ಪೊಳ್ಳು ಹಿಂದುತ್ವವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ: ಈಶ್ವರಪ್ಪಗೆ ಬಿವೈಆರ್‌ ಟಾಂಗ್

| Published : Apr 03 2024, 01:38 AM IST / Updated: Apr 03 2024, 09:32 AM IST

ಪೊಳ್ಳು ಹಿಂದುತ್ವವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ: ಈಶ್ವರಪ್ಪಗೆ ಬಿವೈಆರ್‌ ಟಾಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರ ಹಿಂದುತ್ವ ಹೇಳಿಕೆ ಕುರಿತು ನಾಗೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಬಿ. ವೈ ರಾಘವೇಂದ್ರ ಪ್ರತಿಕ್ರಿಯೆ ನೀಡಿದರು. ಇಡಿ ಬಿಜೆಪಿ ಪರಿವಾರ ನಮ್ಮ ಜೊತೆಗೆ ಇದೆ ಎಂದರು.

  ಕುಂದಾಪುರ: ಹಿಂದುತ್ವದ ವಿಚಾರದಲ್ಲಿ ನಮ್ಮ ಮೈಯಲ್ಲಿ ಹರಿಯುತ್ತಿರುವ ಒಂದೊಂದು ಹನಿ ರಕ್ತವೂ ಕೂಡ ಹಿಂದೂ ರಕ್ತವೇ ಆಗಿದೆ. ಪೊಳ್ಳು ಹಿಂದುತ್ವವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರ ಹಿಂದುತ್ವ ಹೇಳಿಕೆಯ ಕುರಿತಂತೆ ಮಂಗಳವಾರ ನಾಗೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ. ವೈ.ರಾಘವೇಂದ್ರ ಎಂಬುದನ್ನು ಪಕ್ಷವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಅವರ ಪಕ್ಕದಲ್ಲೇ ನನ್ನನ್ನು ನಿಲ್ಲಿಸಿಕೊಂಡು ನನಗೆ ಹಾರೈಸಿ, ಆಶೀರ್ವಾದ ಮಾಡಿದ್ದಾರೆ. ಇಡೀ ಬಿಜೆಪಿ, ಪರಿವಾರ ನಮ್ಮ ಜೊತೆಗೆ ಇದೆ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿರುವ ಎಲ್ಲರೂ ಹಿಂದೂವಾದಿಗಳು. ನಾನು ಮಾತ್ರವಲ್ಲ, ಬಿ.ಎಸ್. ಯಡಿಯೂರಪ್ಪನವರು ಅಯೋಧ್ಯೆಯ ರಾಮಜನ್ಮಭೂಮಿ ಆಂದೋಲನದ ಕರಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡದ್ದಲ್ಲದೇ ಆರೆಸ್ಸೆಸ್ ಪ್ರಚಾರಕರಾಗಿ ಹುಬ್ಬಳ್ಳಿ ಈದ್ಗಾ ಮೈದಾನ ಹೋರಾಟ, ಮುರಳಿ ಮನೋಹರ್ ಜೋಶಿಯವರು ಕರೆಕೊಟ್ಟ ಸಂದರ್ಭದಲ್ಲಿ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಉಗ್ರಗಾಮಿಗಳ ದಾಳಿಯ ಮಧ್ಯದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಕೇವಲ ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶನ ಮಾಡುವ ಅವಶ್ಯಕತೆ ನಮಗಿಲ್ಲ ಎಂದರು.

ಯಡಿಯೂಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಂದಿರುವ ಒಂದೊಂದು ಯೋಜನೆಯನ್ನು ಜನ ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಗೋ ಹತ್ಯೆ ನಿಷೇಧಕ್ಕೆ ಬಿಗಿ ಕಾನೂನು ತಂದಿದ್ದಾರೆ. ಭಾಗ್ಯಲಕ್ಷ್ಮೀ ಯೋಜನೆ ಮೂಲಕ ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕುವ ದೊಡ್ಡ ಪ್ರಯತ್ನ ಮಾಡಿದ್ದಾರೆ. ಕನಕದಾಸ ಜಯಂತಿ, ವಾಲ್ಮೀಕಿ ಜಯಂತಿ ಸೇರಿ ಅನೇಕ ಮಹನೀಯರ ಜಯಂತಿ, ಎಲ್ಲ ಮಠ ಮಂದಿರಗಳ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಿದ್ದರು. ಚುನಾವಣೆಯ ಹಿಂದುತ್ವ ನಮ್ಮದಲ್ಲ. ವೋಟಿಗಾಗಿ ಹಿಂದುತ್ವ ಬಳಸಿಕೊಳ್ಳುವವರಿಂದ ಪಾಠ ಅಗತ್ಯವಿಲ್ಲ ಎಂದು ಹೇಳಿದರು.

ಈ ವೇಳೆ ಶಾಸಕ ಗುರುರಾಜ್‌ ಗಂಟಿಹೊಳೆ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಮುಖಂಡರಾದ ವೆಂಕಟೇಶ್‌ ಕಿಣಿ, ಪ್ರಜ್ವಲ್‌ ಶೆಟ್ಟಿ, ಶರತ್‌ ಶೆಟ್ಟಿ ಉಪ್ಪುಂದ, ಅಶೋಕ್‌ ಶೆಟ್ಟಿ ಸಂಸಾಡಿ ಮತ್ತಿತರರು ಇದ್ದರು.

ಸದ್ಯಕ್ಕೆ ಪ್ರತಿಕ್ರಿಯೆ ಕೊಡಲಾರೆ!: ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರ ಆಣೆ-ಪ್ರಮಾಣಕ್ಕೆ ಸವಾಲೆಸೆದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿ ವೈ ರಾಘವೇಂದ್ರ ಅವರು, ಈಶ್ವರಪ್ಪನವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಸದ್ಯ ಆ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡಲಾರೆ. ಆಣೆ ಪ್ರಮಾಣದ ಹಂತಕ್ಕೆ ನಾನೂ ಕರೆದಿದ್ದೇನೆ. ಅವರೂ ಮಾತನಾಡಿದ್ದಾರೆ. ಇದು ಯಾವ ಹಂತಕ್ಕೆ ಹೋಗುತ್ತೆ ಎನ್ನುವುದನ್ನು ನೋಡುತ್ತೇನೆ. ಆ ದಿನಗಳು ಬಾರದಿರಲಿ ಎನ್ನುವುದೇ ನನ್ನ ಆಶಯ. ಅದು ಬಂದಾಗ ಯೋಚನೆ ಮಾಡೋಣ ಎಂದು ಮುಗುಳ್ನಕ್ಕರು.