ಟಿಎಪಿಸಿಎಂಎಸ್ ಸೇರಿದಂತೆ ಎಂಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ನಾವು ಪಕ್ಷದ್ರೋಹ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಕೆಲವು ಡೆಲಿಗೇಟ್ಸ್ ಸದಸ್ಯರು ಬಿ.ಎಂ.ಕಿರಣ್ ಅವರಿಗೆ ಮತಹಾಕಿದ ಪರಿಣಾಮ ಅವರು ಎಲ್ಲರಿಗಿಂತಲೂ ಅತೀ ಹೆಚ್ಚು ಮತಗಳಿಂದ ಆಯ್ಕೆಯಾಗಿ ಪಕ್ಷದ ವರ್ಚಸ್ಸು ಹೆಚ್ಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಾವು ನಿಷ್ಠಾವಂತ ಕಾರ್ಯಕರ್ತರು. ನಮ್ಮ ಮೈಯಲ್ಲಿ ಹರಿಯುತ್ತಿರುವುದು ಜೆಡಿಎಸ್ ಪಕ್ಷದ ರಕ್ತ. ನಾವೆಂದಿಗೂ ಪಕ್ಷದ್ರೋಹ ಮಾಡಿಲ್ಲ ಎಂದು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಮತ್ತು ಟಿಎಪಿಸಿಎಂಎಸ್ ನಿರ್ದೇಶಕ ಬಿ.ಎಂ.ಕಿರಣ್ ಸ್ಪಷ್ಟನೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿಎಪಿಸಿಎಂಎಸ್ ಸೇರಿದಂತೆ ಎಂಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ನಾವು ಪಕ್ಷದ್ರೋಹ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಕೆಲವು ಡೆಲಿಗೇಟ್ಸ್ ಸದಸ್ಯರು ಬಿ.ಎಂ.ಕಿರಣ್ ಅವರಿಗೆ ಮತಹಾಕಿದ ಪರಿಣಾಮ ಅವರು ಎಲ್ಲರಿಗಿಂತಲೂ ಅತೀ ಹೆಚ್ಚು ಮತಗಳಿಂದ ಆಯ್ಕೆಯಾಗಿ ಪಕ್ಷದ ವರ್ಚಸ್ಸು ಹೆಚ್ಚಿಸಿದ್ದಾರೆ ಎಂದರು.
ಕಾಂಗ್ರೆಸ್ ಬೆಂಬಲಿಗರ ಮತಪಡೆದ ಕಾರಣಕ್ಕೆ ಕಿರಣ್ ಅವರ ಮೇಲೆ ಪಕ್ಷದ್ರೋಹದ ಆರೋಪ ಮಾಡುತ್ತಿರುವುದು ಸರಿಯಲ್ಲ. ಶಾಸಕ ಎಚ್.ಟಿ.ಮಂಜು ಅವರು ಶಾಸಕರಾಗಿ ಆಯ್ಕೆಯಾಗಲು ನಮ್ಮನ್ನು ಏಣಿಯಂತೆ ಬಳಸಿಕೊಂಡರು. ಶಾಸಕರಾದ ನಂತರ ನಮ್ಮನ್ನು ಸೇರಿದಂತೆ ನಿಷ್ಠಾವಂತರನ್ನು ಕಡೆಗಣಿಸಿ ನಿನ್ನೆ ಮೊನ್ನೆ ಪಕ್ಷ ಸೇರಿದ ಹಾಗೂ ಸ್ವಾರ್ಥ ಸಾಧಕರನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಕೆ.ಆರ್.ಪೇಟೆ ಪುರಸಭೆ ಆಡಳಿತ ಮಂಡಳಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಧಾರೆಯೆರೆದು ಕೊಟ್ಟಿದ್ದು ಶಾಸಕರೇ ಹೊರತು ನಾವಲ್ಲ.
ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆಯಲ್ಲಿ ಬಿ.ಎಂ.ಕಿರಣ್ ಅವರನ್ನು ಸೋಲಿಸಲು ತಂತ್ರಗಾರಿಕೆ ನಡೆಸಿದ್ದರಿಂದ ನಾವು ಅನಿವಾರ್ಯವಾಗಿ ಗೆಲುವಿಗೆ ಕಾರ್ಯತಂತ್ರ ನಡೆಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎಚ್.ಟಿ.ಮಂಜು ಅವರ ಗೆಲುವಿಗಾಗಿ ನಾವಿಬ್ಬರೂ ನಡೆಸಿರುವ ಹೋರಾಟ ತಾಲೂಕಿನ ಜನತೆಗೆ ಗೊತ್ತಿದೆ. ಡೈರಿ ಚುನಾವಣೆಯಲ್ಲಿ ನಿರಂತರ ಮೂರು ಬಾರಿ ಗೆದ್ದು ನಿರ್ದೇಶಕನಾಗಿ ರೈತ ಪರ ಕೆಲಸ ಮಾಡುತ್ತಿರುವ ನಾನು, 2028ಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿರುವುದನ್ನು ಸಹಿಸದ ಶಾಸಕರು ನಮ್ಮನ್ನು ಉದ್ದೇಶಪೂರ್ವಕವಾಗಿಯೇ ದೂರವಿಟ್ಟು ನಮ್ಮ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿಗೋಷ್ಠಿಯಲ್ಲಿ ಆನೆಗೊಳ ಗ್ರಾಪಂ ಮಾಜಿ ಅಧ್ಯಕ್ಷ ಐಕನಹಳ್ಳಿ ಬಾಲಚಂದ್ರ, ಅಗ್ರಹಾರಬಾಚಹಳ್ಳಿ ನಾಗೇಶ್, ಮನ್ಮುಲ್ ಮಾಜಿ ನಿರ್ದೇಶಕ ಸಾರಂಗಿ ನಂಜುಂಡೇಗೌಡ, ಸಾರಂಗಿ ವಿಶ್ವನಾಥ್, ಗೋರವಿ ಶ್ರೀಧರ್, ಸೊಳ್ಳೇಪುರ ವಾಸು, ಬಾಲಕೃಷ್ಣ ಇದ್ದರು.