ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಶಾಂತಿ, ಸಾಮರಸ್ಯ ಕದಡುವವರು ಯಾವುದೇ ಧರ್ಮದವರಾಗಿದ್ದರೂ ಬಂಧಿಸುವಂತೆ, ಗಲಭೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಲ್ ಮಾರ್ಕ್ಸ್ ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ಕಾಪಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಕಾರ್ಲ್ ಮಾರ್ಕ್ಸ್ ನಗರದ ಯುವತಿಯ ಮೇಲೆ ಹಲ್ಲೆ ನಡೆದಿರುವುದಕ್ಕೆ ನಾವು ಅಲ್ಲಿಗೆ ತೆರಳಿ, ಸಾಂತ್ವನ ಹೇಳಿ, ಫೋಟೋ ತೆಗೆಸಿಕೊಂಡರೆ ಮಾತ್ರವೇ ಸಾಂತ್ವನ ಹೇಳಿದ್ದೇವೆಂದು ಅರ್ಥವಲ್ಲ. ಹಳೇ ಭಾಗದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲವೆಂಬ ಸುದ್ದಿ ಹಬ್ಬಿಸಿ, ಯಾವ ಪಕ್ಷವು ರಾಜಕೀಯ ಲಾಭ ತೆಗೆದುಕೊಳ್ಳುತ್ತದೆಂಬುದೂ ಜನರಿಗೆ ತಿಳಿದಿದೆ. ಮತಗಳ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಹೀಗೆ ಮಾಡುತ್ತಿದೆ ಎಂಬುದೆಲ್ಲಾ ನಿರಾಧಾರ ಆರೋಪ. ಜನರಿಗೆ ಎಲ್ಲವೂ ತಿಳಿದಿದೆ ಎಂದು ವಿಪಕ್ಷ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು
ಹಿಂದೂ ಧರ್ಮ ಸೇರಿದಂತೆ ಪ್ರತಿ ಧರ್ಮವನ್ನೂ ನಾವುಗಳು ಒಂದೇ ರೀತಿ ಕಾಣುತ್ತೇವೆ. ಸಂವಿಧಾನ ಯಾವ ರೀತಿ ತಿಳಿಸಿದಿಯೋ ನಾವುಗಳು ಅದನ್ನು ಪರಿಪಾಲನೆ ಮಾಡುತ್ತೇವೆ. ದಾವಣಗೆರೆಯಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆಯಾಗಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದರು. ಆ ಮೂಲಕ ಶಾಮನೂರು ಕುಟುಂಬ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆಯೆಂಬ ವಿಪಕ್ಷ ಬಿಜೆಪಿ ಆರೋಪಕ್ಕೆ ಸಂಸದರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.ಪ್ರತ್ಯೇಕ ಲಿಂಗಾಯತ ಧರ್ಮ ಎಂಬುದು ಸೂಕ್ಷ್ಮ ವಿಚಾರವಾಗಿದೆ. ಅದರ ಬಗ್ಗೆ ಸುದೀರ್ಘ ಚರ್ಚೆ ನಡೆದು, ಸಮಾಜದ ಹಿರಿಯರು, ಮುಖಂಡರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದೇ ಸೂಕ್ತವಾಗಿರುತ್ತದೆ. ಮುಖ್ಯಮಂತ್ರಿ, ಸಮಾಜದ ಸ್ವಾಮೀಜಿಗಳು ಅವರವರ ಅಭಿಪ್ರಾಯ ತಿಳಿಸಲು ಸ್ವಾತಂತ್ರ್ಯವಿದೆ. ಸಮಾಜದ ಸಂಘಟನೆಗಳು ಸಭೆಯ ನಂತರ ಯಾವ ತೀರ್ಮಾನ ಕೈಗೊಳ್ಳುತ್ತವೋ ಅದೇ ಅಂತಿಮ ನಿರ್ಧಾರವೂ ಆಗಿರುತ್ತದೆ ಎಂದು ಸಂಸದೆ ಡಾ.ಪ್ರಭಾ ಲಿಂಗಾಯತ ಧರ್ಮ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
- - --7ಕೆಡಿವಿಜಿ7, 8 :ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ಸಂಸದೆ.