ತಂಬಾಕು ಸೇವನೆ ತಡೆಯಲು ಹೋರಾಟ ನಡೆಸಬೇಕಿದೆ

| Published : Sep 26 2024, 11:35 AM IST / Updated: Sep 26 2024, 11:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ತಂಬಾಕು ಮತ್ತು ಮಾದಕ ವಸ್ತು ಸೇವನೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ತಡೆಯಲು ಎಲ್ಲರೂ ಜಂಟಿಯಾಗಿ ಹೋರಾಟ ನಡೆಸಬೇಕಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್‌.ಎಸ್.ಮುಧೋಳ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಂಬಾಕು ಮತ್ತು ಮಾದಕ ವಸ್ತು ಸೇವನೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ತಡೆಯಲು ಎಲ್ಲರೂ ಜಂಟಿಯಾಗಿ ಹೋರಾಟ ನಡೆಸಬೇಕಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್‌.ಎಸ್.ಮುಧೋಳ ಕರೆ ನೀಡಿದರು.

ನಗರದ ಬಿಎಲ್‌ಡಿಇ ವಿವಿಯ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಂಬಾಕು ವ್ಯಸನ ಮುಕ್ತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ತಂಬಾಕು ವ್ಯಸನ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಒಂದು ದೊಡ್ಡ ಜಾಡ್ಯವಾಗಿ ಬೆಳೆದಿದೆ. ಸರ್ಕಾರಗಳು, ವೈದ್ಯರು ಹಾಗೂ ಬೇರೆ ಬೇರೆ ಸಂಘ- ಸಂಸ್ಥೆಗಳು ಇದನ್ನು ತಡೆಯಲು ಹೋರಾಟ ನಡೆಸಿವೆ. ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ಈಗ ದೇಶದ ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ತೆರೆಯಲು ನಿರ್ಧರಿಸಿವೆ ಎಂದರು.

ಜನತೆಯ ಆರೋಗ್ಯದ ಬಗೆಗೆ ಸದಾ ತುಡಿಯುವ, ಅಪಾರ ಸಾಮಾಜಿಕ ಕಳಕಳಿ ಹೊಂದಿರುವ ಕೇಂದ್ರ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಓಪಿಡಿ ಸಂಖ್ಯೆ19ರಲ್ಲಿ ಪ್ರಾರಂಭವಾಗಿದೆ. ಇಲ್ಲಿ ಪರಿಣಿತ ಆಪ್ತ ಸಲಹಾಕಾರರು, ವೈದ್ಯರು ಲಭ್ಯವಿದ್ದಾರೆ. ಅಲ್ಲದೇ, ವ್ಯಸನ ತಡೆಗಟ್ಟಲು ಅಗತ್ಯವಿರುವ ತಪಾಸಣೆ ಪರೀಕ್ಷೆಗಳು, ಔಷಧೋಪಚಾರಗಳು ದೊರಕುತ್ತವೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಕೋರಿದರು.

ಈ ವೇಳೆ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸಂತೋಷ ರಾಮದುರ್ಗ, ಡಾ.ಎಸ್.ಪಿ.ಚೌಕಿಮಠ, ಡಾ.ಗೌತಮಿ. ಶ್ವಾಸಕೋಶಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೀರ್ತಿವರ್ಧನ ಕುಲಕರ್ಣಿ, ಡಾ.ಶ್ರೀಶೈಲ ಅಂಜುಟಗಿ, ಸಮುದಾಯ ಆರೋಗ್ಯ ವಿಭಾಗದ ಡಾ.ಸಂದೀಪ, ಡಾ.ಪೂಜಾ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.