ಗಜೇಂದ್ರಗಡದ ರೋಣ ರಸ್ತೆಯ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯಲ್ಲಿ ಶನಿವಾರ ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ೨೦೨೪ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಮತ್ತು ಉರ್ದು ಕವಿಗೋಷ್ಠಿ ನಡೆಯಿತು.
ಗಜೇಂದ್ರಗಡ: ಪ್ರತಿಯೊಂದು ಬರಹವೂ ಸಮಾಜ ಕಟ್ಟುವಂತಹ ಬರಹವಾಗಬೇಕೇ ಹೊರತು ಸಮಾಜ ಒಡೆಯುವ ಬರಹ ಆಗಬಾರದು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಸ್ಥಳೀಯ ರೋಣ ರಸ್ತೆಯ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯಲ್ಲಿ ಶನಿವಾರ ನಡೆದ ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ೨೦೨೪ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಮತ್ತು ಉರ್ದು ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬರಹಗಳಾಗಬೇಕು. ಸಾಹಿತ್ಯಕ್ಕೆ ವಿಶೇಷವಾದ ಶಕ್ತಿಯಿದ್ದು, ಯಾವುದೇ ಹೋರಾಟ, ವಿಚಾರ ಹಾಗೂ ಕ್ರಾಂತಿ ಇರಲಿ ಸಾಹಿತ್ಯದಿಂದ ನಡೆದು ಬಂದಿವೆ. ಪಾಲಕರು ಶಾಲೆಯಲ್ಲಿ ನಡೆಯುವ ವಾರ್ಷಿಕೋತ್ಸವ, ಇತರ ಕಾರ್ಯಕ್ರಮಗಳಿಗೆ ಉತ್ಸಾಹದಿಂದ ತೆರಳುತ್ತಾರೆಯೇ ಹೊರತು ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಚರ್ಚೆಗಳಿಗೆ, ಕನ್ನಡ ಸಾಹಿತ್ಯ ಪರಿಷತ್ ಸೇರಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳಿಗೆ ತೆರಳುವ ಆಸಕ್ತಿ ತೋರುವುದಿಲ್ಲ. ಶಿಕ್ಷಣದ ಜತೆಗೆ ಸಾಹಿತ್ಯಕ್ಕೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಸ್ಯೆಯನ್ನೇ ಮೊದಲು ಮಾಡಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಪ್ರತಿಜ್ಞೆ ಮಾಡಿ. ದೇಶದ ಉತ್ತಮ ಪ್ರಜೆಯನ್ನಾಗಿಸಲು ಶಿಕ್ಷಣ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಒಲವು ಮೂಡಿಸಲು ಮಕ್ಕಳಿಗೆ ಪ್ರೋತ್ಸಾಹವನ್ನು ಪಾಲಕರು ನೀಡಬೇಕು ಎಂದು ಹೇಳಿದರು.
ದೇಶ, ಸಮಾಜ ಬೆಸೆಯಲು, ಪೂರಕವಾಗಿ ಬರೆಯಲು ಮತ್ತು ಮಾತನಾಡಲು ಸಂವಿಧಾನ ಅಧಿಕಾರ ನೀಡಿದೆ. ಆದರೆ ಸಮಾಜ ಹಾಗೂ ದೇಶಕ್ಕೆ ಮಾರಕವಾಗಿ, ವಿರುದ್ಧವಾಗಿ ಮತ್ತು ಸಮಸ್ಯೆ ಸೃಷ್ಟಿಸಲು ಎಲ್ಲಿಯೂ ಸಂವಿಧಾನ ಅವಕಾಶ ನೀಡಿಲ್ಲ. ದೇಶಕ್ಕೆ ಪೂರಕವಾಗಿ ಮಾತನಾಡುವವರು ಹಾಗೂ ಪೂರಕವಾಗಿ ಕೆಲಸ ಮಾಡುವವರು ನಿಜವಾದ ದೇಶಪ್ರೇಮಿಗಳು ಎಂದರು.ಪ್ರಶಸ್ತಿ ಪುರಸ್ಕೃತ ಡಾ. ಐ.ಜೆ. ಮ್ಯಾಗೇರಿ ಮಾತನಾಡಿ, ಭಾರತದಲ್ಲಿನ ಸೌಹಾರ್ದತೆ ಜಗತ್ತಿನಲ್ಲಿ ಎಲ್ಲಿಯೂ ಕಾಣಲು ಸಿಗಲ್ಲ. ಬಡತನದ ರೋಗಕ್ಕೆ ಮದ್ದು ಎಂದರೆ ಅಕ್ಷರ ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಇಂದಿರಾ ಕ್ಯಾಂಟಿನ್ ಯೋಜನೆ ಯು.ಟಿ. ಖಾದರ ಅವರ ದೂರದೃಷ್ಟಿಯ ಕಲ್ಪನೆಯಾಗಿದೆ. ಗಜೇಂದ್ರಗಡ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಂತಹ ಭಾವೈಕ್ಯ ಪಟ್ಟಣಕ್ಕೆ ಆಗಮಿಸಿದ್ದು, ಸಮಾನ ಮನಸ್ಸುಗಳಿಗೆ ಮತ್ತಷ್ಟು ಬಲಬಂದಿದೆ ಎಂದರು.ಎ.ಕೆ. ಕುಕ್ಕಿಲ ಮಾತನಾಡಿ, ಮುಸ್ಲಿಂ ಲೇಖಕರ ಸಂಘವು ಕಳೆದ ನಾಲ್ಕು ದಶಕಗಳಿಂದ ಕವಿಗೋಷ್ಠಿ, ಪ್ರಬಂಧ ಸೇರಿ ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಅನೇಕ ಸಾಹಿತಿಗಳನ್ನು ಗುರುತಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಮಾತನಾಡಿ, ತೋಂಟದಾರ್ಯ ಮಠದ ಆಶಯವೇ ಪಟ್ಟಣದಲ್ಲಿ ವ್ಯಕ್ತವಾಗುತ್ತಿದೆ. ಮಾನವ ಸಹಜ ಸೌಹಾರ್ದತೆ ಅಗತ್ಯವಾಗಿದ್ದು, ಉಳಿಸಿ, ಬೆಳಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.ಕನ್ನಡ ಮತ್ತು ಉರ್ದು ಕವಿಗೋಷ್ಠಿ ನಡೆದ ಬಳಿಕ ಗಜೇಂದ್ರಗಡ ಸೇರಿ ಸುತ್ತಮತ್ತಲಿನ ವಿವಿಧ ಸಂಘಟನೆ ಹಾಗೂ ಸಮುದಾಯಗಳಿಂದ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸನ್ಮಾನಿಸಿದರು.
ಹಸನ ತಟಗಾರ, ಬಿ.ಎ. ಕೆಂಚರಡ್ಡಿ, ಬಿ.ಎ. ಮಹಮದ್ ಅಲಿ, ಎ.ಎಸ್. ಮಕಾನದಾರ, ಡಾ. ಹಸೀನಾ ಎಚ್. ಖಾದ್ರಿ, ಶಿಲ್ಪಾ ಮ್ಯಾಗೇರಿ, ಅರ್ಶದ್ ಹಿರೇಹಾಳ, ಮುರ್ತುಜಾಬೇಗಂ ಕೊಡಗಲಿ, ಅನ್ವರಅಹ್ಮದ ವಣಗೇರಿ, ಖಾಝಿ ಶಬ್ಬೀರ ಅಹ್ಮದ್ ಶಬ್ಬೀರ ಮನ್ಸೂರಿ, ವಿ.ಆರ್. ಗುಡಿಸಾಗರ, ಸಿದ್ದಪ್ಪ ಬಂಡಿ, ಎಚ್.ಎಸ್. ಸೋಂಪುರ, ಅಜಿತ ಬಾಗಮಾರ, ಸುಭಾನಸಾಬ ಆರಗಿದ್ದಿ, ಮುರ್ತುಜಾ ಡಾಲಾಯತ್, ರಾಜು ಸಾಂಗ್ಲೀಕರ, ಶ್ರೀಧರ ಬಿದರಳ್ಳಿ, ರಫೀಕ್ ತೋರಗಲ್, ದಾವಲ ತಾಳಿಕೋಟಿ, ರವಿ ಹೊನವಾಡ, ಎಂ.ಎಸ್. ಹಡಪದ, ಶರಣಪ್ಪ ಚಳಗೇರಿ, ಗುಲಾಂ ಹುನಗುಂದ ಇದ್ದರು.