ಚನ್ನಪಟ್ಟಣ ಖಾಸಗಿ ಬಸ್ ನಿಲ್ದಾಣ ವಿಚಾರವಾಗಿ ಹಲವಾರು ವರ್ಷಗಳಿಂದ ಕೆ.ಎಂ.ವಿ.ಪ್ರಾಜೆಕ್ಟ್ ಗುತ್ತಿಗೆದಾರರು ಮತ್ತು ಪ್ರಾಧಿಕಾರದ ನಡುವೆ ತಾಂತ್ರಿಕ ಸಮಸ್ಯೆ ಉಲ್ಬಣಗೊಂಡಿತ್ತು. ಈ ಸಮಸ್ಯೆ ಸುಪ್ರೀಂಕೋರ್ಟ್‌ ಗೂ ಹೋಗಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಚನ್ನಪಟ್ಟಣ ಖಾಸಗಿ ಬಸ್‌ ನಿಲ್ದಾಣದ ಸಮಸ್ಯೆ ಇತ್ಯರ್ಥಗೊಂಡಿತು ಎಂದು ಚೇತನ್ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನೆನೆಗುದಿಗೆ ಬಿದ್ದಿದ್ದ ಮೂರು ಬಡಾವಣೆಗಳಿಗೆ ಮರು ಜೀವ , ಸಿಲ್ಕ್ ಸಿಟಿ ಹೊಸ ಬಡಾವಣೆಗೆ ಮುನ್ನುಡಿ ಬರೆಯುವ ಜೊತೆಗೆ ಆರ್ಥಿಕ ಸಂಕಷ್ಟದಲ್ಲಿದ್ದ ಪ್ರಾಧಿಕಾರವನ್ನು ಲಾಭದತ್ತ ಕೊಂಡೊಯ್ದಿದ್ದೇವೆ. ನಮಗೆ ಸಿಕ್ಕ ಅವಕಾಶದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಪ್ರಾಧಿಕಾರಕ್ಕೆ ಹೊಸ ರೂಪ ನೀಡಿದ ತೃಪ್ತಿ ಇದೆ ಎಂದು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ತಿಳಿಸಿದರು.

ನಗರದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಾಯಕರು ನನ್ನ ಮತ್ತು ನಿರ್ದೇಶಕರ ಮೇಲೆ ಭರವಸೆ ಇಟ್ಟು ಪ್ರಾಧಿಕಾರದ ಜವಾಬ್ದಾರಿ ನೀಡಿದ್ದರು. ನಾವೆಲ್ಲರೂ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಾಧಿಕಾರ ಮತ್ತು ನಿವೇಶನದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಗೆ ಪೂರಕವಾದ ನಿರ್ಧಾರಗಳನ್ನು ಕೈಗೊಂಡಿದ್ದೇವೆ ಎಂದರು.

ನಾನು ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಭಯ ಮತ್ತು ಆತಂಕ ಎದುರಾಗಿತ್ತು. ಪ್ರಾಧಿಕಾರದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ನಾವೆಲ್ಲರೂ ಅದನ್ನು ತಹ ಬದಿಗೆ ತಂದು ಆದಾಯ ವೃದ್ಧಿಸಲು ಸಾಕಷ್ಟ ಪ್ರಯತ್ನಗಳನ್ನು ಮಾಡಿದೆವು. ನಮ್ಮ ಅವಧಿಯಲ್ಲಿ ಪ್ರಾಧಿಕಾರವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ ಲಾಭದತ್ತ ಸಾಗುವಂತೆ ಮಾಡಿದ ಹೆಮ್ಮೆ ಇದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿದ್ದ ವ್ಯಾಜ್ಯಗಳ ಇತ್ಯರ್ಥ:

ನಗರದ ಶಾಂತಿಲಾಲ್ ಲೇಔಟ್‌ನಲ್ಲಿ ಪ್ರಾಧಿಕಾರಕ್ಕೆ ಸೇರಿದ 1.10 ಎಕರೆ ಉದ್ಯಾನವನದ ಜಾಗವನ್ನು ರೈತರು ಒತ್ತುವರಿ ಮಾಡಿಕೊಂಡಿದ್ದರು. ಅದನ್ನು ತೆರವುಗೊಳಿಸಿ ಕಾಂಪೌಂಡ್ ನಿರ್ಮಿಸಿ ಸಾರ್ವಜನಿಕರ ಕಾರ್ಯಕ್ಕೆ ಉಳಿಸಿಕೊಟ್ಟಿದ್ದೇವೆ. ನ್ಯಾಯಾಲಯದಲ್ಲಿದ್ದ ಪ್ರಾಧಿಕಾರದ ಅನೇಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಪ್ರಾಧಿಕಾರದ ಬಗ್ಗೆ ನಿವೇಶನದಾರರಲ್ಲಿ ವಿಶ್ವಾಸ ಮೂಡಿಸುವ ವಾತಾವರಣ ಮೂಡಿಸಿದ್ದೇವೆ ಎಂದು ತಿಳಿಸಿದರು.

