ಸರಕಾರ ಪುಸ್ತಕಗಳನ್ನು ಖರೀದಿಸುತ್ತದೆ ಎಂಬ ಆಲೋಚನೆಯನ್ನು ಕೈ ಬಿಟ್ಟು ಪುಸ್ತಕ ಮಾರಾಟಕ್ಕಾಗಿ ನಮ್ಮದೇ ಆದ ಒಂದು ಜಾಲವನ್ನು ಸರಿಯಾದ ನೆಲೆಯಲ್ಲಿ ಸೃಷ್ಟಿಸಿಕೊಳ್ಳುವುದು ಈ ಹೊತ್ತಿನ ಕಾಲದ ಅಗತ್ಯ ಎಂದು ಕಾವ್ಯ ಮನೆ ಪ್ರಕಾಶನದ ಚಾಂದ್ ಕವಿ ಚಂದ್ರ ಹೇಳಿದರು.

ಬಳ್ಳಾರಿ: ಸರಕಾರ ಪುಸ್ತಕಗಳನ್ನು ಖರೀದಿಸುತ್ತದೆ ಎಂಬ ಆಲೋಚನೆಯನ್ನು ಕೈ ಬಿಟ್ಟು ಪುಸ್ತಕ ಮಾರಾಟಕ್ಕಾಗಿ ನಮ್ಮದೇ ಆದ ಒಂದು ಜಾಲವನ್ನು ಸರಿಯಾದ ನೆಲೆಯಲ್ಲಿ ಸೃಷ್ಟಿಸಿಕೊಳ್ಳುವುದು ಈ ಹೊತ್ತಿನ ಕಾಲದ ಅಗತ್ಯ ಎಂದು ಕಾವ್ಯ ಮನೆ ಪ್ರಕಾಶನದ ಚಾಂದ್ ಕವಿ ಚಂದ್ರ ಹೇಳಿದರು.

ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದ ಎರಡನೇ ದಿನವಾದ ಭಾನುವಾರ ಜರುಗಿದ ‘ಯುವ ಪ್ರಕಾಶಕರ ತವಕ ತಲ್ಲಣ ಗೋಷ್ಠಿಯಲ್ಲಿ ಮಾತನಾಡಿದರು.ಸಾಮಾಜಿಕ ಜಾಲತಾಣಗಳು ಪುಸ್ತಕ ಲೋಕಕ್ಕೂ ಹೊಸ ಚೈತನ್ಯ ತುಂಬುತ್ತಿವೆ. ಓದುಗರ ಅಭಿರುಚಿ, ಲೇಖಕರ ಪ್ರಚಾರ ಮತ್ತು ಪ್ರಕಾಶಕರ ವ್ಯಾಪಾರ ವಿಸ್ತರಣೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಹಾಗೂ ವಾಟ್ಸಪ್‌ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳು ಪ್ರಮುಖ ಸಾಧನಗಳಾಗಿ ರೂಪುಗೊಂಡಿವೆ. ಇದರ ಪರಿಣಾಮವಾಗಿ ಪುಸ್ತಕ ಮಾರಾಟಕ್ಕೂ ಹೊಸ ಮಾರುಕಟ್ಟೆಯ ಬಾಗಿಲು ತೆರೆದಂತಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಣಾರ್ಧದಲ್ಲಿ ಸಾವಿರಾರು ಓದುಗರಿಗೆ ತಲುಪುವ ಸಾಧ್ಯತೆ ಹೆಚ್ಚಿದೆ. ಲೇಖಕರು ತಮ್ಮ ಹೊಸ ಕೃತಿಗಳ ಮಾಹಿತಿ, ಪುಸ್ತಕದ ತುಣುಕುಗಳು, ವಿಡಿಯೋ ಪರಿಚಯಗಳು ಹಾಗೂ ನೇರ ಸಂವಾದಗಳ ಮೂಲಕ ಓದುಗರನ್ನು ಆಕರ್ಷಿಸುತ್ತಿದ್ದಾರೆ. ನಮ್ಮ ಪ್ರಕಾಶನದಿಂದ ಹೊಸ ಪುಸ್ತಕಕ್ಕೆ ಸಂಬಂಧಿಸಿದ ರೀಲುಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಾಗ ಅದನ್ನು ನೋಡಿದ ಓದುಗರು ಪುಸ್ತಕ ಖರೀದಿಸಲು ಮುಂದಾಗುತ್ತಾರೆ.ಈ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಹೀಗಾಗಿ, ಪ್ರಕಾಶಕರು ಪುಸ್ತಕಗಳನ್ನು ಖರೀದಿಸುವ ಓದುಗರಿಲ್ಲ ಎಂದು ನಿರಾಶರಾಗುವ ಅಗತ್ಯವಿಲ್ಲ ಎಂದು ತಿಳಿಸಿದರು.

