ಮಹಿಳೆ ಏನೇ ಸಾಧನೆ ಮಾಡಿದರೂ ಅವಳ ಗೆಲುವಿನ ಹಿಂದೆ ಪುರುಷರ ಬೆಂಬಲ ಇದ್ದೇ ಇರುತ್ತದೆ. ಆದ್ದರಿಂದ ಗಂಡು-ಹೆಣ್ಣು ಎಂಬ ಭೇದವಿಲ್ಲದ ಒಟ್ಟುಗೂಡಿ ಸಮಾಜವನ್ನು ಭದ್ರವಾಗಿ ಕಟ್ಟಬೇಕಾಗಿದೆ.

ಧಾರವಾಡ:

ಪ್ರಸ್ತುತ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಉನ್ನತ ಸಾಧನೆ ಮಾಡುತ್ತಿದ್ದು, ಮಹಿಳೆ ಅಬಲೆಯಲ್ಲ, ಸಬಲೆ ಎಂಬುದನ್ನು ಸಾಬೀತು ಮಾಡಿದ್ದಾಳೆ ಎಂದು ಸಾಯಿ ಪಿಯು ಕಾಲೇಜ್‌ ಅಧ್ಯಕ್ಷೆ ವೀಣಾ ಬಿರಾದಾರ ಹೇಳಿದರು.

ರಾಜ್ಯ ಪತಂಜಲಿ ಯೋಗ ಸಮಿತಿ ಮುಖ್ಯಸ್ಥರಾದ ಭವರಲಾಲ ಆರ್ಯ ನೇತೃತ್ವದಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ ಪರವಾಗಿ ನಗರದ ಚರಂತಿಮಠ ಗಾರ್ಡನ್‌ದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಳೆ ಏನೇ ಸಾಧನೆ ಮಾಡಿದರೂ ಅವಳ ಗೆಲುವಿನ ಹಿಂದೆ ಪುರುಷರ ಬೆಂಬಲ ಇದ್ದೇ ಇರುತ್ತದೆ. ಆದ್ದರಿಂದ ಗಂಡು-ಹೆಣ್ಣು ಎಂಬ ಭೇದವಿಲ್ಲದ ಒಟ್ಟುಗೂಡಿ ಸಮಾಜವನ್ನು ಭದ್ರವಾಗಿ ಕಟ್ಟಬೇಕಾಗಿದೆ ಎಂದರು.

ಜಯಶ್ರೀ ಮಂಜುನಾಥ ಮಕ್ಕಳಗೇರಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರಿಗೆ ಅವರ ಕುಟುಂಬದ ಪುರುಷರು ಸಹಕಾರ ನೀಡಿದರೆ, ಮನೆಯಿಂದ ಹೊರಬಂದು ತನ್ನಲ್ಲಿರುವ ಪ್ರತಿಭೆ ಸಾಧಿಸಲು ಸಾಧ್ಯ. ಮನೆಯಲ್ಲಿ ಸ್ವಾತಂತ್ರ್ಯ ಇರುವುದರಿಂದ ನಾವಿಂದು ಮನೆಯಿಂದ ಹೊರ ಬಂದು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಹೇಳಿದರು.

ಪತಂಜಲಿ ಸಮಿತಿ ಉತ್ತರ ಭಾಗದ ರಾಜ್ಯ ಪ್ರಭಾರಿ ಕಿರಣ ಮನೋಲಕರ, ಹುಬ್ಬಳ್ಳಿ-ಧಾರವಾಡದಲ್ಲಿ ಪ್ರತಿ ಮನೆ-ಮನೆಗೂ ಯೋಗವನ್ನು ಉಚಿತವಾಗಿ ಕಲಿಸಿಕೊಡಲು ಪತಂಜಲಿ ಯೋಗ ಸಮಿತಿ ಸಿದ್ಧವಾಗಿದೆ. ಏಪ್ರಿಲ್‌ ಕೊನೆ ವಾರದಲ್ಲಿ ಅಡ್ವಾನ್ಸ್‌ ಯೋಗ ತರಬೇತಿ 25 ದಿನಗಳ ವರೆಗೆ ಧಾರವಾಡದಲ್ಲಿ ನೀಡಲು ಯೋಜಿಸಲಾಗಿದೆ. ಭಾಗವಹಿಸಿದ ವರೆಲ್ಲರೂ ಒಬ್ಬ ಆದರ್ಶ ಯೋಗ ಶಿಕ್ಷಕರಾಗಬಲ್ಲರು ಎಂದರು. ರಾಜ್ಯ ಪತಂಜಲಿ ಯೋಗ ಸಮಿತಿ ವರಿಷ್ಠ ಪ್ರಭಾರಿ ಭವರಲಾಲ ಆರ್ಯ ಮಾತನಾಡಿದರು.

ಈ ವೇಳೆ ಉಮಾ ಅಗಡಿ, ನಾಗರತ್ನಾ ಸುಲಾಖೆ, ಲೀಲಾವತಿ ಸಾಂಬ್ರಾಣಿ, ಶೈಲಜಾ ಮಾಡಿಕರ ಇದ್ದರು. 250ಕ್ಕೂ ಹೆಚ್ಚು ಮಹಿಳೆಯವರು ಭಾಗವಹಿಸಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.