ಲೋಕಸಭೆ ಚುನಾವಣೆಯಲ್ಲಿ ದೇಶದ ಕಾರಣಕ್ಕೆ ನಾವು ಗೆಲ್ಲಬೇಕಿದೆ: ಸಿ.ಟಿ.ರವಿ
KannadaprabhaNewsNetwork | Published : Oct 06 2023, 12:07 PM IST
ಲೋಕಸಭೆ ಚುನಾವಣೆಯಲ್ಲಿ ದೇಶದ ಕಾರಣಕ್ಕೆ ನಾವು ಗೆಲ್ಲಬೇಕಿದೆ: ಸಿ.ಟಿ.ರವಿ
ಸಾರಾಂಶ
ಲೋಕಸಭೆ ಚುನಾವಣೆಯಲ್ಲಿ ದೇಶದ ಕಾರಣಕ್ಕೆ ನಾವು ಗೆಲ್ಲಬೇಕಿದೆ: ಸಿ.ಟಿ.ರವಿ
- ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬಿಎಲ್‌ಎಗಳ ಸಭೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಕಾರಣಕ್ಕೆ ನಾವು ಗೆಲ್ಲಬೇಕಿದೆ. ಮತ್ತೊಮ್ಮೆ ಮೋದಿ ಎನ್ನುವ ಸಂಕಲ್ಪ ಇಟ್ಟುಕೊಂಡು ಬೂತ್ ಹಂತದಲ್ಲಿ ಸಂಘಟನೆಯನ್ನು ಸಕ್ರಿಯ ಮತ್ತು ಗಟ್ಟಿಗೊಳಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಗುರುವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಬಿಎಲ್‌ಎಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ಶಾಸಕರಲ್ಲೇ ಕೇವಲ ನಾಲ್ಕು ತಿಂಗಳಲ್ಲೇ ಸಂಬಂಧಗಳು ಹಳಸುತ್ತಿರುವುದನ್ನು ಗಮನಿಸಿದರೆ ಇಷ್ಟರಲ್ಲೇ ತಾಪಂ, ಜಿಪಂ ಚುನಾವಣೆ ನಡೆಸುತ್ತಾರೆ ಎಂದು ಅನ್ನಿಸುತ್ತಿಲ್ಲ. ಆದರೂ ನಾವಂತೂ ತಯಾರಿ ಮಾಡಿಕೊಳ್ಳಬೇಕು. ಈ ಕಡೆಗೆ ಗಮನ ಕೊಡಬೇಕು ಎಂದು ಸೂಚಿಸಿದರು. ಕಳೆದ 19 ವರ್ಷಗಳಿಂದ ಅಧಿಕಾರದ ರಾಜಕಾರಣ ಅನುಭವಿಸಿದ ಬಿಜೆಪಿ ಕಾರ್ಯಕರ್ತರಿಗೆ ಅದನ್ನು ಬಿಟ್ಟು ರಾಜಕಾರಣ ಮಾಡುವುದು ಕಷ್ಟ ಅನ್ನಿಸಬಹುದು. ಈಗ ಸಣ್ಣ ಸಣ್ಣ ವಿಷಯಕ್ಕೂ ಸ್ವಲ್ಪ ಪ್ರಯತ್ನ ಪಡಬೇಕು ಎನ್ನಿಸುತ್ತಿರಬಹುದು. ಜೀವನದಲ್ಲಿ ಸವಾಲುಗಳು ಬಂದಾಗ ಅವಕಾಶಗಳನ್ನು ಸೃಷ್ಟಿ ಮಾಡುತ್ತವೆ. ಕಾಲ ಹೀಗೆಯೇ ಇರುವುದಿಲ್ಲ ಎಂದು ಕೊಂಡರೆ ಅದು ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ. ಸುಖದ ಸುಪ್ಪತ್ತಿಗೆ ಇದ್ದಾಗಲೂ, ಅತ್ಯಂತ ಕೆಟ್ಟ ಪರಿಸ್ಥಿತಿ ಇದ್ದಾಗಲೂ ಕೂಡ ಈ ಎರಡು ಪದಗಳು ನಮ್ಮ ಮನಸ್ಸಿನಲ್ಲಿರಬೇಕು ಎಂದರು. ಬಿಜೆಪಿ ಅಧಿಕಾರವನ್ನ ಸಾಧನ ಎಂದು ಭಾವಿಸಿರುವ ಪಕ್ಷ. ಆದರೆ, ರಾಜಕಾರಣ ಸಿದ್ಧಾಂತಕ್ಕಾಗಿ ಮಾತ್ರ. ನಾವು ಯಾವ ಲಕ್ಷ್ಯವನ್ನು ಇಟ್ಟು ಕೊಂಡು ಕೆಲಸ ಮಾಡುತ್ತಿದ್ದೇವೋ ಅದರ ಯಶಸ್ಸಿಗೆ ಅಧಿಕಾರ ಒಂದು ಸಾಧನ ಮಾತ್ರ. ಇದರ ನಡುವೆ ಪರಿಸ್ಥಿತಿ ಜೊತೆಗೆ ರಾಜೀ ಮಾಡಿಕೊಂಡು ಬದುಕುವ ಜನ ಇತಿಹಾಸದಲ್ಲೂ ನೋಡಿದ್ದೇವೆ. ವರ್ತಮಾನದಲ್ಲೂ ನೋಡುತ್ತೇವೆ. ಅವರು ಇಂದು ಕಳೆದು ಹೋಗಿದ್ದಾರೆ. ಅವರಾರಿಗೂ ಹೆಜ್ಜೆ ಗುರುತನ್ನು ಮೂಡಿಸಲು ಸಾಧ್ಯವಾಗಿಲ್ಲ. ಪರಿಸ್ಥಿತಿಯನ್ನು ಸವಾಲಾಗಿ ಎದುರಿಸಿ ನಿಂತು ಸ್ವೀಕರಿಸುತ್ತಾರೋ ಅವರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಮಾನ ಗಳಿಸಿದ್ದಾರೆ ಎಂದು ಹೇಳಿದರು. ನಡುವಿನ ಕಾಲಘಟ್ಟದಲ್ಲಿ ಬಂದವರು ಹಾಗೂ ಅಧಿಕಾರಕ್ಕಾಗೇ ಬಂದವರಿಗೆ ಇದು ಕಷ್ಟ ಎನ್ನಿಸಬಹುದು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಪಕ್ಷ ಕಟ್ಟಿದವರಿಗೆ ಹೋಲಿಸಿದರೆ ಇಂದಿನವರದ್ದು ಕಷ್ಟವೇನಲ್ಲ. ಹಿಂದೆ ಯಾವುದೇ ವಿಷಯವನ್ನು ಪ್ರಶ್ನಿಸಲು ಹಿಂದೆ ಸ್ವಲ್ಪ ಕಸಿವಿಸಿ ಆಗುತ್ತಿತ್ತು. ಈಗ ಅದಕ್ಕೆ ಅವಕಾಶವಿಲ್ಲ. ಈ ಕಾರಣಕ್ಕೆ ಪ್ರಶ್ನಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಜನ ಪರ ಹೋರಾಟದ ಮೂಲಕ ಬೂತ್ ನಿಂದ ಹಿಡಿದು ತಾಲೂಕು, ಜಿಲ್ಲಾ, ರಾಜ್ಯ ಹಾಗೂ ಕೇಂದ್ರದ ವರೆಗೆ ನಾಯಕತ್ವ ಬೆಳೆಸಬೇಕು ಎಂದು ಕರೆ ನೀಡಿದರು. ಗಂಗಾ ಕಲ್ಯಾಣ ನಮ್ಮ ಕಾಲದಲ್ಲಿ ಮಂಜೂರಾಗಿವೆ. ಬೋರ್‌ವೆಲ್ ಕೊರೆಯಲೇ ಬೇಕು. ಆದರೆ ಅದನ್ನಿಟ್ಟುಕೊಂಡು ರಾಜಕೀಯ ಲಾಭ ಪಡೆಯಬೇಕು ಎನ್ನುವ ಪ್ರಯತ್ನ ಕಾಂಗ್ರೆಸಿಗರಿಂದ ನಡೆಯುತ್ತಿದೆ ಎಂದು ದೂರಿದರು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಕೋಟೆ ರಂಗನಾಥ್, ಈಶ್ವರಹಳ್ಳಿ ಮಹೇಶ್, ಬೆಳವಾಡಿ ರವೀಂದ್ರ, ಕೆ.ಪಿ.ವೆಂಕಟೇಶ್, ವಿಜಯಕುಮಾರ್, ಸುಧೀರ್ ಇದ್ದರು. 5 ಕೆಸಿಕೆಎಂ 2 ಚಿಕ್ಕಮಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಬಿಎಲ್‌ಎಗಳ ಸಭೆ ನಡೆಯಿತು. ಸಿ.ಟಿ. ರವಿ, ಕಲ್ಮರುಡಪ್ಪ, ಕೋಟೆ ರಂಗನಾಥ್ , ರವೀಂದ್ರ ಬೆಳವಾಡಿ ಇದ್ದರು.