ಪ್ರಾಧಿಕಾರದಲ್ಲಿ ಕೆರೆ ಅಭಿವೃದ್ಧಿ ಶುಲ್ಕ ಬಳಕೆಯಾಗದೆ ಬಾಕಿ ಉಳಿದಿತ್ತು. ಸುಮಾರು ₹1 ಕೋಟಿ ವೆಚ್ಚದಲ್ಲಿ ಚನ್ನಮಾನಹಳ್ಳಿ ಕೆರೆ ಅಭಿವೃದ್ಧಿಗೆ ಟೆಂಡ‌ರ್ ಕರೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ರಂಗರಾಯರದೊಡ್ಡಿ ಕೆರೆ ಅಭಿವೃದ್ಧಿಗೆ ₹60 ಲಕ್ಷ ಮತ್ತು ಬಿಳಗುಂಬ ಕೆರೆ ಅಭಿವೃದ್ಧಿಗೆ ₹50 ಲಕ್ಷ ಮೀಸಲಿಡಲಾಗಿದೆ ಎಂದರು.

ಸಿಲ್ಕ್ ಸಿಟಿ ಹೊಸ ಬಡಾವಣೆ:

ಬಿಎಂಆರ್ ಡಿಎ ಅಧೀನದಲ್ಲಿರುವ ಯಾವುದೇ ಪ್ರಾಧಿಕಾರಗಳು ಹೊಸ ಬಡಾವಣೆ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಅಲ್ಲದೆ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರವೂ 15- 18 ವರ್ಷಗಳಿಂದ ಹೊಸ ಬಡಾವಣೆ ನಿರ್ಮಾಣ ಮಾಡಿರಲಿಲ್ಲ.

ಈ ಹಿನ್ನೆಲೆ ಪ್ರಾಧಿಕಾರ ಅರ್ಚಕರಹಳ್ಳಿ ಬಳಿ ರೈತರ ಸಹಭಾಗಿತ್ವದಲ್ಲಿ 116 ಎಕರೆ ಪ್ರದೇಶದಲ್ಲಿ ಸಿಲ್ಕ್ ಸಿಟಿ ಹೊಸ ಬಡಾವಣೆ ನಿರ್ಮಾಣ ಮಾಡಲು ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಹಂತಕ್ಕೆ ತಂದಿದೆ. ಹೊಸ ಬಡಾವಣೆ ನಿರ್ಮಾಣದಿಂದ ಪ್ರಾಧಿಕಾರಕ್ಕೆ ₹80 ರಿಂದ ₹100 ಕೋಟಿ ಆದಾಯ ಬರುತ್ತದೆ ಎಂದು ಚೇತನ್ ಕುಮಾರ್ ತಿಳಿಸಿದರು.

