3300 ನಾವು ಒಪ್ಪಲ್ಲ, 3500 ನೀಡಿದ್ರೆ ಮಾತ್ರ ಕಬ್ಬು ಪೂರೈಕೆ

| Published : Nov 09 2025, 03:30 AM IST

3300 ನಾವು ಒಪ್ಪಲ್ಲ, 3500 ನೀಡಿದ್ರೆ ಮಾತ್ರ ಕಬ್ಬು ಪೂರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 3300 ದರ ನಿಗದಿಪಡಿಸಿರುವುದನ್ನು ನಾವು ಒಪ್ಪಿಲ್ಲ, ಒಪ್ಪುವುದೂ ಇಲ್ಲ ಎಂದು ರೈತ ಸಂಘದ ಮುಖಂಡ ಬಸವಂತಪ್ಪ ಕಾಂಬಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 3300 ದರ ನಿಗದಿಪಡಿಸಿರುವುದನ್ನು ನಾವು ಒಪ್ಪಿಲ್ಲ, ಒಪ್ಪುವುದೂ ಇಲ್ಲ ಎಂದು ರೈತ ಸಂಘದ ಮುಖಂಡ ಬಸವಂತಪ್ಪ ಕಾಂಬಳೆ ಹೇಳಿದರು.ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಉದ್ದೇಶಿಸಿ ಶನಿವಾರ ಸಂಜೆ ಮಾತನಾಡಿದ ಅವರು, ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡಿರುವ ಆದೇಶ ಪ್ರತಿ ಇನ್ನೂ ನಮಗೆ ಸಿಕ್ಕಿಲ್ಲ. ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ₹3500 ಬೆಲೆ ನೀಡಬೇಕು ಹಾಗೂ ಹಿಂದಿನ ಬಾಕಿ ಹಣ ಪೂರ್ತಿ ಚುಕ್ತಾ ಮಾಡಬೇಕೆಂದು ಮನವಿ ಬಾಗಲಕೋಟೆ ಜಿಲ್ಲೆಯ ಎಲ್ಲ ಕಾರ್ಖಾನೆಗಳ ಮಾಲೀಕರಿಗೆ ಮನವಿ ಮಾಡಿದ್ದೇವೆ. ಕಬ್ಬಿನ ದರ ನಿಗದಿಗೆ ಬೇರೆಡೆ ನಡೆಯುತ್ತಿರುವ ಹೋರಾಟಕ್ಕೂ ನಮ್ಮ ಹೋರಾಟಕ್ಕೂ ಸಂಬಂಧವೇ ಇಲ್ಲ. ಈ ಭಾಗದ ರೈತರ ಕಬ್ಬಿಗೆ ರಿಕವರಿ ಆಧಾರದ ಮೇಲೆ ಬೆಲೆ ನಿಗದಿಗೆ ನಮ್ಮ ಒಪ್ಪಿಗೆಯಿಲ್ಲ. ಏನೇ ಇದ್ದರೂ ಏಕರೂಪ ಬೆಲೆ ನೀಡಬೇಕು. ಇಲ್ಲದಿದ್ದರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾನುವಾರ ಸಂಜೆ ಒಳಗಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹೋರಾಟ ಸ್ಥಳಕ್ಕೆ ಬಂದು ಪ್ರಸಕ್ತ ಹಂಗಾಮಿಗೆ ಕಬ್ಬಿನ ಬೆಲೆ ಘೋಷಣೆ ಮಾಡಬೇಕು. ಜೊತೆಗೆ ಹಿಂದಿನ ಬಾಕಿ ಕೊಡುವ ಕುರಿತು ಸ್ಪಷ್ಟ ಮಾಹಿತಿ ಭರವಸೆ ನೀಡಬೇಕೆಂದು ವೇದಿಕೆ ಮೂಲಕ ಒತ್ತಾಯಿಸುತ್ತೇವೆ. ಸಕ್ಕರೆ ಕಾರ್ಖಾನೆಯವರು ಮೊಂಡುತನ ಮಾಡಿದರೆ ತೀವ್ರ ಹೋರಾಟದ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಕಬ್ಬು ಬೆಳೆಗಾರರ ಬೇಡಿಕೆಗಳು ಸಂಪೂರ್ಣ ಈಡೇರಿಕೆ ಆಗುವವರೆಗೂ ನಮ್ಮ ಹೋರಾಟ ಮುಂದವರೆಯಲಿದೆ ಎಂದು ತಿಳಿಸಿದರು. ರೈತ ಮುಖಂಡರು ಮತ್ತು ನೂರಾರುಕಬ್ಬು ಬೆಳೆಗಾರರ ಉಪಸ್ಥಿತರಿದ್ದರು.