಪೀಕರ್ ನೇಮಕ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಸ್ಪೀಕರ್ ನೇಮಕ ಮಾಡುವ ಮುಂಚೆ ಹಂಗಾಮಿ ಸ್ಪೀಕರ್ ಮಾಡುತ್ತಾರೆ. ಯಾರು ಅತ್ಯಂತ ಹಿರಿಯರಿರುತ್ತಾರೋ ಅವರನ್ನು ಆರಿಸುವುದು ಸಂಪ್ರದಾಯ. ಈಗಿರುವ ಅಥ್ಯಂತ ಹಿರಿಯರು ಕಾಂಗ್ರೆಸ್‌ನ ಕೆ.ಎಸ್. ಸುರೇಶ್ ಅವರು, ಸುರೇಶ್ ಅವರನ್ನ ಹಂಗಾಮಿ ಸಭಾಪತಿ ಆಗಿ ಮಾಡಬೇಕಿತ್ತು. ಇದರಲ್ಲೂ ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.