ಸಿಐಡಿ ಮೇಲೆ ನಮಗೆ ವಿಶ್ವಾಸವಿಲ್ಲ

| Published : Dec 26 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಿಐಡಿ ಮೇಲೆ ನಮಗೆ ವಿಶ್ವಾಸ ಇಲ್ಲ. ಸಮವಸ್ತ್ರ ಇಲ್ಲದೆ ಎಡಿಜಿಪಿ ಅಧಿಕಾರಿ ಲಾಠಿ ಚಾರ್ಜ್ ಮಾಡಿದ್ದು ತಪ್ಪು. ಘಟನೆ ದಿನ ಬೆಳಗಾವಿ ಕಮಿಷನರ್ ಫೋನ್‌ ಕಾಲ್‌ನಲ್ಲೇ ಬ್ಯುಸಿ ಇದ್ದರು. ನಾನು ಕಣ್ಣಾರೆ ನೋಡಿದ್ದೇನೆ. ಮೂರು ತಾಸು ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿಐಡಿ ಮೇಲೆ ನಮಗೆ ವಿಶ್ವಾಸ ಇಲ್ಲ. ಸಮವಸ್ತ್ರ ಇಲ್ಲದೆ ಎಡಿಜಿಪಿ ಅಧಿಕಾರಿ ಲಾಠಿ ಚಾರ್ಜ್ ಮಾಡಿದ್ದು ತಪ್ಪು. ಘಟನೆ ದಿನ ಬೆಳಗಾವಿ ಕಮಿಷನರ್ ಫೋನ್‌ ಕಾಲ್‌ನಲ್ಲೇ ಬ್ಯುಸಿ ಇದ್ದರು. ನಾನು ಕಣ್ಣಾರೆ ನೋಡಿದ್ದೇನೆ. ಮೂರು ತಾಸು ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣ ಸಿಐಡಿಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸಿ.ಟಿ.ರವಿ ಎನ್ಕೌಂಟರ್‌ಗೆ ಪ್ಲಾನ್ ಆಗಿತ್ತು ಎಂಬ ಶಂಕೆ ಇದೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ಆಗಬೇಕು. ಕಮಿಷನರ್ ಕಿವಿಗೆ ಹಿಡಿದ ಫೋನ್ ಬಿಟ್ಟಿಲ್ಲ. ಅದು ಸಹ ತನಿಖೆ ಆಗಬೇಕು. ಕಮಿಷನರ್‌ ಡಿ.ಕೆ.ಶಿವಕುಮಾರ ಜೊತೆಗೆ ಮಾತನಾಡುತ್ತಿದ್ದನಾ? ಅಥವಾ ಲಕ್ಷ್ಮೀ ಹೆಬ್ಬಾಳ್ಕರ ಜೊತೆಗೆ ಮಾತನಾಡುತ್ತಿದ್ದನಾ? ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಅಹಿಂದ, ದಲಿತ ಸಂಘಟನೆಗಳಿಂದ ಡಿ.28ರಂದು ವಿಜಯಪುರ ಬಂದ್‌ಗೆ ಕರೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಮಿತ್‌ ಶಾ ಹೇಳಿಕೆ ಕಟ್ ಮಾಡಿ ಬೇಕಾದಂತೆ ಬಳಸುತ್ತಿದ್ದಾರೆ. ಬಾಂದ್ರಾದಲ್ಲಿ ಅಂಬೇಡ್ಕರ್‌ರನ್ನು ಸೋಲಿಸಿದ್ದು ಯಾರು? ಕಾನೂನು ತಿದ್ದುಪಡಿಗೆ ಮುಂದಾದಾಗ ಅಸಹಕಾರ ಮಾಡಿದ್ದರು. ನೆಹರು ಬಾಬಾ ಸಾಹೇಬರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಾಬಾಸಾಹೇಬರಿಗೆ ಭಾರತ ರತ್ನ ಕೊಟ್ಟಿದ್ದು ನಾವು. ನೆಹರು, ಇಂದಿರಾ, ರಾಜೀವ್ ಗಾಂಧಿ ತಾವೇ ಸ್ವತಃ ಭಾರತ ರತ್ನ ತೆಗೆದುಕೊಂಡರು. ಅಂಬೇಡ್ಕರ್‌ಗೆ ಭಾರತ ರತ್ನ ಕೊಡಲಿಲ್ಲ. ಬಾಬಾಸಾಹೇಬರ ಪಾರ್ಥಿವ ಶರೀರ ತರಲು ಇವರು ವಿಮಾನ ವ್ಯವಸ್ಥೆಯನ್ನು ಮಾಡಲಿಲ್ಲ. ಅವರ ಕಾರು ಮಾರಾಟ ಮಾಡಿ ಅವರ ಪಾರ್ಥಿವ ಶರೀರ ತರಲಾಯಿತು ಎಂದು ಟೀಕಿಸಿದರು.

ಧರ್ಮದಿಂದ ಸಂವಿಧಾನ ಉಳಿಯುತ್ತೆ:

ಬಾಂಗ್ಲಾದೇಶದಲ್ಲಿ ಇಸ್ಲಾಂನಿಂದಾಗಿ ಸಂವಿಧಾನ ಉಳಿಯಲಿಲ್ಲ. ಅಮಿತ್ ಶಾ ಹೇಳಿಕೆಯಲ್ಲಿ ತಪ್ಪಿಲ್ಲ. ಹೇಳಿಕೆ ತಿರುಚಲಾಗಿದೆ. ಸಂವಿಧಾನವನ್ನ 73 ಸಲ ತಿದ್ದುಪಡಿ ಮಾಡಿದ್ದಾರೆ. ದಲಿತರು ಕಾಂಗ್ರೆಸ್ಸಿಗರ ಪೊಳ್ಳು ಭರವಸೆಗೆ ಒಳಗಾಗಬೇಡಿ. ಕಾಂಗ್ರೆಸ್ ದೇಶದಿಂದ ಸರ್ವನಾಶ ಆದ್ರೆ ಸಂವಿಧಾನ ಉಳಿಯುತ್ತೆ ಎಂದರು.

ಯತ್ನಾಳ ಕಾರ್ಖಾನೆ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆಯಾದ ಬಗ್ಗೆ ಮಾಹಿತಿ ನೀಡಿದ ಅವರು, ಸರ್ಕಾರ ಕಾರ್ಮಿಕರ ಜೊತೆಗೆ ಚೆಲ್ಲಾಟ ವಾಡಿದೆ. ಕಾಂಗ್ರೆಸ್ ಪತನವಾಗೋದು ನಿಶ್ಚಿತ. ನಾವು ಅಧಿಕಾರಕ್ಕೆ ಬಂದಾಗ ಅವರು ಅನುಭವಿಸಬೇಕಾಗುತ್ತದೆ ಎಂದು ಕಾರ್ಖಾನೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದವರಿಗೆ ವಾರ್ನ್ ಮಾಡಿದರು.

ವಕ್ಫ್‌ ಹೋರಾಟ ಮತ್ತೆ ಶುರುವಾಗಲಿದೆ. ಮುಂದಿನ ಹೋರಾಟದ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಸಭೆ ಬಳಿಕ ಹೋರಾಟದ ದಿನಾಂಕ ನಿರ್ಧಾರ ಮಾಡಲಾಗುವುದು. ಬೆಂಗಳೂರಿನಲ್ಲಿ ಇನ್ನೊಂದು ಸುತ್ತಿನ ವಕ್ಫ್‌ ಹೋರಾಟದ ಸಭೆ ನಡೆಸುತ್ತೇವೆ ಎಂದು ಹೇಳಿದರು.

ವಾಜಪೇಯಿ ಅಜಾತಶತ್ರು:

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಂತರ ಮೋದಿ, ಮೋದಿ ನಂತ್ರ ಯೋಗಿ, ಕೇಂದ್ರ ಬಿಜೆಪಿಯಲ್ಲಿ ನಾಯಕತ್ವ ಕೊರತೆ ಇಲ್ಲ. ಕಾಂಗ್ರೆಸ್‌ನಲ್ಲಿ ನಾಯಕತ್ವವೇ ಸತ್ತು ಹೋಗಿದೆ. ರಾಜ್ಯ ಬಿಜೆಪಿಯಲ್ಲೂ ಉತ್ತಮ ನಾಯಕತ್ವ ಬರುತ್ತೆ ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಸರಿ ಇಲ್ಲ ಎಂದರು.------------ಕೋಟ್‌.....

ಇದು ನಕಲಿ ಕಾಂಗ್ರೆಸ್‌ನ ಅಧಿವೇಶನ. ಈ ಅಧಿವೇಶನದಲ್ಲಿ ಇರೋರು ನಕಲಿ ಗಾಂಧಿಗಳು. ಫಿರೋಜ್ ಖಾನ್ ಇದ್ದದ್ದು ಗಾಂಧಿ ಹೇಗೆ ಆಯ್ತು ಬಹಿರಂಗಪಡಿಸಬೇಕು. ಹೆಸರು ಇಟ್ಟುಕೊಂಡ ಮಾತ್ರಕ್ಕೆ ಪಾವಿತ್ರ್ಯತೆ ಬರೋದಿಲ್ಲ. ಇವರು ಬಾಬಾಸಾಹೇಬ್‌ ಅಂಬೇಡ್ಕರ್ ಅವರ ಸ್ಮರಣೆ ಮಾಡಲ್ಲ. ಗಾಂಧಿ ಸ್ಮರಣೆ ಮಾತ್ರ ಮಾಡುತ್ತಾರೆ.

- ಬಸನಗೌಡ ಪಾಟೀಲ ಯತ್ನಾಳ, ಶಾಸಕಸೂಚನೆ: ಯತ್ನಾಳ ಪೋಟೋ ಬಳಸಿಕೊಳ್ಳಿ