ರಕ್ತದಾನ ಒಂದು ಯಜ್ಞ. ಅದು ಅನೇಕರ ಕುಟುಂಬ, ಜೀವ ರಕ್ಷಣೆಗೆ ಸಹಕಾರಿ. ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿಯ ರಕ್ತನಿಧಿಯಿಂದ ಬಹಳ ಪ್ರಯೋಜನವಾಗಿದೆ.
ದಿ. ಸತೀಶ ಕಟ್ಟಿಗೆಯವರ ೪ನೇ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ
ಕನ್ನಡಪ್ರಭ ವಾರ್ತೆ ಯಲ್ಲಾಪುರರಕ್ತದಾನ ಒಂದು ಯಜ್ಞ. ಅದು ಅನೇಕರ ಕುಟುಂಬ, ಜೀವ ರಕ್ಷಣೆಗೆ ಸಹಕಾರಿ. ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿಯ ರಕ್ತನಿಧಿಯಿಂದ ಬಹಳ ಪ್ರಯೋಜನವಾಗಿದೆ. ಮುಂದಿನ ಯುವ ಪೀಳಿಗೆಗೆ ನಮ್ಮ ಇಂತಹ ಕಾರ್ಯ ಮಾರ್ಗದರ್ಶಿಯಾಗಬೇಕು. ಸಮಾಜದ ಬಗ್ಗೆ ಚಿಂತನೆ ಮಾಡುವ ಯುವಕರನ್ನು ಬೆಳೆಸಬೇಕು ಎಂದು ಕರ್ನಾಟಕ ಉತ್ತರ ಪ್ರಾಂತದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ನರೇಂದ್ರ ಹೇಳಿದರು.
ಸೋಮವಾರ ಪಟ್ಟಣದ ಅಡಕೆ ಭವನದಲ್ಲಿ ದಿ. ಸತೀಶ ಕಟ್ಟಿಗೆಯವರ ೪ನೇ ಪುಣ್ಯಸ್ಮರಣೆಯ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತಕೇಂದ್ರದ ವ್ಯವಸ್ಥಾಪಕ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ದಾನಗಳಲ್ಲಿ ಅನ್ನ, ಕಣ್ಣು, ಕಿಡ್ನಿ, ರಕ್ತ ಹೀಗೆ ಹಲವು ದಾನಗಳು ಮನುಷ್ಯನ ಜೀವವನ್ನು ಉಳಿಸುತ್ತವೆಯಾದರೂ ರಕ್ತದಾನ ಅತ್ಯಂತ ಶ್ರೇಷ್ಠವಾದದ್ದು. ರಕ್ತದಾನದಿಂದ ೩ ಜೀವಿಗಳು ಅವರ ಕುಟುಂಬದ ರಕ್ಷಣೆ ಸಾಧ್ಯ. ನಮ್ಮಲ್ಲಿ ರಕ್ತ ನೀಡಿದರೆ ನಮ್ಮ ಶರೀರಕ್ಕೆ ತೊಂದರೆ ಎನ್ನುವ ತಪ್ಪುಕಲ್ಪನೆ ಇದೆ. ಪ್ರತಿ ೩ ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ರಕ್ತ ಶುದ್ಧಿಯಾಗಿ, ರೋಗರಹಿತ ವ್ಯಕ್ತಿಯಾಗಬಹುದು. ಅಲ್ಲದೇ ಹೃದಯಾಘಾತ, ಕ್ಯಾನ್ಸರ್‌ನಂತಹ ರೋಗಗಳು ನಮ್ಮ ಹತ್ತಿರ ಬಾರದು ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಟಿಎಂಎಸ್ ನಿರ್ದೇಶಕರ ವೆಂಕಟ್ರಮಣ ಕಿರಕುಂಭತ್ತಿ, ಟಿಎಸ್ಎಸ್ ನಿರ್ದೇಶಕ ಕೃಷ್ಣ ಹೆಗಡೆ ಉಪಸ್ಥಿತರಿದ್ದರು. ಗಣಪತಿ ಮೆಣಸುಮನೆ ದಿ.ಸತೀಶ ಕಟ್ಟಿಗೆಯವರ ಕುರಿತಾಗಿ ರಚಿಸಿದ ಗೀತೆಯನ್ನು ನರಸಿಂಹ ಭಟ್ಟ ಚಿಕ್ಯಾನಮನೆ ಹಾಡಿದರು. ರಾಷ್ಟ್ರೀಯ ಸ್ವ.ಸೇ. ಸಂಘದ ಪ್ರಮುಖರಾದ ಡಿ.ಎಸ್. ಭಟ್ಟ ಸ್ವಾಗತಿಸಿದರು. ರಾಮಕೃಷ್ಣ ಭಟ್ಟ ಕವಡಿಕೆರೆ ನಿರ್ವಹಿಸಿದರು. ಗೋಪಾಲಕೃಷ್ಣ ಗಾಂವ್ಕರ ವಂದಿಸಿದರು.ಶಿಬಿರದಲ್ಲಿ ೩೧೬ ದಾನಿಗಳು ರಕ್ತದಾನ ಮಾಡಿದರು.