ಪ್ರಾಧಿಕಾರದಿಂದ ರಚನೆಗೊಂಡಿದ್ದ ಜೀಗೇನಹಳ್ಳಿ ಅರ್ಕಾವತಿ ಬಡಾವಣೆ, ಅರ್ಚಕರಹಳ್ಳಿ ಹೆಲ್ತ್ ಸಿಟಿ ಬಡಾವಣೆ ಹಾಗೂ ಸುಣ್ಣಘಟ್ಟದ ಕಣ್ವ ಬಡಾವಣೆಗಳು ಮೂಲಸೌಕರ್ಯಗಳಿಲ್ಲದೆ ನೆನೆಗುದಿಗೆ ಬಿದ್ದಿತ್ತು. ಹೀಗಾಗಿ ನಿವೇಶನದಾರರು ತ್ರಿಶಂಕು ಸ್ಥಿತಿಯಲ್ಲಿದ್ದರು. ಸರ್ಕಾರ ಮತ್ತು ಪ್ರಾಧಿಕಾರವು ನಿವೇಶನದಾರರ ಸಹಕಾರದೊಂದಿಗೆ ಚರ್ಚಿಸಿ ಪರಿಹಾರ ಸೂತ್ರ ಕಂಡುಕೊಂಡಿತು. ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ₹200 ಅಭಿವೃದ್ಧಿ ಶುಲ್ಕ ನಿಗದಿ ಪಡಿಸಲಾಯಿತು. ಮೂರು ಬಡಾವಣೆಗಳಿಂದ 1661ರ ಪೈಕಿ 1436 ನಿವೇಶನದಾರರು ₹37.13 ಕೋಟಿ ಅಭಿವೃದ್ಧಿ ಶುಲ್ಕ ಪಾವತಿಸಿದರು. ನಮ್ಮ ಅವಧಿಯಲ್ಲಿಯೇ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡುವ ಮೂಲಕ ನಿವೇಶನದಾರರ ವಿಶ್ವಾಸ ಉಳಿಸಿಕೊಂಡ ತೃಪ್ತಿಯಿದೆ ಎಂದು ಹೇಳಿದರು.

ಚನ್ನಪಟ್ಟಣ ಖಾಸಗಿ ಬಸ್ ನಿಲ್ದಾಣ ವಿಚಾರವಾಗಿ ಹಲವಾರು ವರ್ಷಗಳಿಂದ ಕೆ.ಎಂ.ವಿ.ಪ್ರಾಜೆಕ್ಟ್ ಗುತ್ತಿಗೆದಾರರು ಮತ್ತು ಪ್ರಾಧಿಕಾರದ ನಡುವೆ ತಾಂತ್ರಿಕ ಸಮಸ್ಯೆ ಉಲ್ಬಣಗೊಂಡಿತ್ತು. ಈ ಸಮಸ್ಯೆ ಸುಪ್ರೀಂಕೋರ್ಟ್‌ ಗೂ ಹೋಗಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಚನ್ನಪಟ್ಟಣ ಖಾಸಗಿ ಬಸ್‌ ನಿಲ್ದಾಣದ ಸಮಸ್ಯೆ ಇತ್ಯರ್ಥಗೊಂಡಿತು ಎಂದು ಚೇತನ್ ಕುಮಾರ್ ಹೇಳಿದರು.

ಪ್ರಾಧಿಕಾರದ ಕಚೇರಿ ಒಳಾಂಗಣ ನವೀಕರಣಗೊಳಿಸಿ ಮತ್ತು ಹೊರಾಂಗಣವನ್ನು ಅಭಿವೃದ್ಧಿ ಮಾಡಿ ಹೊಸ ರೂಪ ನೀಡಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಗರದ ಟ್ರಾಫಿಕ್ ಸಮಸ್ಯೆಗಳನ್ನು ತಿಳಿಗೊಳಿಸಲು ಪೋಲಿಸ್ ಇಲಾಖೆಗೆ ಸುಮಾರು 150 ಬ್ಯಾರಿಕೇಡ್‌ಗಳನ್ನು ವಿತರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ನಿರ್ದೇಶಕರಾದ ಶ್ರೀದೇವಿ, ಪರ್ವಿಜ್ ಪಾಷಾ, ಪ್ರವೀಣ್, ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಬೈರೇಗೌಡ, ಯುವ ಮುಖಂಡರಾದ ಗುರುಪ್ರಸಾದ್, ರವಿ, ಯೋಗೇಶ್, ಶ್ರೀನಿವಾಸ್ , ವಸಂತ ಮತ್ತಿತರರು ಹಾಜರಿದ್ದರು.

----

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಬಾಲಕೃಷ್ಣ, ಶಾಸಕರಾದ ಇಕ್ಬಾಲ್ ಹುಸೇನ್, ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಕೆ.ರಾಜು ಅವಕಾಶ ನೀಡುವ ಜೊತೆಗೆ ಬೆನ್ನೆಲುಬಾಗಿ ನಿಂತು ಸಂಪೂರ್ಣ ಸಹಕಾರ ನೀಡಿದರು. ಅವರೆಲ್ಲರ ವಿಶ್ವಾಸ ಉಳಿಸಿಕೊಂಡಿರುವ ತೃಪ್ತಿ ನನಗಿದೆ.

- ಎ.ಬಿ.ಚೇತನ್ ಕುಮಾರ್, ನಿಕಟಪೂರ್ವ ಅಧ್ಯಕ್ಷರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ.