ಹಳೇ ವಿದ್ಯಾರ್ಥಿಗಳು ಮತ್ತು ಗುರುಗಳು ಒಂದೆಡೆ ಸಮ್ಮಿಲನ ಆಗಿರುವುದು ಹಲವು ನದಿಗಳ ಸಂಗಮದಂತಾಗಿದೆ. ಸರ್ಕಾರ ನೀಡುವ ಗೌರವಕ್ಕಿಂತ ವಿದ್ಯಾರ್ಥಿಗಳು ಸಲ್ಲಿಸುವ ಈ ಗೌರವ ಕಿರೀಟಪ್ರಾಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ವಿ.ಎಸ್. ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟಿದ್ದಾರೆ.

- ಕುಂಬಳೂರಿನಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಹಳೇ ವಿದ್ಯಾರ್ಥಿಗಳು ಮತ್ತು ಗುರುಗಳು ಒಂದೆಡೆ ಸಮ್ಮಿಲನ ಆಗಿರುವುದು ಹಲವು ನದಿಗಳ ಸಂಗಮದಂತಾಗಿದೆ. ಸರ್ಕಾರ ನೀಡುವ ಗೌರವಕ್ಕಿಂತ ವಿದ್ಯಾರ್ಥಿಗಳು ಸಲ್ಲಿಸುವ ಈ ಗೌರವ ಕಿರೀಟಪ್ರಾಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ವಿ.ಎಸ್. ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಕುಂಬಳೂರಿನಲ್ಲಿ ಭಾನುವಾರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ೧೯೮೦ ರಿಂದ ೨೦೦೦ ಸಾಲಿನಲ್ಲಿ ಶಿಕ್ಷಣ ಪಡೆದ ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಡಿಮೆ ಫಲಿತಾಂಶ ಬಂದಾಗ ಎಚ್ಚರಿಸುವ ಗ್ರಾಮಸ್ಥರು ಇಲ್ಲಿದ್ದಾರೆ. ಬೋಧಕರಾದವರು ಕರ್ತವ್ಯ ನಿಷ್ಠೆ ತೋರಿ ಪಾಠ ಬೋಧಿಸಬೇಕಿದೆ. ನಮಗೆ ಗುರುಗಳು ನೀಡಿದ ಜ್ಞಾನವನ್ನೇ ಈ ವಿದ್ಯಾರ್ಥಿಗಳಿಗೂ ಧಾರೆ ಎರೆದಿದ್ದೇವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಭೂ ಸೇನಾ ನಿಗಮದ ನಿವೃತ್ತ ಅಧಿಕಾರಿ ಕೆ.ಜಿ. ಬಸವನಗೌಡ್ರು ಮಾತನಾಡಿ, ಹಳೇ ವಿದ್ಯಾರ್ಥಿಗಳೆಲ್ಲ ಸೇರಿ ಇಂಥಹ ಅಪರೂಪದ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಮತ್ತು ನೀವೆಲ್ಲ ಸೇರಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದಲ್ಲಿ ನಮ್ಮ ಸಹಕಾರ ಇದೆ ಎಂದರು.

ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕ ಕೆ.ಚಂದ್ರಪ್ಪ ಮಾತನಾಡಿ, ಶಿಕ್ಷಣ ಹಾಗೂ ಸಂಸ್ಕಾರ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಮೂಲಕ ನಮಗೆಲ್ಲ ಖುಷಿ ಮತ್ತು ತೃಪ್ತಿ ನೀಡಿದ್ದೀರಿ. ನಿಮ್ಮ ಬದುಕು ಬಂಗಾರವಾಗಲಿ ಎಂದು ಹಳೇ ವಿದ್ಯಾಥಿಗಳಿಗೆ ಶುಭ ಹಾರೈಸಿದರು.

