ವಾಟಾಳ್ ನಾಗರಾಜ್ ಅವರು ರಾಷ್ಟ್ರೀಯ ಹೆದ್ದಾರಿಯ ಅತ್ತಿಬೆಲೆ ಗಡಿಯಲ್ಲಿ ಖಾಲಿ ಸಿಲಿಂಡರ್ ಇಟ್ಟು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು
ಕನ್ನಡಪ್ರಭ ವಾರ್ತೆ ಆನೇಕಲ್
ಹೆಂಡ ಕುಡಿದ ಕೋತಿಗಳು ಏನು ಮಾಡುತ್ತವೆಯೋ ಅವುಗಳಿಗೆ ತಿಳಿದಿಲ್ಲ. ಈಗ ಮಧ್ಯ ಪ್ರಾಚ್ಯ ದೇಶಗಳ ಸ್ಥಿತಿ ಹಾಗೆಯೇ ಆಗಿರುವುದು ವಿಪರ್ಯಾಸ. ನಮಗೆ ಯುದ್ಧ ಬೇಡ. ಬದುಕು ಸಾಗಿಸಲು ಗ್ಯಾಸ್ ಬೇಕು ಎಂದು ಕನ್ನಡ ಒಕ್ಕೂಟಗಳ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅಗ್ರಹಿಸಿದ್ದಾರೆ.ಅವರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44 ಅತ್ತಿಬೆಲೆ ಗಡಿ ಗೋಪುರ ಬಳಿ ಖಾಲಿ ಸಿಲಿಂಡರ್, ಸೌದೆ ಪಾತ್ರೆಗಳನ್ನು ಹೆದ್ದಾರಿ ಮಧ್ಯೆ ಇಟ್ಟು ಪ್ರತಿಭಟನೆ ನಡೆಸಿ ಮಾತನಾಡಿ ಸಕಾರಣ ಇಲ್ಲದೇ ಪ್ರಭುದ್ಧರು ಯುದ್ಧದಂತಹ ದುಸ್ಸಾಹಸಕ್ಕೆ ಮುಂದಾಗಬಾರದು. ಮಾಹಿತಿ, ತಂತ್ರಜ್ಞಾನ, ಭೂ ಹಾಗೂ ಖಗೋಳ ವಿಜ್ಞಾನ ಮನುಜನ ಕೈಮೀರಿ ಕೃತಕ ಬುದ್ಧಿಮತ್ತೆಯ ವಿವೇಚನೆಯಲ್ಲಿದೆ. ಮನುಕುಲದ ಉಳಿವಿಗಾಗಿ ತೃತೀಯ ಮಹಾಯುದ್ಧ ನಡೆಯಲೇ ಬಾರದು. ಭಾರತ ಸರ್ಕಾರ ಪರ್ಯಾಯ ವ್ಯವಸ್ಥೆ ನೀಡುವವರೆಗೆ ಇಂಧನ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲೇ ಬೇಕು ಎಂದು ಒತ್ತಾಯಿದರು.ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನ್ನಡಿಗರ ಬಗ್ಗೆ ಮಲತಾಯಿ ಧೋರಣೆ, ತಾತ್ಸಾರ ನಿಲುವು ತಳೆದಿದೆ ಎಂದು ಆರೋಪಿಸಿದರು.
ಭಾಷಾ ಬೆಳವಣಿಗೆ, ಆಡಳಿತದಲ್ಲಿ ಕನ್ನಡ ಕಡ್ಡಾಯ ಎನ್ನುವ ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಕೇಂದ್ರ ಸರ್ಕಾರಿ ಪರೀಕ್ಷೆಗಳಲ್ಲಿ ಕನ್ನಡದಲ್ಲೇ ಬರೆಯಲು ಅವಕಾಶ ಇರಲಿದೆ ಎನ್ನುವ ಕೇಂದ್ರ ರೈಲ್ವೆ ಸೇರಿದಂತೆ ಇತರೆ ಪರೀಕ್ಷೆಗಳನ್ನು ಇಂಗ್ಲಿಷ್, ಹಿಂದಿಯಲ್ಲೇ ನಡೆಸುವ ಮೂಲಕ ಕನ್ನಡಿಗರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳುತ್ತಿದೆ. ನಮ್ಮ ಸಂಸದರಿಗೂ ಇ ಬಗ್ಗೆ ಕಾಳಜಿ ಇಲ್ಲ ಅನ್ಯಾಯದ ಬಗ್ಗೆ ದನಿಯೆತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.