ಕೊಡವರ ಹಕ್ಕು ಪ್ರತಿಪಾದನೆಗೆ ಮುಂದಾಗಬೇಕಾಗಿದೆ: ಪೊನ್ನಣ್ಣ

| Published : Oct 10 2025, 01:02 AM IST

ಸಾರಾಂಶ

ಜಮ್ಮಾ ಕೋವಿ ಹಕ್ಕು 2029ರಲ್ಲಿ ಆತಂಕವಿದ್ದು ಈ ಬಗ್ಗೆ ಕೊಡವ ಸಮುದಾಯದ ಜನರು ಹಕ್ಕು ಪ್ರತಿಪಾದನೆಗೆ ಮುಂದಾಗಬೇಕಾಗಿದೆ ಎಂದು ಶಾಸಕ ಪೊನ್ನಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರಜಮ್ಮಾ ಕೋವಿ ಹಕ್ಕು 2029ರಲ್ಲಿ ರದ್ದಾಗುವ ಆತಂಕವಿದ್ದು, ಈ ಬಗ್ಗೆ ಕೊಡವ ಸಮುದಾಯದ ಜನರು ಹಕ್ಕು ಪ್ರತಿಪಾದನೆಗೆ ಮುಂದಾಗಬೇಕಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.ಅವರು ಕುಶಾಲನಗರದಲ್ಲಿ ಕೊಡವ ಸಮಾಜ ಆಶ್ರಯದಲ್ಲಿ ನಡೆದ ಕೈಲ್ ಪೊಳ್ದ್ ನಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೆಹರು ಸರ್ಕಾರದ ಅವಧಿಯಲ್ಲಿ ನೀಡಿದ ಕೋವಿ ಹಕ್ಕನ್ನು 2019ರಲ್ಲಿ ಕೇಂದ್ರ ಸರ್ಕಾರ ಬದಲಿಸಿದ್ದು, ಇದೀಗ ಪ್ರಕರಣ ನ್ಯಾಯಾಲಯದಲ್ಲಿದೆ. 2029ರ ತನಕ ಅವಕಾಶ ಸೀಮಿತಗೊಳಿಸಿದ್ದು, ಈ ಸಂಬಂಧ ಪ್ರತಿಯೊಬ್ಬರೂ ತಮ್ಮ ಹಕ್ಕಿನ ಮುಂದುವರಿಕೆ ಬಗ್ಗೆ ಪ್ರತಿಪಾದಿಸಬೇಕಾಗಿದೆ. ಈ ಅವಕಾಶ ಮುಂದಿನ ಪೀಳಿಗೆಗೂ ದೊರೆಯುವಂತೆ ಮಾಡುವ ಬಗ್ಗೆ ಹೋರಾಟ ಮುಂದುವರಿಯಲಿದೆ ಎಂದರು.

ಪತ್ರಕರ್ತ, ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾ ಅಧ್ಯಕ್ಷ ಚಾಮೆರ ಬೆಳ್ಳಿಯಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಸಮಾಜಕ್ಕೆ ಜನಾಂಗದ ಕೊಡುಗೆ ಮತ್ತು ಆಚಾರ ವಿಚಾರಗಳ ಬಗ್ಗೆ ಮಾಹಿತಿ ಒದಗಿಸಿದರು. ತಲಕಾವೇರಿ ತೀರ್ಥೋದ್ಭವ ದಿನದಂದು ರಾಜ್ಯಕ್ಕೆ ಸೀಮಿತವಾಗಿ ಸಾರ್ವಜನಿಕ ರಜೆ ಘೋಷಣೆ ಮಾಡುವ ಬಗ್ಗೆ ಶಾಸಕರಿಗೆ ಮನವಿ ಮಾಡಿದರು. ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮತ್ತು ರೋಟರಿ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಮನು ಪೆಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭಕ್ಕೆ ಮುನ್ನ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾದ ಕೆಚೇರ ಶಂಭು ಬೆಳ್ಳಿಯಪ್ಪ, ಮಂಡ್ಯೋಳಂಡ ಸುಬ್ರಮಣಿ, ಕೋಳುವಂಡ ಮಿಥಲ್ ಅವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ವಾಂಚೀರ ಮನು ನಂಜುಂಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಪುಲಿಯಂಡ ಎಂ. ಚಂಗಪ್ಪ, ಕಾರ್ಯದರ್ಶಿ ಅಯ್ಯಾಲಪಂಡ ಸಂಜು ಬೆಳ್ಳಿಯಪ್ಪ, ಸಹ ಕಾರ್ಯದರ್ಶಿ ಮೈಂದಪಂಡ ಜಗದೀಶ್ ದೇವಯ್ಯ, ಖಜಾಂಚಿ ಬೊಳ್ಳಚಂಡ ಮುತ್ತಣ್ಣ ಮತ್ತು ನಿರ್ದೇಶಕರು ಮತ್ತು ಆಡಳಿತ ಮಂಡಳಿ ನಿರ್ದೇಶಕರು ಸಮಾಜದ ಮಾಜಿ ಅಧ್ಯಕ್ಷರು ಚೇಂದಂಡ ಜಮ್ಸಿ ಪೊನ್ನಪ್ಪ, ಮಂಡೆಪಂಡ ಬೋಸ್ ಮೊಣ್ಣಪ್ಪ, ಸದಸ್ಯರು ಇದ್ದರು.