ಮಾಗಡಿ: ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ ಮಾಡಿರುವ ವೈಯಕ್ತಿಕ ಹಾಗೂ ರಾಜಕೀಯ ಆರೋಪಗಳಿಗೆ ತಾಲೂಕಿನ ಜೆಡಿಎಸ್ ಮುಖಂಡರು ಮತ್ತು ಜನಪ್ರತಿನಿಧಿಗಳು ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು

ಮಾಗಡಿ: ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ ಮಾಡಿರುವ ವೈಯಕ್ತಿಕ ಹಾಗೂ ರಾಜಕೀಯ ಆರೋಪಗಳಿಗೆ ತಾಲೂಕಿನ ಜೆಡಿಎಸ್ ಮುಖಂಡರು ಮತ್ತು ಜನಪ್ರತಿನಿಧಿಗಳು ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಮಾಜಿ ಶಾಸಕ ಎ.ಮಂಜುನಾಥ್ ಪರ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಸೇರಿದವರು ತಮ್ಮ ಹಳೆಯ ಇತಿಹಾಸ ಮರೆತು ಮಾತನಾಡುತ್ತಿದ್ದಾರೆ. ವೈಯಕ್ತಿಕ ನಿಂದನೆ, ಅಪಪ್ರಚಾರಗಳನ್ನು ಇಲ್ಲಿಗೇ ನಿಲ್ಲಿಸದಿದ್ದರೆ ಸೂಕ್ತ ರೀತಿಯಲ್ಲಿ ಎಚ್ಚರಿಕೆ ನೀಡಬೇಕಾಗುತ್ತದೆ ಎಂದು ಅನಿಲ್‌ಕುಮಾರ್ ಕಿಡಿಕಾರಿದರು.

ಜೆಡಿಎಸ್ ಮುಖಂಡ ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲೂ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ. ಪಿಯು ಕಾಲೇಜು ಕಟ್ಟಡ ಸೇರಿದಂತೆ ಸರ್ಕಾರಿ ನಿಯಮಾನುಸಾರ ಮಾಡಿದ ಕೆಲಸಗಳಿಗೆ ಬಿಲ್ ಮಂಜೂರು ಮಾಡದೆ ಸತಾಯಿಸಲಾಗಿದೆ. ಜೆಡಿಎಸ್ ಪರ ಕೆಲಸ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ಅಧಿಕಾರಿಗಳಿಂದ ಬೆದರಿಸಿ, ಕಾಮಗಾರಿ ತಡೆಯುತ್ತಿದ್ದಾರೆ. ಕಾವೇರಿ ನೀರಾವರಿ ನಿಗಮ, ನಿರ್ಮಿತಿ ಕೇಂದ್ರ ಹಾಗೂ ಲೋಕೋಪಯೋಗಿ ಇಲಾಖೆಗಳಲ್ಲಿನ ಅಕ್ರಮಗಳನ್ನು ಜನ ಗಮನಿಸುತ್ತಿದ್ದಾರೆ. ನಾವೆಂದೂ ಅಧಿಕಾರದ ಆಸೆಗೆ ಬಲಿಯಾದವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಮಾಜಿ ಸದಸ್ಯ ಮರೂರು ಸಾಗರ್ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನನ್ನ ವಿರುದ್ಧ ಕಮಿಷನ್, ಬಡ್ಡಿ ಹಾಗೂ ಇಂಡಸ್ಟ್ರಿ ಜಮೀನು ವಿಚಾರದಲ್ಲಿ ಸುಳ್ಳು ಕಂತೆಗಳನ್ನು ಹಬ್ಬಿಸುತ್ತಿದ್ದಾರೆ. ನಾನು ಎಂದಿಗೂ ರೈತರ ಪರವಾಗಿ ನಿಂತು ಹೋರಾಟ ಮಾಡಿದ್ದೇನೆಯೇ ಹೊರತು ಬಕೆಟ್ ರಾಜಕಾರಣ ಮಾಡಿಲ್ಲ. ನನ್ನ ಮೇಲಿನ ಆರೋಪಗಳಲ್ಲಿ ಸತ್ಯವಿದ್ದರೆ ಕೃಷ್ಣಮೂರ್ತಿ ದೇವಸ್ಥಾನಕ್ಕೆ ಬಂದು ಆಣೆ-ಪ್ರಮಾಣ ಮಾಡಲಿ, ನಾನೂ ಬರಲು ಸಿದ್ಧ. ಅವರು ಆರೋಪ ಸಾಬೀತುಪಡಿಸಿದರೆ ಅವರ ಮನೆಯಲ್ಲಿ ನಾನು ಜೀತ ಮಾಡಲು ಸಿದ್ಧನಿದ್ದೇನೆ. ಅಧಿಕಾರವಿದೆ ಎಂಬ ಕಾರಣಕ್ಕೆ ಸಾಮಾನ್ಯ ಕಾರ್ಯಕರ್ತರನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದ್ದು, ನನಗೇನಾದರೂ ತೊಂದರೆಯಾದರೆ ಅವರೇ ನೇರ ಹೊಣೆ ಎಂದು ಆಕ್ರೋಶ ಹೊರಹಾಕಿದರು.

