ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಅತಿಹೆಚ್ಚು ಕೃಷ್ಣಮೃಗಗಳಿರುವ ತಾಲ್ಲೂಕು ಶಿಡ್ಲಘಟ್ಟ, ಇವುಗಳ ಆಟಾಟೋಪದಿಂದಾಗಿ ಬೆಳೆಹಾನಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ, ಕಾಡುಗಳು ಹೆಚ್ಚಾದರೆ ಇಂಥಹ ಪ್ರಕರಣಗಳು ಕಡಿಮೆಯಾಗುತ್ತವೆ ಹಾಗೂ ವನ್ಯಮೃಗಗಳು ಸಹ ಸ್ವಚ್ಛಂದವಾಗಿರಲು ಸಾಧ್ಯವಾಗುತ್ತದೆ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಮನುಷ್ಯ ತಲುಪದಿರುವ ಜಾಗಕ್ಕೂ ತಲುಪಿರುವ ಪ್ಲಾಸ್ಟಿಕ್ವೇಸ್ಟ್ ಹಾಗೂ ಇದರಿಂದ ಪರಿಸರದಲ್ಲಿ ಆಗುತ್ತಿರುವ ಅಸಮತೋಲನವನ್ನು ತಪ್ಪಿಸಲು ಯುವಜನತೆ ಕಂಕಣ ತೊಡಬೇಕೆಂದು ಸಮಾಜಸೇವಕ ಸಂದೀಪ್ ರೆಡ್ಡಿ ಹೇಳಿದರು. ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ , ಏಷ್ಯಾ ನೆಟ್ ಸುವರ್ಣ ನ್ಯೂಸ್ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ತಾಲೂಕು ಮಟ್ಟದ ಚಿತ್ರಕಲಾ ಸ್ವರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಕ್ರೀಟ್‌ ಕಾಡು ಸಮೃದ್ಧಿ

ನೈಜ ಕಾಡುಗಳು ನಾಶವಾಗಿ ಕಾಂಕ್ರೀಟ್ ಕಾಡುಗಳು ವೃದ್ಧಿಯಾಗಿ ವನ್ಯಮೃಗಗಳ ಸ್ಥಳಗಳಿಗೆ ಮಾನವನ ಪ್ರವೇಶವಾಗಿರುವುದರಿಂದಲೇ ಕಾಡುಪ್ರಾಣಿಗಳ ದಾಳಿ ಪ್ರಕರಣಗಳು ಹೆಚ್ಚಾಗಿವೆ ಎಂದು ಶ್ರೀ ಸರಸ್ವತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎನ್. ಶ್ರೀಕಾಂತ್ ತಿಳಿಸಿದರು.

ವಲಯ ಅರಣ್ಯಾಧಿಕಾರಿ ರಾಜೇಶ್ ಗವಾಲ್ ಮಾತನಾಡಿ ಜಿಲ್ಲೆಯಲ್ಲಿಯೇ ಅತಿಹೆಚ್ಚು ಕೃಷ್ಣಮೃಗಗಳಿರುವ ತಾಲ್ಲೂಕು ಶಿಡ್ಲಘಟ್ಟ, ಇವುಗಳ ಆಟಾಟೋಪದಿಂದಾಗಿ ಬೆಳೆಹಾನಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ, ಕಾಡುಗಳು ಹೆಚ್ಚಾದರೆ ಇಂಥಹ ಪ್ರಕರಣಗಳು ಕಡಿಮೆಯಾಗುತ್ತವೆ ಹಾಗೂ ವನ್ಯಮೃಗಗಳು ಸಹ ಸ್ವಚ್ಛಂದವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಏಷ್ಯಾ ನೆಟ್ ಸುವರ್ಣ ನ್ಯೂಸ್ ವರದಿಗಾರದ ರವಿ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸರ್ಕಾರಿ ಪ್ರೌಢ ಶಾಲೆಯ ಚಿತ್ರ ಕಲಾವಿದರಾದ ಸಿ.ಎಲ್.ಸತೀಶ್ ಹಾಗೂ ನಾಗರಾಜ್ ತೀರ್ಪುಗಾರರಾಗಿ ಭಾಗವಹಿಸಿದ್ದರು

ಚಿತ್ರ ಸ್ಪರ್ಧೆ ಫಲಿತಾಂಶ:

ಪ್ರಥಮ ಬಹುಮಾನ ಸರ್ಕಾರಿ ಪ್ರೌಢಶಾಲೆ ಮೇಲೂರಿನ ಕಾರ್ತಿಕ್ ಗೌಡ, ದ್ವಿತೀಯ ಬಹುಮಾನ ಸರ್ಕಾರಿ ಪ್ರೌಢಶಾಲೆ ಶಿಡ್ಲಘಟ್ಟದ ಮದೀಯ ಫಾತೀಮಾ,

ತೃತೀಯ ಬಹುಮಾನ ದ ಕ್ರೆಸೆಂಟ್ ಸ್ಕೂಲ್ ನ ಲಿಕ್ಷಿತಾ ಪಡೆದರು. ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ೩ ಮಂದಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಪರ್ಧಿಗಳು ರಾಜ್ಯಮಟ್ಟದ ಸ್ವರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ .

ಗಣ್ಯರಿಗೆ ಸನ್ಮಾನ:

ದಿ ಕ್ರೆಸೆಂಟ್ ಶಾಲೆಯ ಮಹಮದ್ ತಮೀಮ್ ಅನ್ಸಾರಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಶಶಿಕುಮಾರ್ , ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಯೀದಾ ಇಶ್ರತ್ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುನಾಥ್ ಶಾಲೆಯ ಶಿಕ್ಷಕರಾದ ಅನ್ನಪೂರ್ಣ ಹಿರೇಮಠ್, ಹೇಮಕುಮಾರಿ, ಪ್ರಕಾಶ್ ನಂದಿಹಳ್ಳಿ, ಚಂದ್ರು, ಮಂಜುನಾಥ್ , ಭುವನ್, ಮತ್ತಿತರರು ಹಾಜರಿದ್ದರು.