ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ತನ್ವೀರ್ ಸೇಠ್ ಅವರ ನೇತೃತ್ವದಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ರೋಡ್ ಶೋ ಮತ್ತು ಪಾದಯಾತ್ರೆ ಮೂಲಕ ಮತಯಾಚಿಸಿದರು.ಗಾಯಿತ್ರಿಪುರಂ ಜಂಕ್ಷನ್ ಎಂಸಿಸಿ ಕಾಲೋನಿಯಿಂದ ಆರಂಭವಾದ ಪ್ರಚಾರ ಕಾರ್ಯವು ಯರಗನಹಳ್ಳಿ, ಡಾ. ರಾಜಕುಮಾರ್ ರಸ್ತೆ, ವಿದ್ಯಾನಗರ, ರಾಘವೇಂದ್ರನಗರ, ಗೌಸಿಯಾನಗರ, ಕ್ಯಾತಮಾರನಹಳ್ಳಿ, ಕೆ.ಎನ್. ಪುರ, ಕಲ್ಯಾಣಗಿರಿ, ಅಜೀಜ್ ಸೇಠ್ ನಗರ, ಶಾಂತಿನಗರ, ರಾಜೀವ್ ನಗರದಲ್ಲಿ ಮತಯಾಚಿಸಿದರು.
ಈ ವೇಳೆ ಶಾಸಕ ತನ್ವೀರ್ ಸೇಠ್ ಮಾತನಾಡಿ, ನಮ್ಮ ಕ್ಷೇತ್ರದ ಜನರು ಒಂದು ಮತ ತಪ್ಪದೇ ನಮ್ಮ ಅಭ್ಯರ್ಥಿ ಎಂ. ಲಕ್ಷ್ಮಣ ಅವರಿಗೆ ನೀಡಬೇಕು. ನಿಮ್ಮೆಲ್ಲ ಕಷ್ಟ ಕಾರ್ಪಣ್ಯಗಳಿಗೆ, ಆಸೆ ಆಕಾಂಕ್ಷೆಗಳಿಗೆ, ನಿಮ್ಮ ಕನಸ್ಸನ್ನು ಪೂರೈಸುವ ಕೆಲಸಕ್ಕೆ ಸ್ಪಂದಿಸಿರುವುದು ನಮ್ಮ ಕಾಂಗ್ರೆಸ್ ಪಕ್ಷ. ನಿಮ್ಮನ್ನು ದಾರಿ ತಪ್ಪಿಸಲು ಹಲವಾರು ಮಂದಿ ಬರುತ್ತಾರೆ. ನಾವು ಆಲೋಚನೆ ಮಾಡಿ ಮತ ನೀಡಬೇಕು ಎಂದರು.ಸಂವಿಧಾನ ಬದಲಾವಣೆ ಮಾಡುವ ದುಸ್ಥಿತಿಯನ್ನು ಬಿಜೆಪಿಯವರು ಮಾಡಲಿಕ್ಕೆ ಹೊರಟಿದ್ದಾರೆ. ನೀವೆಲ್ಲ ನಿಮ್ಮ ಬದುಕನ್ನ ಕಟ್ಟಿಕೊಳ್ಳಲಿಕ್ಕೆ ಸ್ವಾಭಿಮಾನದ ಬದುಕು ನೆಡೆಸಲು ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ನನಗೆ ಸತತ 6 ಬಾರಿ ಅವಕಾಶ ಮಾಡಿಕೊಟ್ಟಿದ್ದೀರ, ನನಗೆ ಮಾಡಿದ ಹಾಗೆ ಲಕ್ಷ್ಮಣ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿ, ಸುಳ್ಳಿನ ಜೊತೆಗೆ ಸತ್ಯ ಹೋರಾಟ ಮಾಡುತ್ತಿದೆ. ಈ ಧರ್ಮ ಯುದ್ಧದಲ್ಲಿ ನೀವು ಯಾರಿಗೆ ಜಯಭೇರಿ ಬಾರಿಸುತ್ತಿರ ಎಂಬುದು ಮುಖ್ಯವಾಗಿದೆ. ನಮ್ಮ ದೇಶ ಸುಭಿಕ್ಷೆಯಾಗಿ ಇರಲು ಶಾಂತಿ ಸೌಹಾರ್ದತೆ ಮುಖ್ಯ. ಅದನ್ನು ರೂಪಿಸುವುದು ನಿಮ್ಮ ಕೈಯಲ್ಲಿ ಇದೆ. ಅದಕ್ಕೆ ಅಭಯ ಹಸ್ತಕ್ಕೆ ಮತ ನೀಡಿ ಎಂದು ಕೋರಿದರು.ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಮೊದಲಾದವರು ಇದ್ದರು. ನಾವು ನಿಮ್ಮ ಭಾವನೆಗಳ ಜೊತೆ ಚೆಲ್ಲಾಟ ಆಡುವರಲ್ಲ, ಭಾವನೆಗಳ ಬೇರೆಯುವವರು ಎಲ್ಲರಲ್ಲೂ ಭಾಂದವ್ಯ ಮೂಡಿಸುವವರು. ಜನಗಳ ಬಳಿ ಸುಳ್ಳು ಹೇಳಿ, ಅವರ ಜೀವನ ಹಾಳು ಮಾಡುವ ವ್ಯಕ್ತಿಗಳು ನಮ್ಮ ಪಕ್ಷದಲ್ಲಿ ಇಲ್ಲ. ಈಗಾಗಲೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳು ಬಡವರ ಬದುಕು ಸುಧಾರಿಸುತ್ತಿದೆ. ಅದನ್ನು ಮತ್ತಷ್ಟು ಬಲ ಪಡಿಸಲು ಕೇಂದ್ರದಿಂದ ಮತ್ತೆ 5 ನ್ಯಾಯಗಳನ್ನೂ ಕೊಡಲಿದೆ.
- ತನ್ವೀರ್ ಸೇಠ್, ಶಾಸಕ