ನಾವು ನಮ್ಮೊಳಗಿನ ದನಿ ಅರ್ಥೈಸಿಕೊಳ್ಳಬೇಕಿದೆ: ಡಾ. ನಟರಾಜ್ ಬೂದಾಳ್

| Published : Sep 13 2025, 02:04 AM IST

ನಾವು ನಮ್ಮೊಳಗಿನ ದನಿ ಅರ್ಥೈಸಿಕೊಳ್ಳಬೇಕಿದೆ: ಡಾ. ನಟರಾಜ್ ಬೂದಾಳ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯ, ಧರ್ಮಗಳು ನಮ್ಮ ಮೇಲೆ ಒತ್ತಡ ಹಾಕುತ್ತಿವೆ. ವಚನಗಳು, ಸೂಫಿಸಂ, ಜೈನೀಸಂ ಮತ್ತು ಬುದ್ಧಿಸಂಗಳು ಮೊದಲು ನಿನ್ನನ್ನು ನೀನು ಕೇಳಿಸಿಕೋ ಎಂದೇ ಹೇಳುತ್ತವೆ, ದಿಕ್ಕು ತಪ್ಪಿಸುವ ದನಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿವೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಾವು ನಮ್ಮೊಳಗಿನ ದನಿಯನ್ನು ಅರ್ಥೈಸಿಕೊಳ್ಳುವ ಬದಲು ಬೇಡವಾದ ಹೊರಗಿನ ದನಿಗೆ ಹೆಚ್ಚು ಒತ್ತು ನೀಡುತ್ತಾ, ನಮ್ಮೊಳಗಿನ ಅರಿವನ್ನು ಎಚ್ಚರಿಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ. ತನ್ನ ಮನಸ್ಸಿನ ಒಳಗಣ್ಣನ್ನು ತೆರೆದು ಅದರ ಸಾಮರ್ಥ್ಯ, ಸತ್ವ ಅರಿತು ಲೋಕವನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದು ಸಂಸ್ಕೃತಿ ಚಿಂತಕರು ಹಾಗೂ ಸಾಹಿತಿ ಡಾ. ನಟರಾಜ್ ಬೂದಾಳ್ ತಿಳಿಸಿದರು.

