ನಗರದ ಮಲ್ಲತ್ತಹಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಎಜುಕೇಶನ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಜೆಎಸ್‌ ಉತ್ಸವ-2025ಕ್ಕೆ ಗಾಯಕಿ ಅರ್ಚನಾ ಉಡುಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯ, ವಿನಾಶದ ಅಂಚಿನಲ್ಲಿರುವ ಕಾಲಘಟ್ಟದಲ್ಲಿದ್ದು, ಯುವ ಜನಾಂಗವು ಎಚ್ಚೆತ್ತುಕೊಂಡು ನಮ್ಮ ಸಂಸ್ಕೃತಿ, ಸಂಸ್ಕಾರ, ಹಿರಿಯರು, ಪೋಷಕರನ್ನು ಗೌರವಿಸುವ ಮೂಲಕ ಸಂಸ್ಕಾರಯುತ ಸಮಾಜ ಕಟ್ಟಬೇಕಾಗಿದೆ ಎಂದು ಗಾಯಕಿ ಅರ್ಚನಾ ಉಡುಪ ಕರೆ ನೀಡಿದ್ದಾರೆ.

ನಗರದ ಮಲ್ಲತ್ತಹಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಎಜುಕೇಶನ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಜೆಎಸ್‌ ಉತ್ಸವ 2025ಕ್ಕೆ ಚಾಲನೆ ನೀಡಿ ಮಾತನಾಡಿ, ಅಂಧಾನುಕರಣೆಯ ವಿದೇಶಿ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ತಿರಸ್ಕರಿಸಿ ಮಾತೃ ಭಾಷೆ, ಸಂಸ್ಕೃತಿ ಪರಂಪರೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಜೆಎಸ್ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಡಾ.ಜಯರಾಮ್ ಶೆಟ್ಟಿ ಮಾತನಾಡಿ, ಯುವ ಜನಾಂಗ ತಮ್ಮ ಜೀವನ ಪರಿವರ್ತನೆ ಮಾಡಿಕೊಳ್ಳಬೇಕು. ಹೊಸ ವಿಷಯ ಆವಿಷ್ಕಾರ ಸತತ ಅಭ್ಯಾಸದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಾಂಸ್ಕೃತಿಕ, ಕ್ರೀಡೆ, ಪಿಯುಸಿ ಡಿಗ್ರಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷೆ ಸುಮಾ ಜೆ.ಶೆಟ್ಟಿ, ಕಾರ್ಯದರ್ಶಿ ನಿತೀಶ್, ಪ್ರಾಂಶುಪಾಲೆ ವಿಜಯಲಕ್ಷ್ಮಿ, ನಿರ್ಮಾಣ್‌ ಸಮೂಹ ಶಿಕ್ಷಣ ಸಮಿತಿಯ ಅಧ್ಯಕ್ಷ ಓ.ಮೋಹನ್ ಕುಮಾರ್, ಪ್ರೊ.ಮುರಳಿದರ್ ಹೆಗಡೆ ಉಪಸ್ಥಿತರಿದ್ದರು.