ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿ ಯೂತ್ ರೆಡ್‌ಕ್ರಾಸ್ ಘಟಕವು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಅರಿವಿನ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವಿ.ಎಲ್.ಎಸ್ (ನ್ಯಾಷನಲ್ ಲೆವೆಲ್) ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಮತ್ತು ಫಸ್ಟ್ ಐಡ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಡಾ.ಕುಮಾರ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ರಸ್ತೆ ಅಪಘಾತ ಹಾಗೂ ಅವಘಡಗಳಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶವು ಪ್ರಥಮ ಸ್ಥಾನದಲ್ಲಿದೆ. ನಮ್ಮಲ್ಲಿ ಪ್ರಥಮ ಚಿಕಿತ್ಸೆ ಅರಿವಿನ ಕೊರತೆ ಇದೆ. ಹಾಗಾಗಿ ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದರು.
ಎಸ್ಪಿ ಡಾ.ಬಿ.ಟಿ.ಕವಿತಾ ಮಾತನಾಡಿ, ಜೀವ ಎನ್ನುವುದು ದೊಡ್ಡದು. ಅಪಘಾತಗಳು ಸಂಭವಿಸಿದಾಗ ರಕ್ಷಿಸಲು ನಾವು ಮುಂದಾಗಬೇಕು. ಎಷ್ಟೋ ಜನರಿಗೆ ಪ್ರಥಮ ಚಿಕಿತ್ಸೆಯ ಅರಿವಿಲ್ಲದೆ ಅಪಘಾತಕ್ಕೆ ಒಳಗಾದವರನ್ನು ಕಳೆದುಕೊಂಡಿದ್ದಾರೆ. ಅವರಿಗೆ ಸಿಗುವ ಗೋಲ್ಡನ್ ಅವರ್ಸ್ ಅಥವಾ ಪ್ಲಾಟಿನಮ್ ಅವರ್ಸ್‌ನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ ಅರಿವಿನ ಪ್ರಾಮುಖ್ಯತೆ ತಿಳಿಯಬೇಕು. ಬಾಲ್ಯದಲ್ಲಿದ್ದಾಗಲೇ ಶಾಲಾ ಹಂತದಲ್ಲಿಯೇ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ಚಾಮರಾಜನಗರ ವಿಶ್ವವಿದ್ಯಾಲಯದಲ್ಲೂ ಯೂತ್ ರೆಡ್ ಕ್ರಾಸ್ ಘಟಕವಿದೆ, ಇದರ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗಿಸಲು ಮುಂದಾಗುತ್ತೇವೆ ಎಂದರು. ನಮ್ಮ ನೆರಹೊರೆಯವರನ್ನು ರಕ್ಷಿಸಿಕೊಳ್ಳಬೇಕು. ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ರಸ್ತೆ ಅಪಘಾತಗಳ ಸನ್ನಿವೇಶಗಳು ಕಂಡುಬಂದಲ್ಲಿ ಅವರಿಗೆ ಸಹಾಯ ಹಸ್ತ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಧ್ಯಾಪಕರು ಯೂತ್ ರೆಡ್ ಕ್ರಾಸ್ ಸಂಸ್ಥೆಯ ಘಟಕದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಎಂ.ಮಹೇಶ್ ಮಾತನಾಡಿ, ಮೊದಲ ನೊಬೆಲ್ ಪ್ರಶಸ್ತಿಯನ್ನು ರೆಡ್‌ಕ್ರಾಸ್ ಸಂಸ್ಥೆಗೆ ನೀಡಲಾಗಿದೆ. ಪ್ರಪಂಚದಾದ್ಯಂತ ಅನೇಕರು ರೆಡ್‌ಕ್ರಾಸ್ ಸಂಸ್ಥೆಯಲ್ಲಿ ತೊಡಗಿಸಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಅಗ್ನಿಶಾಮಕ ದಳದ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಪಾಟೀಲ್ ಅವರು ಅಗ್ನಿ ಅವಘಡಗಳಾದರೆ ಹೇಗೆ ನಿಲ್ಲಿಸಬೇಕು, ಅಲ್ಲಿಂದ ಜನರನ್ನು ಹೇಗೆ ಪಾರು ಮಾಡಬೇಕು ಎಂಬ ಬಗ್ಗೆ ಚರ್ಚೆ ಸಂವಾದದ ಮೂಲಕ ವಿವರ ನೀಡಿದರು. ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ.ಜಿ.ವಿ. ವೆಂಕಟರಮಣ, ಪಿ.ಎಂ.ಇ.ಬಿ. ನಿರ್ದೇಶಕ ಡಾ. ವಿ.ಜೆ. ಸಿದ್ದರಾಜು, ಇದ್ದರು.