ಇತಿಹಾಸವನ್ನು ಮೆಲುಕು ಹಾಕಿ ಅದರಲ್ಲಿರುವ ಧನಾತ್ಮಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಂಪಿ ವಿಶ್ವವಿದ್ಯಾಲಯದ ಅಧ್ಯಯನಾಂಗ ವಿಭಾಗದ ನಿರ್ದೇಶಕ ಡಾ.ಅಮರೇಶ್ ಯತಗಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಇತಿಹಾಸವನ್ನು ಮೆಲುಕು ಹಾಕಿ ಅದರಲ್ಲಿರುವ ಧನಾತ್ಮಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಂಪಿ ವಿಶ್ವವಿದ್ಯಾಲಯದ ಅಧ್ಯಯನಾಂಗ ವಿಭಾಗದ ನಿರ್ದೇಶಕ ಡಾ.ಅಮರೇಶ್ ಯತಗಲ್ ಹೇಳಿದರು.

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಶನಿವಾರ ತಾಲೂಕು ಇತಿಹಾಸ ವೇದಿಕೆ, ತಾಲೂಕು ಕಸಾಪ, ಕೆಳದಿ ರಿಸರ್ಚ್ ಫೌಂಡೇಶನ್ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ತಾಲೂಕುಮಟ್ಟದ ೭ನೇ ಇತಿಹಾಸ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಹಸುವೊಂದು ಮೆಲುಕು ಹಾಕದಿದ್ದರೆ ರೋಗ ಬಂದಿದೆಯೆಂದು ಹೇಗೆ ಭಾವಿಸುತ್ತೇವೆಯೋ ಹಾಗೆಯೇ ನಮ್ಮ ಚರಿತ್ರೆ, ಸಂಸ್ಕೃತಿ, ಸಮುದಾಯದ ಬಗ್ಗೆ ಮೆಲುಕು ಹಾಕಬೇಕು. ಇಲ್ಲದಿದ್ದರೆ ನಮಗೆ ರೋಗ ಬಂದಿದೆ ಎಂದೇ ಅರ್ಥ ಎಂದು ವಿಶ್ಲೇಷಿಸಿದರು.

ಒಬ್ಬ ಮನುಷ್ಯನಿಗೆ ಗತಕಾಲದ ನೆನಪುಗಳು ಇರುವಂತೆ ದೇಶಕ್ಕೆ, ಇಡೀ ಜಗತ್ತಿಗೂ ನೆನಪುಗಳು ಇರುತ್ತವೆ. ಪ್ರತಿಯೊಂದು ವಸ್ತುವಿಗೂ ಒಂದೊಂದು ಇತಿಹಾಸವಿರುತ್ತದೆ. ವರ್ತಮಾನವನ್ನು ಗಿಡವೊಂದಕ್ಕೆ ಹೋಲಿಸುವುದಾದರೆ ಭೂತಕಾಲ ಅದರ ಬೀಜವಾಗಿರುತ್ತದೆ. ಅದರಲ್ಲಿ ಸಿಗುವ ಫಲ ಭವಿಷ್ಯವಾಗಿರುತ್ತದೆ. ಫಲವನ್ನು ಅಪೇಕ್ಷಿಸುವವನು ಭೂತಕಾಲದ ಬೀಜವನ್ನು ನೆನಪುಮಾಡಿಕೊಳ್ಳಲೇಬೇಕು. ಭೂತಕಾಲ ಮರೆತವನಿಗೆ ಭವಿಷ್ಯವಿಲ್ಲ ಎಂದು ಹೇಳಿದರು.

