ಪ್ರಜಾಸೇವಾ ಆಂದೋಲನ ಯೋಜನೆ ಕುರಿತು ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಬಹಳ ಹೊತ್ತು ಚರ್ಚೆ ನಡೆಸಿದ್ದೇನೆ. ಈ ಯೋಜನೆ ಕಾರ್ಯರೂಪಕ್ಕೆ ಬರುವುದು ತುಂಬಾ ಕಷ್ಟ. ಅರ್ಜಿಗಳನ್ನು ಕೊಡುತ್ತೇವೆ, ಅರ್ಜಿಗಳನ್ನು ಪಡೆದುಕೊಳ್ಳುತ್ತೇವೆ. ಸರ್ಕಾರ ರೂಪಿಸುವ ಯೋಜನೆಯನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಾರ್ವಜನಿಕರ ಕುಂದುಕೊರತೆ ಆಲಿಸಿ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಪ್ರಜಾಸೇವಾ ಆಂದೋಲನದ ಪೂರ್ವಭಾವಿ ಸಭೆಯನ್ನು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನಡೆಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದರ್ಶನ್‌ ಪುಟ್ಟಣ್ಣಯ್ಯ, ಸಾರ್ವಜನಿಕರಿಗೆ ಅಗತ್ಯ ಎಲ್ಲ ಸೌಲಭ್ಯಗಳನ್ನೂ ಒದಗಿಸಲು ನಾವೆಲ್ಲ ಸಿದ್ಧರಾಗಿರಬೇಕು. ಪ್ರತಿಯೊಂದು ಪ್ರಜಾಸೇವಾ ಆಂದೋಲನ ನಡೆಯುವ ಶನಿವಾರದಂದು ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳೂ ಹಾಜರಿರಬೇಕು ಎಂದು ಸೂಚಿಸಿದರು.

ಸಂಯೋಜಿತ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ ಅಡಿ ಸದ್ಯಕ್ಕೆ ಬರುತ್ತಿರುವ ದೂರುಗಳ ಸಂಖ್ಯೆ ಎಷ್ಟು ಎಂದು ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದಾಗ ಕನಿಷ್ಠ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿವೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕಡಿಮೆ ಸಂಖ್ಯೆಯಲ್ಲಿ ದೂರು ದಾಖಲಾಗಲು ಕಾರಣವೇನು. ಜೊತೆಗೆ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾಸೇವಾ ಆಂದೋಲನ ಯೋಜನೆ ಕುರಿತು ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಬಹಳ ಹೊತ್ತು ಚರ್ಚೆ ನಡೆಸಿದ್ದೇನೆ. ಈ ಯೋಜನೆ ಕಾರ್ಯರೂಪಕ್ಕೆ ಬರುವುದು ತುಂಬಾ ಕಷ್ಟ. ಅರ್ಜಿಗಳನ್ನು ಕೊಡುತ್ತೇವೆ, ಅರ್ಜಿಗಳನ್ನು ಪಡೆದುಕೊಳ್ಳುತ್ತೇವೆ. ಸರ್ಕಾರ ರೂಪಿಸುವ ಯೋಜನೆಯನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ ಎಂದರು.

ಈ ಯೋಜನೆ ಯಶಸ್ಸಿಗೆ ನೀವೆಲ್ಲ ವಿವಿಧ ಇಲಾಖೆಗಳೊಂದಿಗೆ ಒಟ್ಟಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವು ಕೆಲಸಗಳಿಗೆ ವಿವಿಧ ಇಲಾಖೆಗಳೊಂದಿಗೆ ಅವಲಂಬನೆ ಇದೆ. ಒಂದೇ ಇಲಾಖೆಯಲ್ಲಿ ಕೆಲಸ ಮಾಡುವುದು ಸುಲಭ. ವಿವಿಧ ಇಲಾಖೆಗಳ ಮೇಲೆ ಅವಲಂಬನೆ ಇರುವುದರಿಂದ ಅದನ್ನು ಪರಿಹರಿಸುವುದು ಹೇಗೆ ಎಂದು ನೀವೆಲ್ಲ ಯೋಚಿಸಿ ಎಂದು ಸಲಹೆ ನೀಡಿದರು.