ನಗರದ ಕಲ್ಪತರು ಆಡಿಟೋರಿಯಂನಲ್ಲಿ ಶುಕ್ರವಾರ ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜು, ಪಲ್ಲಾಗಟ್ಟಿ ಅಡಿವೆಪ್ಪ ಕಲಾ ಮತ್ತು ವಾಣಿಜ್ಯ ವಿಭಾಗದ ವತಿಯಿಂದ ಬುಕ್ ಬ್ರಹ್ಮ ಸಹಯೋಗದೊಂದಿಗೆ ಆಯೋಜಿಸಿದ್ದ ವಚನಗಳು, ಸೂಫಿವಾದ ಹಾಗೂ ಜೈನ, ಬೌದ್ಧಧರ್ಮದ ಬಗ್ಗೆ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ, ಧರ್ಮಗಳು ನಮ್ಮ ಮೇಲೆ ಒತ್ತಡ ಹಾಕುತ್ತಿವೆ. ವಚನಗಳು, ಸೂಫಿಸಂ, ಜೈನೀಸಂ ಮತ್ತು ಬುದ್ಧಿಸಂಗಳು ಮೊದಲು ನಿನ್ನನ್ನು ನೀನು ಕೇಳಿಸಿಕೋ ಎಂದೇ ಹೇಳುತ್ತವೆ, ದಿಕ್ಕು ತಪ್ಪಿಸುವ ದನಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿವೆ. ಜಾತಿ, ಅಸ್ಪೃಶ್ಯತೆ, ಲಿಂಗ ತಾರತಮ್ಯ, ಮೌಢ್ಯಗಳ ವಿರುದ್ಧ ಈ ಮೂರು ಧರ್ಮಗಳು ದಂಗೆ ಎದ್ದು ಚಳವಳಿ ನಡೆಸಿದವು. ಸಮಾಜದಲ್ಲಿ ಸಹಬಾಳ್ವೆ, ಪ್ರೀತಿ, ಸಾಮರಸ್ಯ ಇರಬೇಕೆಂದು ಸಾರಿದವು. ಆದ್ದರಿಂದ ಪ್ರತಿಯೊಬ್ಬರೂ ತಮ್ಮೊಳಗಿನ ದನಿ ಕೇಳಿಸಿಕೊಂಡು ಒಳ್ಳೆಯದನ್ನು ಉಳಿಸಿ ಹೊಗುವ ಪ್ರಯತ್ನ ಪಡಬೇಕು. ವಿದ್ಯಾರ್ಥಿಗಳು ಸಹ ಯಾವುದೇ ವಿಷಯದ ಬಗ್ಗೆ ವಾಸ್ತವತೆ, ಸತ್ಯಾಸತ್ಯತೆ ಅರಿತು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡುವ ಜೊತೆಗೆ ಬದುಕಿಗೊಂದು ಅರ್ಥ ಸಿಗಲಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಮತ್ತು ಕಾರ್ಯದರ್ಶಿ ಎಂ.ಆರ್.ಸಂಗಮೇಶ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಧರ್ಮಗಳ ಕೊಡುಗೆ ಅಪಾರವಾಗಿದ್ದು, ಧರ್ಮಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಜ್ಞಾನದ ಅರಿವನ್ನು ಹೆಚ್ಚಿಸಿಕೊಂಡು ಕತ್ತಲೆಯಿಂದ ಬೆಳಕಿನೆಡೆಗೆ ಹೋಗಬೇಕು. ವಿದ್ಯಾರ್ಥಿಗಳು ಪದವಿ ಪಡೆಯುವ ಜೊತೆಗೆ ನಮ್ಮ ಸಂಸ್ಕಾರ, ಸಂಸ್ಕೃತಿ, ಧರ್ಮಗಳ ಸಾರವನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಎಸ್ ಉಪಾಧ್ಯಕ್ಷ ಜಿ.ಪಿ.ದೀಪಕ್ ಮಾತನಾಡಿ, ಸುದೀರ್ಘ ಇತಿಹಾಸ ಹೊಂದಿರುವ ನಮ್ಮ ಸಂಸ್ಥೆಯು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ವಿದ್ಯಾರ್ಥಿಗಳಲ್ಲಿ ಸಾಮರಸ್ಯ, ಸ್ನೇಹ, ಸಹಬಾಳ್ವೆ, ಸೌಹಾರ್ದತೆ ಮೂಡಿಸಲಾಗುತ್ತಿದೆ. ವಚನಗಳು, ಸೂಫಿ, ಜೈನ ಹಾಗೂ ಬೌದ್ಧ ಧರ್ಮದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಅವಶ್ಯಕತೆ ಇದೆ. ಇದೊಂದು ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮವಾಗಿದ್ದು ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು ಆಗಮಿಸಿರುವುದು ಸಂತಸ ತಂದಿದೆ ಎಂದರು.

ಇಂಗ್ಲಿಷ್ ಪ್ರಾಧ್ಯಾಪಕ ಡಾ. ಸುಕನ್ಯ ಕನರಳ್ಳಿ, ಡಾ. ಕೃಷ್ಣ ಕೆ. ಮನವಳ್ಳಿ, ವಿಶ್ರಾಂತ ಪ್ರಾಂಶುಪಾಲ ಡಾ. ವಿ.ಎಸ್.ಶ್ರೀಧರ, ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಸೇರಿ ಅನೇಕ ವಿಷಯ ಪರಿಣಿತರು ಆಗಮಿಸಿ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ಪ್ರಬಂಧ ಮಂಡಿಸಿದರು. ನಂತರ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜು ಜಂಟಿ ನಿರ್ದೇಶಕ ಡಾ.ಕೆ.ರಾಮಕೃಷ್ಣರೆಡ್ಡಿ, ಕೆವಿಎಸ್ ಕಾರ್ಯದರ್ಶಿಗಳಾದ ಎಚ್.ಜಿ.ಸುಧಾಕರ್, ಟಿ.ಯು ಜಗದೀಶಮೂರ್ತಿ, ಸದಸ್ಯರಾದ ಮುಕ್ತಾತಿಪ್ಪೇಶ್, ಸ್ವರ್ಣಗೌರಿ, ಕಲ್ಪತರು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎನ್.ಉಮೇಶ್, ಪಲ್ಲಾಗಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯಕುಮಾರಿ, ಸಂಚಾಲಕರಾದ ಬಿ.ಸಿ.ವಿನುತಾ, ಎಂ.ಎಸ್.ಲೋಕೇಶ್ವರಯ್ಯ ಮತ್ತಿತರರಿದ್ದರು.