ಈ ಶಾಸಕರು ಸ್ವಾಮಿಗಳು, ಅಧಿಕಾರಿಗಳು, ರೈತರು ಯಾರನ್ನು ಬಿಡುತ್ತಿಲ್ಲ, ಅಷ್ಟೊಂದು ಕ್ರೂರಿ. ಅವರದ್ದೇ ಸಮಾಜದ ಸ್ವಾಮಿಗಳನ್ನು ಬಿಡುತ್ತಿಲ್ಲ ಎಂದ ಮೇಲೆ ಉಳಿದ ಸ್ವಾಮಿಗಳ ಗತಿಯೇನು? ಎಂದು ಆದರಳ್ಳಿ ಗ್ರಾಮದ ಗವಿಮಠದ ಕುಮಾರ ಮಹಾರಾಜ ಶ್ರೀಗಳು ಹೇಳಿದರು.
ಶಿರಹಟ್ಟಿ: ಶಾಸಕ ಡಾ. ಚಂದ್ರು ಲಮಾಣಿ ಅವರ ಮೇಲೆ ಇತ್ತೀಚೆಗೆ ನಡೆದ ಲೋಕಾಯಕ್ತ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆರೋಪ ಮಾಡಿರುವ ಗುತ್ತಿಗೆದಾರ ಸಹ ಯಾರು ಎಂಬುದು ನಮಗೆ ತಿಳಿದಿಲ್ಲ ಎಂದು ಆದರಳ್ಳಿ ಗ್ರಾಮದ ಗವಿಮಠದ ಕುಮಾರ ಮಹಾರಾಜ ಶ್ರೀಗಳು ಸ್ಪಷ್ಟಪಡಿಸಿದರು.
ಸೋಮವಾರ ಭಕ್ತರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈರಲ್ ಆಗಿರುವ ಧ್ವನಿ ನಮ್ಮದೇ. ಅದನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ. ಇನ್ನು ನಾನು ಮಾತನಾಡಿದ್ದು ಒಂದು ಪಕ್ಷದ ಮುಖಂಡ ಮತ್ತು ಪಂಚಮಸಾಲಿ ಅಧ್ಯಕ್ಷರಾಗಿದ್ದಾರೆ. ನಾಲ್ಕು ಆರು ತಿಂಗಳುಗಳ ಹಿಂದೆ ಅವರ ಕಡೆಯವರೇ ಆದ ಸೋನು ಲಮಾಣಿ ಎನ್ನುವವರು ಪೋನ್ ಕರೆ ಮಾಡಿ, ನೀವು ಶಾಸಕರು ಒಂದಾಗಬೇಕು, ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದು ಹೇಳಿರುವ ಫೋನ್ ರೆಕಾರ್ಡಿಂಗ್ ನಮ್ಮ ಬಳಿಯಿದೆ ಎಂದು ಹೇಳಿದರು.ರೈತ ಹೋರಾಟದಲ್ಲಿ ಭಾಗವಹಿಸಿದಾಗ ಶಾಸಕರು ಬಹಳಷ್ಟು ಬೆದರಿಕೆ ಕರೆಗಳನ್ನು ಮಾಡಿದ್ದಾರೆ. ಆದರಳ್ಳಿ ಗ್ರಾಮದ ಹಿರಿಯರಿಗೆ ಫೋನ್ ಕರೆ ಮಾಡಿ, ಸ್ವಾಮಿಗಳನ್ನು ಮಠದಿಂದ ಹೊರಗೆ ಹಾಕಿದರೆ ನಿಮಗೆ ದುಡ್ಡು ಕೊಡುತ್ತೇನೆ ಎಂದಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿದ್ದರಿಂದ ನಮಗೆ ಸಿಟ್ಟು ಬಂದು ಅವರ ಬಗ್ಗೆ ಮಾತನಾಡಿದ್ದು ನಿಜ. ಆದರೆ ಅದು ಈಗಿನದ್ದಲ್ಲ ಎಂದರು.
