ಸಾರಾಂಶ
ವಿರೋಧ ಪಕ್ಷದ ನಾಯಕನ ಆಯ್ಕೆ ವಿಷಯದಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವಿರೋಧ ಪಕ್ಷದ ನಾಯಕನ ಆಯ್ಕೆ ವಿಷಯದಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯ-ಕಿರಿಯ ಶಾಸಕರ ಅಭಿಪ್ರಾಯ ಸಂಗ್ರಹಿಸಿ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗಿದೆ. ವೀಕ್ಷಕರಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ ಗೌತಮ್ ಅವರು ಅಂದು ಬೆಳಗ್ಗೆ ಮೊದಲು ಶಾಸಕರನ್ನು ಪ್ರತ್ಯೇಕವಾಗಿ ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ನಿರ್ಧಾರ ಪ್ರಕಟಿಸಿಡಿದ್ದಾರೆ ಎಂದರು.
ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್. ಅಶೋಕ ಅವರು ಸತತವಾಗಿ 7 ಬಾರಿ ಶಾಸಕರಾಗಿ ಆಯ್ಕೆಯಾದವರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಅವರಿಗಿದೆ. ಹಾಗಾಗಿ ಯಾವುದೇ ಭಿನ್ನಾಭಿಪ್ರಾಯ ನಮ್ಮಲ್ಲಿ ಇಲ್ಲ ಎಂದರು.ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಯಾವುದೇ ಜನಪರ ಕೆಲಸ ಆಗುತ್ತಿಲ್ಲ. ಡಿ. 4ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸಮರ್ಥವಾಗಿ ಮಾತನಾಡುತ್ತೇವೆ. ನಮಗೆ ಸರ್ಕಾರದ ಬಗ್ಗೆ ಯಾವುದೇ ರೀತಿಯ ಮೃದು ಧೋರಣೆ ಇಲ್ಲ. ಆರ್ . ಅಶೋಕ ನೇತೃತ್ವದಲ್ಲಿ ರಾಜ್ಯದ ಆಡಳಿತ ವೈಖರಿ ಕುರಿತು ಪ್ರಶ್ನಿಸಲಾಗುವುದು ಎಂದರು.