ಐಪಿಜಿಆರ್‌ಎಸ್‌ನಲ್ಲಿ ಬಂದ ದೂರುಗಳಿಗೆ ನೀವು ಬೇರೆ ಇಲಾಖೆಗಳ ಮೇಲೆ ಅವಲಂಬಿತರಾಗಬೇಕಾಗಿದೆ ಎಂದು ಹೇಳುತ್ತೀರಿ. ಆದರೆ, ಇಷ್ಟೆಲ್ಲ ಹಣ ಖರ್ಚು ಮಾಡಿ ಜಾರಿಗೆ ತರಲು ಯತ್ನಿಸುತ್ತಿರುವ ಯೋಜನೆ ವ್ಯರ್ಥವಾಗುತ್ತದೆ. ಆದ್ದರಿಂದ ಈ ಸಮಸ್ಯೆ ಪರಿಹರಿಸಲು ನಿಮ್ಮ ಸಲಹೆ ಕೊಡಿ ಎಂದು ಮನವಿ ಮಾಡಿದರು.

ಈ ವೇಳೆ ಕೆಲವು ಇಲಾಖೆಗಳ ಅಧಿಕಾರಿಗಳು ನೀಡಿದ ಸಲಹೆಗಳ ಸಾಧಕ ಮತ್ತು ಬಾಧಕಗಳನ್ನು ಕುರಿತು ವಿವರವಾಗಿ ಚರ್ಚಿಸಿದರು.

ಶನಿವಾರ ನಡೆಯುವ ಪ್ರಜಾಸೇವಾ ಆಂದೋಲನದಲ್ಲಿ ಯಾವೆಲ್ಲ ಇಲಾಖೆಗಳಿಗೆ ಸಂಬಂಧಿಸಿದ ಎಷ್ಟೆಲ್ಲ ಮನವಿಗಳು ಬಂದಿವೆ ಎಂಬ ಮಾಹಿತಿಯನ್ನು ನನಗೆ ಕೊಡಿ. ಈ ಬಾರಿ ಜನರ ಸಾಮಾನ್ಯ ಸಮಸ್ಯೆಗಳೇನು ಎಂಬುದರ ಕುರಿತು ನಿಗಾ ವಹಿಸಿ. ಪ್ರತಿಯೊಂದು ವಿಭಾಗಕ್ಕೂ ಸಂಬಂಧಿಸಿದಂತೆ ಬಂದ ಮನವಿಗಳ ಕುರಿತು ಮಾಹಿತಿ ಸಿಕ್ಕರೆ ಆಟೋಮೇಟ್‌ ಮಾಡಿ ಸೇವೆಯನ್ನು ಬೇಗ ಒದಗಿಸಲು ಸಾಧ್ಯವಾಗುತ್ತದೆ ಎಂದು ಸೂಚಿಸಿದರು.

ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿ ನೋಡಿದ್ದೇನೆ. ನಾವು ಈಗಾಗಲೇ ಮೇಲುಕೋಟೆ ವಿಧಾನಸಭೆ ವ್ಯಾಪ್ತಿ ನಡೆಸಿರುವ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಯೋಜನೆಯಂತೆ ಇದೆ. ಎಷ್ಟೋ ಜನರಿಗೆ ಬರೆಯಲು ಬರುವುದಿಲ್ಲ. ಆದ್ದರಿಂದ ಅಗತ್ಯ ಸಿಬ್ಬಂದಿಯನ್ನು ಬಳಸಿಕೊಳ್ಳ ಎಂದು ಅಧಿಕಾರಿಗಳಿಗೆ ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.