ಕೌದಿ ಪ್ರಕಾಶನದ ಮಮತಾ ಮಾತನಾಡಿ, ನಮ್ಮ ಪ್ರಕಾಶನ ಬಹಳ ಮುಖ್ಯವಾಗಿ ತಳ ಸಮುದಾಯಗಳ ತಲ್ಲಣಗಳನ್ನು ಓದುಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದರಲ್ಲೂ ಹೊಸ ಲೇಖಕರಿಗೆ ಪ್ರೋತ್ಸಾಹ ಕೊಡುವ ಒತ್ತಾಸೆ ನಮ್ಮದಾಗಿದೆ ಎಂದು ತಿಳಿಸಿದರು.

ಸಂಕಥನ ಪ್ರಕಾಶನದ ರಾಜೇಂದ್ರ ಪ್ರಸಾದ್, "ನಮ್ಮ ಪುಸ್ತಕ ಯಾರು ಪ್ರಕಟಿಸದೇ ಇರುವ ಸಂದರ್ಭದಲ್ಲಿ ಅನಿವಾರ್ಯವಾಗಿ ನಾವು ಪ್ರಕಾಶಕರಾಗಿ ರೂಪುಗೊಂಡೆವು. ಇಂದು ಪ್ರಕಾಶಕರು ಹಲವು ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಪ್ರಕಾಶಕರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಪುಸ್ತಕ ಖರೀದಿಗೆ ಮುಂದಾಗಬೇಕು " ಎಂದು ಒತ್ತಾಯಿಸಿದರು.

ನಾವು ನಮ್ಮದೇ ಆದ ಗೆಳೆಯರ ಬಳಗವನ್ನು ಕಟ್ಟಿಕೊಂಡಿದ್ದೇವೆ. ಆ ಬಳಗದ ಮೂಲಕ ಪುಸ್ತಕ ಮಾರಾಟವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ ಎಂದು ಮಿಂಚುಳ್ಳಿ ಪ್ರಕಾಶನದ ಸೂರ್ಯಕಿರ್ತಿ ತಿಳಿಸಿದರು.

ತೆಲುಗು ಪ್ರಕಾಶಕರಾದ ಶ್ರೀದಿವ್ಯ, ಮಲ್ಲಿಕಾರ್ಜುನ್, ಶೇಷು ಕೊರ್ಲ ಪಾಟಿ ಇದ್ದರು. ಸಂವಾದದಲ್ಲಿ ಜಿ.ಪಿ. ಬಸವರಾಜ್, ಓ.ಎಲ್. ನಾಗಭೂಷಣಸ್ವಾಮಿ, ಮಮತಾ ಅರಸಿಕೆರೆ ವೇದಿಕೆಯಲ್ಲಿದ್ದರು.

ಸಂಗಂ ಟ್ರಸ್ಟ್‌ನ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದರೆಡ್ಡಿ, ಗೌರವಾಧ್ಯಕ್ಷ ಡಾ. ಅರವಿಂದ ಪಟೇಲ್, ಹಿರಿಯ ಲೇಖಕ ಅಮರೇಶ ನುಗಡೋಣಿ, ಪಲ್ಲವ ಪ್ರಕಾಶನದ ವೆಂಕಟೇಶ, ಲೇಖಕರಾದ ದಸ್ತಗೀರಸಾಬ್ ದಿನ್ನಿ, ಟಿ.ಎಸ್. ಗೊರವರ, ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳು, ಪಿ.ಆರ್. ವೆಂಕಟೇಶ ಮತ್ತಿತರರಿದ್ದರು.