ಹೂವಿನಹಡಗಲಿ: ಬಳ್ಳಾರಿಯಲ್ಲಿ ರಾಜಕೀಯ ಅಷ್ಟು ಸುಲಭವಲ್ಲ, ರಕ್ತ ಕುಡಿವ ರಾಕ್ಷಸರ ಮಧ್ಯೆ ಧೈರ್ಯದಿಂದ ರಾಜಕಾರಣ ಮಾಡಿದ್ದೇವೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಇಲ್ಲಿನ ಶಿವಶಾಂತವೀರ ಸಮುದಾಯ ಭವನದಲ್ಲಿ ಬಿಜೆಪಿ ಮುಖಂಡ ಓದೋ ಗಂಗಪ್ಪ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡುತ್ತಾ, ರಾಜಕೀಯ ಕ್ಷೇತ್ರಕ್ಕೆ ಬರಲು ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರ ಆಶೀರ್ವಾದವಿತ್ತು. ಅವರು ನಮಗೆ ರಾಜಕೀಯ ಪಾಠ ಹೇಳಿಕೊಟ್ಟಿದ್ದಾರೆ. ಅವರ ಜೀವನದ ಕೊನೆ ಗಳಿಗೆಯಲ್ಲಿ ಅವರ ಪಾದಕ್ಕೆ ಬಿದ್ದಾಗ ನನ್ನನ್ನು ಅಪ್ಪಿಕೊಂಡಿದ್ದರು. ಅವರ ಶ್ರೀರಕ್ಷೆ ಇದ್ದ ಕಾರಣ ಬಳ್ಳಾರಿಯಲ್ಲಿ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.ಎಂ.ಪಿ.ಪ್ರಕಾಶರಂತಹ ಬಿದ್ಧಿಜೀವಿಗಳ ಮಧ್ಯೆ ಇದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಹೂವಿನಹಡಗಲಿಯಲ್ಲಿ ಎಂ.ಪಿ.ಪ್ರಕಾಶ ಪುತ್ಥಳಿ ಲೋಕಾರ್ಪಣೆ ವೇಳೆ ನನ್ನ ಬಗ್ಗೆ ಹಗುರವಾಗಿ ಮಾತಾಡಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅವರ ರಾಜಕೀಯ ಮುಗಿಯಿತು ಅಂತ ನಾನೇನು ಭಾವಿಸಿಲ್ಲ ಎಂದರು.
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ಮುಂಬರುವ 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ವೇಳೆ ಓದೋ ಗಂಗಪ್ಪ ಅವರಿಗೆ ಉನ್ನತ ಹುದ್ದೆ ಸ್ಥಾನಮಾನ ಸಿಗಲಿದೆ ಎಂದರು.ಈ ಸಂದರ್ಭದಲ್ಲಿ ಹರಗುರು ಚರಮೂರ್ತಿಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.