ಭಾರತೀಯ ಚರಿತ್ರೆ ರಚನೆಯಲ್ಲಿ ಸ್ಥಳೀಯ ಇತಿಹಾಸದ ಪಾತ್ರ ವಿಷಯ ಕುರಿತು ಮಾತನಾಡಿದ ಅವರು, ಭಾರತದ, ಕರ್ನಾಟಕದ, ಜಗತ್ತಿನ ಇತಿಹಾಸವನ್ನು ಅವಲೋಕಿಸುವ ಮೊದಲು ಈ ನೆಲದ ಇತಿಹಾಸವನ್ನು ಗಮನಿಸಬೇಕು. ಜಗತ್ತಿನ ಇತಿಹಾಸದಲ್ಲಿ ಈ ನೆಲದಲ್ಲಿ ನಡೆದಿರುವ ಘಟನೆಗಳು ಇರುತ್ತದೆ. ನಮ್ಮ ಸುತ್ತಮುತ್ತ ಇರುವ ಹಳ್ಳಿ, ಗ್ರಾಮ ಎಲ್ಲವೂ ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಸ್ಥಳೀಯ ಇತಿಹಾಸ ಭಾರತದ ಇತಿಹಾಸದ ಕೀಲಿಕೈಯಾಗಿದ್ದು ಪಠ್ಯದಲ್ಲಿ ಸ್ಥಳೀಯ ಇತಿಹಾಸದ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನಾಧ್ಯಕ್ಷ ಡಾ.ಕೆಳದಿ ವೆಂಕಟೇಶ್ ಜೋಯ್ಸ್ ಮಾತನಾಡಿ, ಜಗತ್ತಿಗೆ ಮಾದರಿಯಾದ ಇತಿಹಾಸ ನಮ್ಮ ದೇಶದಲ್ಲಿದೆ. ಅದರಲ್ಲಿಯೂ ಕರ್ನಾಟಕವನ್ನು ಆಳಿದ ಅನೇಕ ಅರಸು ಮನೆತನಗಳು ಸಮಗ್ರ ಇತಿಹಾಸಕ್ಕೆ ನೀಡಿರುವ ಕೊಡುಗೆ ಅಮೂಲ್ಯವಾಗಿದೆ. ಸ್ಥಳೀಯ ಇತಿಹಾಸವನ್ನು ದಾಖಲಿಸುವಲ್ಲಿ ಅನೇಕ ಲೋಪಗಳು ನಡೆದಿದೆ. ರಾಣಿ ಚೆನ್ನಮ್ಮಾಜಿ ಶಿವಾಜಿಪುತ್ರ ರಾಜಾರಾಮನಿಗೆ ಆಶ್ರಯ ನೀಡಿದ್ದು, ವೀರಮ್ಮಾಜಿ ಹೈದಾರಾಲಿಯನ್ನು ಸೋಲಿಸಿದ್ದು ಇತಿಹಾಸದಲ್ಲಿ ಪರಿಣಾಮಕಾರಿಯಾಗಿ ದಾಖಲು ಆಗಿಲ್ಲ. ಆದರೆ ಕೆಳದಿ ಅರಸರು ಸೋತ ಇತಿಹಾಸ ಮಾತ್ರ ದಾಖಲು ಮಾಡಿದ್ದಾರೆ. ಇತಿಹಾಸ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳು ಬರುವ ಅಗತ್ಯವಿದ್ದು, ನಮ್ಮ ಭಾಗದ ಇತಿಹಾಸದ ಮೇಲೆ ಇನ್ನಷ್ಟು ಬೆಳಕು ಚೆಲ್ಲುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

ಇತಿಹಾಸ ಸಂಶೋಧನಾ ವಿದ್ಯಾರ್ಥಿ ರವಿಚಂದ್ರ ಮಂಡಗಳಲೆ `ಹಸೆಚಿತ್ತಾರ-ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಕುರಿತು ಮಾತನಾಡಿದರು. ವೇದಿಕೆ ಉಪಾಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಪ್ರಭಾಕರರಾವ್, ಡಾ.ಪ್ರಸನ್ನ ಟಿ., ಡಾ. ಶ್ರೀಪಾದ ಹೆಗಡೆ, ಕೆ.ಸಿದ್ದಪ್ಪ, ಉಮೇಶ್ ಹಿರೇನೆಲ್ಲೂರು, ಲಕ್ಷ್ಮಣ್ ಆರ್. ನಾಯ್ಕ್ ಉಪಸ್ಥಿತರಿದ್ದರು. ಸತೀಶ್ ಆರ್. ಸ್ವಾಗತಿಸಿ, ಡಿ.ಗಣಪತಪ್ಪ ವಂದಿಸಿ, ಎಚ್.ಜಿ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.