ಈ ಶಾಸಕರು ಸ್ವಾಮಿಗಳು, ಅಧಿಕಾರಿಗಳು, ರೈತರು ಯಾರನ್ನು ಬಿಡುತ್ತಿಲ್ಲ, ಅಷ್ಟೊಂದು ಕ್ರೂರಿ. ಅವರದ್ದೇ ಸಮಾಜದ ಸ್ವಾಮಿಗಳನ್ನು ಬಿಡುತ್ತಿಲ್ಲ ಎಂದ ಮೇಲೆ ಉಳಿದ ಸ್ವಾಮಿಗಳ ಗತಿಯೇನು? ಕ್ಷೇತ್ರದ ಬಹುತೇಕರಿಗೂ ಅವರು ನೋವು ಮಾಡಿದ್ದಾರೆ. ಮತ್ತೊಬ್ಬರಿಗೆ ನೋವುಂಟು ಮಾಡುವುದೇ ಅವರ ಕಾಯಕ. ಈಗಲೂ ಅವರ ಹಿಂಬಾಲಕರು ರಾತ್ರಿ ಒಂದು ಗಂಟೆ ವರೆಗೆ ನನಗೆ ಕರೆ ಮಾಡಿ ಹೆದರಿಸುತ್ತಾರೆ. ಯಾವುದೇ ಸಮುದಾಯದಿಂದ ನನಗೆ ತೊಂದರೆ ಬಂದಿಲ್ಲ. ಎಲ್ಲರೂ ನಮ್ಮವರೆ ಎಂದು ತಿಳಿದು ವಿರಕ್ತಮಠದ ಸ್ವಾಮಿಗಳಾಗಿ ಬಸವ ತತ್ವ ಅಳವಡಿಸಿಕೊಂಡು ದೇವರ ಸೇವೆ ಮಾಡುತ್ತ ಬಂದಿದ್ದೇನೆ ಎಂದರು.ನಮ್ಮೂರ ಗೌಡ್ರಿಗೆ ಕರೆ ಮಾಡಿ ₹೨೦ ಲಕ್ಷ ಕೊಡುತ್ತೇನೆ, ಆ ಸ್ವಾಮಿಗಳನ್ನು ಮಠದಿಂದ ಹೊರಕ್ಕೆ ಹಾಕಿ ಎಂದು ಡಾ. ಲಮಾಣಿ ಹೇಳಿದ್ದಾರೆ. ಜತೆಗೆ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಸರಿಯೇ? ನಮ್ಮ ಮತ್ತು ಅವರ ನಡುವೆ ಯಾವುದೆ ವೈಷಮ್ಯಗಳಿಲ್ಲ. ಸದಾಶಿವ ಆಯೋಗದ ಒಳ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಬಿಜೆಪಿಯನ್ನು ನಾನು ವಿರೋಧಿಸಿದ್ದೆ ಮತ್ತು ಕಳೆದ ೨೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಂಜಾರ ಸಮಾಜದ ತಾಲೂಕು ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಸೇವಾಲಾಲ ಜಯಂತಿ ಸಂದರ್ಭದಲ್ಲಿ ನಾವು ತಿಳಿಸಿದ್ದೆವು. ಇಲ್ಲಿಂದ ನಮಗೆ ಮತ್ತು ಶಾಸಕರ ನಡುವೆ ವೈರತ್ವ ಪ್ರಾರಂಭಯಿತು. ಅಲ್ಲಿಂದ ಚಂದ್ರು ಲಮಾಣಿ ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಆರಂಭಿಸಿದ್ದರು. ನಾನು ಯಾವುದೆ ಪಕ್ಷದ ಮತ್ತು ವ್ಯಕ್ತಿಯ ವಿರುದ್ಧವಾಗಿಲ್ಲ. ಧರ್ಮದ ಪರವಾಗಿದ್ದು, ಅಧರ್ಮ ಮಾರ್ಗ ಹಿಡಿಯುವವರ ವಿರುದ್ಧ ನಾನು ಈಗಲೂ ಹೋರಾಡುತ್ತೇನೆ ಕುಮಾರ ಮಹಾರಾಜ ಶ್ರೀಗಳು ಹೇಳಿದರು.
ಸೋನು ಲಮಾಣಿ ಅವರು ನನ್ನ ವಿರುದ್ಧ ದೂರು ದಾಖಲಿಸುವುದಾದರೆ ದಾಖಲಿಸಲಿ, ಅವರು ಮಾತನಾಡಿರುವ ಪ್ರತಿಯೊಂದು ವಾಯ್ಸ್ ರಿಕಾಂರ್ಡಿಂಗ್ ನನ್ನ ಬಳಿ ಇದೆ. ನಾನು ಎಂದೂ ಅವರೊಡನೆ ರಾಜಿ ಆಗುವುದಿಲ್ಲ. ನಾನು ಎಂದಿಗೂ ಶಾಸಕರ ವಿರುದ್ಧವಾಗಿಯೇ ಇರುತ್ತೇನೆ. ಸೋನು ಲಮಾಣಿ ನನಗೆ ಎಂಟು ತಿಂಗಳಿಂದ ಪರಿಚಯ. ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇನೆ, ಶಾಸಕರೊಡನೆ ರಾಜಿಯಾಗಿ ಎಂದು ಹೇಳಿದ್ದರು. ಶಾಸಕರು ಸ್ವಾಮಿಗಳಿಗೆ ₹೨೦ ಲಕ್ಷ ಕೊಡುತ್ತೇನೆ ಮತ್ತು ಮಠಕ್ಕೆ ಅನುದಾನ ಕೊಡಿಸುತ್ತೇನೆ. ಅವರಿಗೆ ಸುಮ್ಮನಿರಲು ಹೇಳಿ ಎಂದು ಸೋನು ಲಮಾಣಿ ಬಳಿ ಹೇಳಿದ್ದರಂತೆ. ನಮ್ಮ ಭಾಗದ ಬಹುತೇಕ ಜನರು ದುಡಿಮೆಗಾಗಿ ಗೋವಾದಲ್ಲಿದ್ದು, ಅವರಿಗೇನಾದರೂ ತೊಂದರೆಯಾದರೆ ನಾನು ಅವರ ಭೇಟಿಗೆ ಹೋಗುತ್ತೇನೆ. ಆದರೆ ನಾನೆಂದೂ ಕ್ಯಾಸಿನೋಗೆ ಹೋಗುವುದು, ಮೋಜು-ಮಸ್ತಿ ಮಾಡುವುದು ಮಾಡಿಲ್ಲ. ಇಂತಹ ಕೆಲಸಗಳನ್ನು ನಾವು ಮಾಡಿರುವ ಬಗ್ಗೆ ಯಾರಾದರೂ ದಾಖಲೆ ಕೊಟ್ಟರೆ ನಾವು ನಮ್ಮ ಪೀಠ ತ್ಯಾಗ ಮಾಡಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು..