ನಮ್ಮನಮ್ಮಲ್ಲೇ ಒಡಕುಂಟುಮಾಡುವವರ ಬಗ್ಗೆ ಎಚ್ಚರದಿಂದ ಇರಬೇಕು

| Published : Apr 24 2025, 12:01 AM IST

ನಮ್ಮನಮ್ಮಲ್ಲೇ ಒಡಕುಂಟುಮಾಡುವವರ ಬಗ್ಗೆ ಎಚ್ಚರದಿಂದ ಇರಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮನಮ್ಮಲ್ಲೇ ಬಿರುಕು ಉಂಟುಮಾಡುವ ಅನೇಕ ಶಕ್ತಿಗಳು ಸಮಾಜದಲ್ಲಿವೆ. ಅವೆಲ್ಲವನ್ನೂ ಮೆಟ್ಟಿ ನಿಂತು ಒಗ್ಗಟ್ಟಾಗಿರಬೇಕು ಹಾಗೂ ಎಲ್ಲರೂ ಒಂದೇ ಎಂಬಂತೆ ಸಾಮರಸ್ಯದಿಂದ ಸಹೋದರರಂತೆ ಜೀವನ ನಡೆಸಬೇಕು ಎಂದು ಎಸ್.ಸಿ, ಎಸ್.ಟಿ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕ್ಷರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಮಗ್ಗೆ ರಾಜೇಂದ್ರ ಕರೆ ನೀಡಿದರು. ಎಲ್ಲ ಮಹನೀಯರು ತಮ್ಮ ಜೀವನದಲ್ಲಿ ಎಲ್ಲಾ ಸಮುದಾಯದ ಅಭ್ಯುದಯಕ್ಕಾಗಿ ಅನುಭವಿಸಿದ ಕಷ್ಟ, ನೋವು ನಲಿವುಗಳ ಬಗ್ಗೆ ನಾವೆಲ್ಲ ತಿಳಿಯಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಮ್ಮನಮ್ಮಲ್ಲೇ ಬಿರುಕು ಉಂಟುಮಾಡುವ ಅನೇಕ ಶಕ್ತಿಗಳು ಸಮಾಜದಲ್ಲಿವೆ. ಅವೆಲ್ಲವನ್ನೂ ಮೆಟ್ಟಿ ನಿಂತು ಒಗ್ಗಟ್ಟಾಗಿರಬೇಕು ಹಾಗೂ ಎಲ್ಲರೂ ಒಂದೇ ಎಂಬಂತೆ ಸಾಮರಸ್ಯದಿಂದ ಸಹೋದರರಂತೆ ಜೀವನ ನಡೆಸಬೇಕು ಎಂದು ಎಸ್.ಸಿ, ಎಸ್.ಟಿ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕ್ಷರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಮಗ್ಗೆ ರಾಜೇಂದ್ರ ಕರೆ ನೀಡಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ರವರ ೧೧೮ನೇ ಜನ್ಮ ದಿನಾಚರಣೆಯನ್ನು ಜ್ಯೋತಿ ಬೆಳಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಾಬು ಜಗಜೀವನ್ ರಾಮ್ ಅವರು ಹಾಗೂ ಅಂಬೇಡ್ಕರ್ ಅವರು, ಸೇವಾಲಾಲ್ ಅವರು ಹಾಗೂ ಮಹರ್ಷಿ ವಾಲ್ಮೀಕಿ ಅವರ ಜನ್ಮ ದಿನ ಆಚರಣೆ ಮಾಡುವುದು, ಇತರರಿಗೂ ಮಾದರಿಯಾಗಿರಲಿ ಎಂದು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಎಲ್ಲ ಮಹನೀಯರು ತಮ್ಮ ಜೀವನದಲ್ಲಿ ಎಲ್ಲಾ ಸಮುದಾಯದ ಅಭ್ಯುದಯಕ್ಕಾಗಿ ಅನುಭವಿಸಿದ ಕಷ್ಟ, ನೋವು ನಲಿವುಗಳ ಬಗ್ಗೆ ನಾವೆಲ್ಲ ತಿಳಿಯಬೇಕಿದೆ ಎಂದರು.

ಇನ್ನು ಈ ಎಲ್ಲ ಮಹನೀಯರು ದೀನದಲಿತರಷ್ಟೇ ಅಲ್ಲದೆ ಸರ್ವಜನಾಂಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ಎಲ್ಲ ಮಹನೀಯರು ನಮಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೂ ತಿಳಿಸುವ ಮೂಲಕ ಮಹನೀಯರ ಜನ್ಮ ದಿನಾಚರಣೆ ಆಚರಣೆಯ ಉದ್ದೇಶ ಎಲ್ಲರಿಗೂ ತಿಳಿಯುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಭಾಷಣಕಾರರಾದ ಅರಕಲವಾಡಿ ನಾಗೇಂದ್ರ ಮಾತನಾಡಿ, ಜಯಂತಿಗಳು ಮಹಾನ್ ನಾಯಕರ ಆಶಯ ಹಾಗೂ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಇರುವ ನೆಪಗಳು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇರದೇ ಇದ್ದಿದ್ದರೆ ಇಂದು ನಾವು ಈ ಕಾರ್ಯಕ್ರಮ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ ಎಂಬುದನ್ನು ಮನನ ಮಾಡಿಕೊಳ್ಳಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇವರಾದರೆ ಸಮಾಜಕ್ಕೆ ಅಪಾಯ ಮಹಾನ್ ನಾಯಕರು ದೇವರುಗಳಾಗುವ ಬದಲು ವಿಮೋಚಕರಾಗಿಯೇ ಇರಬೇಕು. ಇಲ್ಲದಿದ್ದರೆ ಸಮುದಾಯ ಮತ್ತೆ ಪತನದತ್ತ ಸಾಗುತ್ತದೆ ಎಂಬುದನ್ನು ಯಾರೂ ಕೂಡ ಮರೆಯಬಾರದು ಎಂದ ಅವರು ಬಾಬಾ ಸಾಹೇಬರು ಸಮುದಾಯದ ನೌಕರರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಹಾಸನ ಜಿಲ್ಲಾ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘ ಸಮುದಾಯದ ಪರವಾಗಿ ಹೋರಾಟ ಮಾಡಿರುವ ಮುಖಂಡರುಗಳನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರ ಮಾಡಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಇನ್ನು ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶೇಕಡ ೪೯.೫ರಷ್ಟು ಮೀಸಲಾತಿ ಸರ್ಕಾರಿ ಕ್ಷೇತ್ರದಲ್ಲಿ ಮಾತ್ರ ಇದೆ. ದೇಶದಲ್ಲಿ ಸರ್ಕಾರಿ ಕ್ಷೇತ್ರ ಇರುವುದು ಕೇವಲ ಶೇಕಡಾ ೨ರಷ್ಟು ಮಾತ್ರ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸದೃಢರಾಗಬೇಕು. ಎಲ್ಲರೂ ತಿಳಿಯಬೇಕಾಗಿರುವುದು ಶೇಕಡಾ ನೂರರಲ್ಲಿ ಭೂಮಿ, ಕೈಗಾರಿಕೆ ಸೇರಿದಂತೆ ಇತರೇ ರೂಪದಲ್ಲಿದ್ದು ಹೆಚ್ಚಿನ ಪ್ರಮಾಣ ಉಳ್ಳವರ ಕೈವಶದಲ್ಲಿಯೇ ಇದೆ. ಶೇಕಡ ೨ರಷ್ಟು ಮೀಸಲಾತಿಯಲ್ಲಿ ಶೇಕಡಾ ೧ರಷ್ಟು ಮೀಸಲಾತಿ ಉಳ್ಳವರಿಗೆ ಸೇರಿದೆ. ಇದೆಲ್ಲವನ್ನೂ ಅರಿತು ಜೀವನ ಶೈಲಿ ರೂಪಿಸಿಕೊಳ್ಳಬೇಕು. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸದೃಢರಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ದಲಿತ ಮುಖಂಡರಾದ ಎಚ್.ಪಿ. ಶಂಕರ್ ರಾಜು, ಸಮಾಜಸೇವಕರಾದ ಧರ್ಮಪ್ಪ ನಾಯಕ, ದಂಡೋರ ಮಂಜುನಾಥ್, ಜಾಂಬವ ಸೇನೆಯ ಅರಕಲಗೂಡು ನಿಂಗರಾಜು, ಕೆ.ಡಿ.ಎಸ್.ಎಸ್ ತಾಲೂಕು ಸಂಚಾಲಕರಾದ ಬಾಣಾವರ ಮಹೇಶ್, ಹಿರಿಯ ಮುಖಂಡರ ಆಲೂರು ವೆಂಕಟಯ್ಯ, ಅರಸಪ್ಪ, ಹೊಳೆನರಸೀಪುರ ನಾಗರಾಜ್, ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಸಂಘದ ಸದಸ್ಯರಾದ ಕೆ.ಸಿ. ರಘುರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯ ಚಟುವಟಿಕೆ ಹಾಗೂ ಕಾರ್ಯಕ್ರಮ ಕುರಿತು ಮಾತನಾಡಿದರು. ಸಂಘದ ಸದಸ್ಯರಾದ ಗೌತಮ್ ಸ್ವಾಗತಿಸಿದರು, ಸಂಘದ ಲೆಕ್ಕ ಪರಿಶೋಧಕರಾದ ರಂಗರಾಜು ಸಂಘದ ವರದಿ ವಾಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜು, ಮುಖ್ಯ ಭಾಷಣಕಾರರಾದ ಅರಕಲವಾಡಿ ನಾಗೇಂದ್ರ, ಉದ್ಘಾಟಕರೂ ಹಾಗೂ ಎಸ್ಸಿ, ಎಸ್ಟಿ ಮಾಧ್ಯಮಿಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ದೊಡ್ಡಮಗ್ಗೆ, ಮುಖ್ಯ ಅತಿಥಿಗಳಾದ ಧರ್ಮಪ್ಪ ನಾಯಕ, ಸೋಮನಾಯ್ಕ್, ಹಾಗೂ ಸಂಘದ ಗೌರವಾಧ್ಯಕ್ಷರಾದ ಶಿವಣ್ಣ, ಕಾರ್ಯದರ್ಶಿ ಸೋಮಶೇಖರ್, ಲೆಕ್ಕಪರಿಶೋಧಕರಾದ ರಂಗರಾಜು, ಹಿರಿಯ ಮುಖಂಡರಾದ ಎಚ್. ಪಿ.ಶಂಕರ ರಾಜು, ದಂಡೋರ ಡಾ.ಸಿ.ಎನ್.ಮಂಜುನಾಥ್, ಅರಸಪ್ಪ, ವೆಂಕಟಯ್ಯ, ಅರಕಲಗೂಡು ನಿಂಗರಾಜು, ದಾಸಪ್ಪ, ಬಾಣಾವರ ಮಹೇಶ್, ಕ್ರಾಂತಿಗೀತೆ ಹಾಡಿದ ವೀರೇಶ್ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.