ಜೆಡಿಎಸ್ ಮುಖಂಡ ಬೆಳಗವಾಡಿ ರಂಗಸ್ವಾಮಿ ಮಾತನಾಡಿ, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ ಅವರಿಗೆ ತಾಕತ್ತಿದ್ದರೆ ದಾಖಲೆ ಸಮೇತ ಬಂದು ಆರೋಪ ಸಾಬೀತುಪಡಿಸಿ, ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವನಲ್ಲ. 2013 ರಿಂದಲೂ ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಕಟ್ಟುತ್ತಿದ್ದೇನೆ. ಪಟ್ಟಾಭಿರಾಮನಗರ ವಾರ್ಡ್ ಕಾರ್ಯದರ್ಶಿಯಾಗಿ, ಜಯನಗರ ಬ್ಲಾಕ್ ಯುವ ಜನತಾದಳದ ಅಧ್ಯಕ್ಷನಾಗಿ ಮತ್ತು 2022 ರಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಕುಮಾರ ಪಥ, ಪಂಚರತ್ನ ರಥಯಾತ್ರೆ ಹಾಗೂ ಮುಡಾ ಪಾದಯಾತ್ರೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ರಂಗಸ್ವಾಮಿ ಸ್ಪಷ್ಟಪಡಿಸಿದರು.

ನನ್ನ ಮೇಲೆ ₹ 45 ಲಕ್ಷ ದುರ್ಬಳಕೆ ಆಧಾರರಹಿತ ಆರೋಪ ಮಾಡಲಾಗಿದೆ. ನಾನು ಯಾವುದೇ ಗುತ್ತಿಗೆದಾರ ಅಲ್ಲ. ₹45 ಲಕ್ಷ ಹಾಗಿರಲಿ, 10 ರುಪಾಯಿ ಬಿಲ್ ಮಾಡಿಸಿಕೊಂಡಿರುವುದನ್ನು ಸಾಬೀತುಪಡಿಸಿದರೆ ಆ ₹ 45 ಲಕ್ಷ ರೂಪಾಯಿಯನ್ನೇ ಕೃಷ್ಣಮೂರ್ತಿ ಅವರಿಗೆ ಉಚಿತವಾಗಿ ನೀಡಲು ಸಿದ್ಧ ಎಂದು ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ವಿ.ಬಾಲರಘು, ಸಾಬರಪಾಳ್ಯ ಜಿಯಾ, ನಾಗಭೋವಿದೊಡ್ಡಿ ಮಂಜುನಾಥ್, ವಿನಯ್, ಕಲ್ಯಾ ನಂಜುಂಡಿ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿಯಲ್ಲಿ ಪುರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.