ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕು

| Published : Mar 17 2025, 12:34 AM IST

ಸಾರಾಂಶ

ಆಲೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಳಿಗ್ಗೆ 11 ಗಂಟೆಗೆ ಆಲೂರು ಪಟ್ಟಣ ಕೆ.ಇ.ಬಿ ವೃತ್ತದಲ್ಲಿರುವ ಶ್ರೀ ಸಂಗಮೇಶ್ವರ ದೇವಾಲದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ರೇಣುಕಾಚಾರ್ಯರ ಭಾವಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಆಲೂರು

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ-ಲಿಂಗಾಯತ ಸಮಾಜ ಹಾಗೂ ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಆಲೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಳಿಗ್ಗೆ 11 ಗಂಟೆಗೆ ಆಲೂರು ಪಟ್ಟಣ ಕೆ.ಇ.ಬಿ ವೃತ್ತದಲ್ಲಿರುವ ಶ್ರೀ ಸಂಗಮೇಶ್ವರ ದೇವಾಲದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ರೇಣುಕಾಚಾರ್ಯರ ಭಾವಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಭಾಗವಹಿಸಿದ್ದರು.

ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಲಿಯುಗದಲ್ಲಿ ಮಾನವನು ಆಸೆ, ಅಸೂಯೆಗಳನ್ನು ತೊಡೆದು ಹಾಕಿ ಸಮಾಜದ ಒಳಿತಿಗಾಗಿ ಬದುಕಬೇಕು. ಜ್ಯೋತಿ ಸ್ವರೂಪಿಯಾದ ರೇಣುಕಾಚಾರ್ಯರು ಸಮಾಜ ಬದಲಾವಣೆಗೆ ಸಂದೇಶಗಳನ್ನು ನೀಡಿದ್ದಾರೆ. ಅವರ ಸಂದೇಶಗಳನ್ನು ಪಾಲಿಸುತ್ತ ಸಮಾಜದಲ್ಲಿ ಮೇಲು ಕೀಳು ಎನ್ನದೇ ಸಮಾನತೆಯಿಂದ ಬದುಕಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ ನಾಗೇಂದ್ರ ಮಾತನಾಡಿ, ಸರ್ಕಾರದ ವತಿಯಿಂದ ಜಗದ್ಗುರು ರೇಣುಕಾಚಾರ್ಯರರ ಜಯ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ರೇಣುಕಾಚಾರ್ಯರು ಸಾರಿ ಹೋಗಿದ್ದಾರೆ. ಆದ್ದರಿಂದ ಎಲ್ಲ ಧರ್ಮದವರು ಸಾಮರಸ್ಯದಿಂದ ಬದುಕಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠದ ಆಡಳಿತ ಅಧಿಕಾರಿಯ ಶಿವಮೂರ್ತಿ ಮಾತನಾಡಿದರು, ಪಿ.ಎಚ್.ಡಿ ಪಡೆದ ಕೆರೆಹಳ್ಳಿ ಯತೀಶ್ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು, ಕಾರ್ಯಕ್ರಮವನ್ನು ಪೂರ್ಣಿಮಾ ಉಮೇಶ್ ಅವರು ನಿರೂಪಣೆ ಮಾಡಿದರು. ಇದೇ ಸಂದರ್ಭದಲ್ಲಿ ತಗರೆ ಗ್ರಾಮದ ಜನನಿ ಭರತನಾಟ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಳು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಾದ ನೀಡಿ, ಪರಶಿವನ ವಾಣಿಯಂತೆ ಧರ್ಮ ಸಂರಕ್ಷಣೆಗಾಗಿ ಅವತರಿಸಿ, ಶಿವಜ್ಞಾನದ ಬೆಳಕನ್ನು ಬೀರುವ ಮೂಲಕ ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶ್ರೀ ರೇಣುಕಾಚಾರ್ಯರು ಸಾಮಾನ್ಯರಲ್ಲ. ಅಸಾಮಾನ್ಯ ಘನ ವ್ಯಕ್ತಿತ್ವ ಹೊಂದಿದ ಸಕಲ ಸಮುದಾಯಗಳ ಹಿತವನ್ನು ಬಯಸಿದವರು. ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಮಹಾಕ್ಷೇತ್ರದ ಸ್ವಯಂಭು ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿ ಸಮಾಜದ ಸರ್ವಜನಾಂಗದ ಹಿತಕ್ಕಾಗಿ 18 ಮಠಗಳನ್ನು ಸ್ಥಾಪಿಸಿ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪ್ರಭಾರ ತಹಸೀಲ್ದಾರ್‌ ಪೂರ್ಣಿಮಾ, ಅಖಿಲ ಭಾರತ ವೀರಶೈವ ಮಹಾಸಭಾ ಆಲೂರು ತಾಲೂಕು ಅಧ್ಯಕ್ಷ ಅಜಿತ್ ಚಿಕ್ಕಕಣಗಾಲು, ಜಿಲ್ಲಾ ನಿರ್ದೇಶಕರಾದ ಶಾಂತಪ್ಪ, ಶಾಂತರಾಜು, ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್, ವೀರಶೈವ ಸಂಘದ ಸಹಕಾರದ ಶ್ರೀ ಡಾ. ಜಯರಾಜ್, ಖಜಾಂಚಿ ಟಿಕರಾಜ್, ಸಮಾಜ ಸೇವಕ ಕಟ್ಟೆ ಗೆದ್ದೆ ನಾಗರಾಜ್ ಸೇರಿದಂತೆ ಮುಂತಾದವರು ಹಾಜರಿದ್ದರು.