ನಿವೃತ್ತ ಹಿಂದಿ ಪಂಡಿತ ರಾಮಕೃಷ್ಣ ಮೂರ್ತಿ ಮಾತನಾಡಿ, ಈ ಗುರುವಂದನೆ ಈಶ್ವರನ ಪೂಜೆಗೆ ಸಮಾನ. ಮಾದರಿ ಗ್ರಾಮವಾದ ಕುಂಬಳೂರು ಮತ್ತೊಂದು ಮಾದರಿ ಕಾರ್ಯಕ್ರಮ ಸೃಷ್ಟಿಸಿದೆ. ಇಂಥ ದೊಡ್ಡ ಗುರುವಂದನೆ ಕಾರ್ಯಕ್ರಮ ಇದೇ ಮೊದಲ ಬಾರಿಗೆ ನೋಡಿದ್ದೇನೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸಿದವರು ಮತ್ತು ಶಿಕ್ಷಣ ಕಲಿತವರು ಉನ್ನತ ಸ್ಥಾನಗಳಿಗೆ ಏರಿರುವುದು ಈ ನೆಲದ ಪುಣ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲೆಯ ಡಯಟ್ ಹಿರಿಯ ಉಪನ್ಯಾಸಕಿ ಡಿ.ಎ. ಶ್ರೀದೇವಿ ಮಾತನಾಡಿ, ವೃತ್ತಿ ಜೀವನದ ಮೊದಲ ಗ್ರಾಮ ಇದಾಗಿದೆ. ಇಲ್ಲಿ ಪಾಠ ಮಾಡಿದ ಅನುಭವ, ಹಳೆಯ ವಿದ್ಯಾರ್ಥಿಗಳ ಗುರುಭಕ್ತಿಯ ತುಡಿತಕ್ಕೆ ಈ ಕಾರ್ಯಕ್ರಮವು ಸಾಕ್ಷಿಯಾಗಿದೆ ಎಂದರು.

ಸರ್ಕಾರಿ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಎಸ್.ರಾಮಚಂದ್ರ ರಾವ್, ದಾವಣಗೆರೆ ಮಹಾನಗರ ಪಾಲಿಕೆಯ ಅಧಿಕಾರಿ ಕೆ.ನಾಗರಾಜ್, ಸ್ಪಂದನ ಚಾರಿಟಬಲ್ ಟ್ರಸ್ಟ್‌ನ ಡಿ.ಜೆ. ಮಂಜುನಾಥ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋವಿಂದಪ್ಪ ಮತ್ತಿತರರು ಮಾತನಾಡಿದರು.

ನಿವೃತ್ತ ಶಿಕ್ಷಕರಾದ ಎಂ.ವೈ ರಾಜವಾಡ್, ಕೆ.ಎ. ಅರಹುಣಸಿ, ಶಾಂತ ಮುಳಗುಂದ, ಕೆ.ರವಿ, ಎಚ್‌ಎಂ ನಿಂಗಪ್ಪ, ಸಾವಿತ್ರಮ್ಮ, ಜಿ.ಆರ್. ಶಿವಕುಮಾರ್, ಸರ್ವಮಂಗಳಮ್ಮ, ಪಿ.ಜಯಣ್ಣ, ಎಂ.ಡಿ. ಗದಿಗೆಪ್ಪ, ಡಿ.ರವೀಂದ್ರಪ್ಪ, ನಿವೃತ್ತ ಪ್ರಾಚಾರ್ಯ ವಿ.ಕೆ. ನಾಗರಾಜ್, ನಿವೃತ್ತ ಎಫ್‌ಡಿಎ ದೇವೇಂದ್ರಪ್ಪ, ಸಹಾಯಕ ದುರುಗಪ್ಪ ಮತ್ತಿತರರನ್ನು ಗೌರವಿಸಲಾಯಿತು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಹಳೇ ವಿದ್ಯಾರ್ಥಿ ಸಂಘಟನೆಯ ಜಿ.ಬಿ. ಗುರುಪ್ರಸನ್ನ, ಜಿ.ಗಿರೀಶ್, ಕೆ.ಜಿ. ಚಂದ್ರಶೇಖರ ಗೌಡ, ಎನ್.ಕಲ್ಲೇಶ್, ಪುಟ್ಟರಾಜ್, ಹೊರಟ್ಟಿ ರೇಖಾ, ಮಂಜುಳಾ, ತ್ರಿವೇಣಿ, ಉಷಾ, ಎನ್.ವಿಜಯ್‌ಕುಮಾರ್, ಶಂಭುಲಿಂಗ, ಬಿ.ಮಲ್ಲಿಕಾರ್ಜುನ್, ಕಾಮರಾಜ್, ಜಿಗಳಿ ರಮೇಶ್, ಎಚ್.ಎಂ. ರಮೇಶ್, ಮಂಜು, ಮೌನೇಶ್, ಪತ್ರಕರ್ತರಾದ ಎಚ್‌.ಎಂ. ಸದಾನಂದ, ಎನ್‌.ಎಲ್. ಪ್ರಕಾಶ್, ಎಂ.ಶರಣ್, ಧನಂಜಯ್, ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಸಚಿವ ಡಿ. ಸುಧಾಕರ್ ನಿಧನದ ಹಿನ್ನೆಲೆ ಗುರುಗಳು, ಹಳೇ ವಿದ್ಯಾರ್ಥಿಗಳು ಮೌನಾಚರಣೆ ಸಲ್ಲಿಸಿದರು.

- - -

-ಚಿತ್ರ-೧:

ಕುಂಬಳೂರಿನಲ್ಲಿ ಭಾನುವಾರ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ- ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.