ಸಾರಾಂಶ
- ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ 10 ಸಾವಿರ ಅನಧಿಕೃತ ಆಸ್ತಿಗಳು । ನಗರಸಭೆ ವ್ಯಾಪ್ತಿಯಲ್ಲಿ ಇ- ಖಾತೆ ಅಭಿಯಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಮನೆ, ಕಟ್ಟಡ, ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅದರಂತೆ ನಗರದಲ್ಲಿ ಇ-ಖಾತಾ ಅಭಿಯಾನ ಆರಂಭಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ನಗರಸಭೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿ, ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ನಗರಸಭೆ ವ್ಯಾಪ್ತಿಯಲ್ಲಿ ಬರುವ ನಾಗರಿಕರು ಆಸ್ತಿ ತೆರಿಗೆ ಪಾವತಿಸದೇ ಇರುವವರು ಇ-ಖಾತಾ ಅಭಿಯಾನದಲ್ಲಿ ಪಾಲ್ಗೊಂಡು ತೆರಿಗೆ ಪಾವತಿಸಿ, ಸಕ್ರಮ ಮಾಡಿಕೊಳ್ಳಲು ಅವಕಾಶ ಇದಾಗಿದ್ದು, ಇದರಿಂದ ಸ್ವತ್ತಿನ ಬಿ-ಖಾತೆ ಮಾಡಿಕೊಂಡು ಅನುಕೂಲ ಪಡೆಯಿರಿ ಎಂದು ಹೇಳಿದರು.
ನಗರದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಈ ತೆರಿಗೆ ಸಂಗ್ರಹ ಬಹಳ ಮುಖ್ಯವಾಗಿದ್ದು, ಸರ್ಕಾರ ನೀಡಿರುವ ಈ ಮೂರು ತಿಂಗಳ ಕಾಲಾವಕಾಶವನ್ನು ಸದ್ಭಳಕೆ ಮಾಡಿಕೊಂಡು ಆಸ್ತಿಯ ಮೌಲ್ಯವರ್ಧಿತ ಗೊಳಿಸಿಕೊಳ್ಳುವಂತೆ ಮನವಿ ಮಾಡಿದರು.ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿ ಕೊಂಡಿರುವ ನಾಗರಿಕರು ಕೂಡಲೇ ಸರ್ಕಾರ ನೀಡಿರುವ ಬಿ-ಖಾತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆಸ್ತಿಗಳ ಮೌಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳು ಇವೇ ಎಂಬ ಮಾಹಿತಿ ಇದ್ದು, 2003-04 ನೇ ಸಾಲಿನಲ್ಲಿ ಸರ್ವೇ ಕಾರ್ಯಕೈಗೊಂಡಾಗ 6 ಸಾವಿರ ಅನಧಿಕೃತ ಕಟ್ಟಡಗಳು ಇರುವುದು ಪತ್ತೆ ಹಚ್ಚ ಲಾಗಿತ್ತು. ಈಗ ಈವರೆಗೆ ಇನ್ನೂ 4 ಸಾವಿರ ಹೆಚ್ಚಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.ಸರ್ಕಾರದ ಸೌಲಭ್ಯ ಪಡೆದು, ಯಾವುದೇ ರೀತಿ ತೆರಿಗೆ ಪಾವತಿ ಮಾಡದೇ ವಾಸ ಮಾಡುತ್ತಿರುವ ನಿವಾಸಿಗಳಿಗೆ ಅನುಕೂಲವಾಗಬೇಕೆಂಬ ದೃಷ್ಠಿಯಿಂದ ಖಾಲಿ ನಿವೇಶನ ಅಥವಾ ಕಟ್ಟಡ ಮನೆ ಹೊಂದಿರುವ ನಾಗರಿಕರು ಒಂದು ವರ್ಷದ ಆಸ್ತಿ ತೆರಿಗೆಯನ್ನು ಪಾವತಿಸಿ, ಬಿ-ಖಾತಾ ಮಾಡಿಸಿಕೊಳ್ಳಬೇಕೆಂದು ಎಂದು ತಿಳಿಸಿದರು.ಬಿ-ಖಾತೆ ಆದ ನಂತರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಆಸ್ತಿಗಳಿಗೆ ನಗರಸಭೆಯಲ್ಲಿ ಇ-ಖಾತೆ ಮಾಡಿಕೊಡುತ್ತೇವೆ. ಈ ದಾಖಲೆ ