ನಮ್ಮೂರಿಗೆ ಬಸ್ಸಿಲ್ಲ, ಬಸ್ ಬಿಡಿ, ಇಲ್ಲವೇ ಸೈಕಲ್ ಕೊಡಿಸಿರಿ

| Published : Dec 08 2023, 01:45 AM IST

ನಮ್ಮೂರಿಗೆ ಬಸ್ಸಿಲ್ಲ, ಬಸ್ ಬಿಡಿ, ಇಲ್ಲವೇ ಸೈಕಲ್ ಕೊಡಿಸಿರಿ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ನಮ್ಮೂರಿಗೆ ಬಸ್ ಇಲ್ಲ ಸರ್‌ ಹಾಗಾಗಿ ನಾವು ಶಾಲೆಗೆ 3-4 ಕಿ.ಮೀ. ನಡೆದುಕೊಂಡು ಹೋಗಬೇಕಾಗಿದೆ. ಬಸ್ ಬಿಡಿ, ಇಲ್ಲವೇ ಸೈಕಲ್ ಕೊಡ್ಸಿ ಎಂದು ಕೆಂಗಲ್ ಗೊಲ್ಲರಹಟ್ಟಿ ಗ್ರಾಮದ ವಿದ್ಯಾರ್ಥಿ ರಾಮಕೃಷ್ಣ ಗ್ರಾಮ ಸಭೆಯಲ್ಲಿ ಕೇಳಿದನು.

ದಾಬಸ್‌ಪೇಟೆ: ನಮ್ಮೂರಿಗೆ ಬಸ್ ಇಲ್ಲ ಸರ್‌ ಹಾಗಾಗಿ ನಾವು ಶಾಲೆಗೆ 3-4 ಕಿ.ಮೀ. ನಡೆದುಕೊಂಡು ಹೋಗಬೇಕಾಗಿದೆ. ಬಸ್ ಬಿಡಿ, ಇಲ್ಲವೇ ಸೈಕಲ್ ಕೊಡ್ಸಿ ಎಂದು ಕೆಂಗಲ್ ಗೊಲ್ಲರಹಟ್ಟಿ ಗ್ರಾಮದ ವಿದ್ಯಾರ್ಥಿ ರಾಮಕೃಷ್ಣ ಗ್ರಾಮ ಸಭೆಯಲ್ಲಿ ಕೇಳಿದನು.

ವೀರಸಾಗರ ಗ್ರಾಮದಲ್ಲಿ ಹೊನ್ನೇನಹಳ್ಳಿ ಗ್ರಾಪಂ ಹಮ್ಮಿಕೊಂಡಿದ್ದ 2023-24ನೇ ಮೊದಲನೇ ಹಂತದ ಗ್ರಾಮ ಸಭೆ ಹಾಗೂ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ನೆರೆದಿದ್ದ ಅಧಿಕಾರಿಗಳಿಗೆ ಪ್ರಶ್ನೆ ಕೇಳಿದ ವಿದ್ಯಾರ್ಥಿ, ಕೆಂಗಲ್ ಗೊಲ್ಲರಹಟ್ಟಿಯಿಂದ ಹೊನ್ನೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ತೆರಳಲು ಪ್ರಯಾಸವಾಗುತ್ತಿದ್ದು ಬಸ್ ವ್ಯವಸ್ಥೆ ಕಲ್ಪಿಸಿ ಇಲ್ಲವೇ ಸೈಕಲ್ ಆದರೂ ನೀಡಿ ಎಂದು ತಮ್ಮ ಅಳಲು ತೋಡಿಕೊಂಡನು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವುದಾಗಿ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಭರವಸೆ ನೀಡಿದರು.

ಕೃಷಿ ಅಧಿಕಾರಿ ಶಬಾನಾ ಡಿ.ನದಾಫ್ ಮಾತನಾಡಿ, ಈ ಬಾರಿ ಅನಾವೃಷ್ಟಿಯಿಂದಾಗಿ ಇಳುವರಿ ಕಡಿಮೆಯಾಗಿದ್ದು ವಿಮೆ ಮಾಡಿಸಿರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜೊತೆಗೆ ಆಧಾರ್ ಹಾಗೂ ಪಹಣಿ ನೀಡಿ ಇ-ಕೆವೈಸಿ ಮಾಡಿಸಿ ಎಫ್.ಐ.ಡಿ ಯಲ್ಲಿ ದಾಖಲಿಸಿದರೆ ಮಾತ್ರವೇ ಸರ್ಕಾರಿ ಸೌಲಭ್ಯಗಳು ರೈತರನ್ನು ತಲುಪಲು ಸಾಧ್ಯ. ಹಾಗಾಗಿ ರೈತರು ನಮ್ಮ ಸೋಂಪುರ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಇ-ಕೆವೈಸಿ ಮಾಡಿಸಿಕೊಳ್ಳಿ ಎಂದು ಹೇಳಿದರು.

ಕೆಂಗಲ್ ಗ್ರಾಮದ ಮಹಿಳೆಯರು ಸ್ತ್ರೀಶಕ್ತಿ ಸಂಘಕ್ಕೆ ಅನುಕೂಲವಾಗುವಂತೆ ಮಹಿಳಾ ಭವನ ನಿರ್ಮಾಣ ಮಾಡಬೇಕು. ಶ್ರೀಪತಿಹಳ್ಳಿ ಶಾಲೆಗೆ ಕಟ್ಟಡ ಹಾಗೂ ಹೊನ್ನೇನಹಳ್ಳಿ ಶಾಲೆಯ ಕೌಂಪೌಂಡ್ ಬಿದ್ದು ಹೋಗಿದ್ದು ದುರಸ್ತಿ ಮಾಡಿಸಿ ಹಾಗೂ ವೀರಸಾಗರ ಗ್ರಾಮದಲ್ಲಿರುವ 3 ಕಟ್ಟಡಗಳು ಶಿಥಿಲವಾಗಿವೆ. ಅವುಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂಬ ಹತ್ತು ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಕೇಳಿದರು.

ಸಾರ್ವಜನಿಕರ ನಿರಾಸಕ್ತಿ: ಗ್ರಾಮ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಆಗಮಿಸಿದ್ದರಿಂದ ಖಾಲಿ ಕುರ್ಚಿಗಳು ಎದ್ದು ಕಾಣುತ್ತಿದ್ದವು. ಅಲ್ಲದೇ ಹಲವು ಇಲಾಖೆಗಳ ಅಧಿಕಾರಿಗಳೂ ಗೈರಾಗಿ ಗ್ರಾಮಸಭೆಗೆ ನಿರಾಸಕ್ತಿ ತೋರಿದ್ದು ಕಂಡು ಬಂದಿತು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಉಮಾದೇವಿ, ಪಿಡಿಒ ಮಂಜಮ್ಮ, ನೋಡಲ್ ಅಧಿಕಾರಿ ಗಿರಿಜಾ.ಎನ್, ಉಪಾಧ್ಯಕ್ಷ ರಾಜೇಶ್‌ಕುಮಾರ್, ಕಾರ್ಯದರ್ಶಿ ಜಿ.ಬಿ.ಚಂದ್ರಯ್ಯ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗದವರು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.ಪೋಟೋ 1 : ವೀರಸಾಗರ ಗ್ರಾಮದಲ್ಲಿ ಹೊನ್ನೇನಹಳ್ಳಿ ಗ್ರಾಪಂ ಹಮ್ಮಿಕೊಂಡಿದ್ದ 2023-24ನೇ ಮೊದಲನೇ ಹಂತದ ಗ್ರಾಮ ಸಭೆ ಹಾಗೂ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷೆ ಉಮಾದೇವಿ ಉದ್ಘಾಟಿಸಿದರು.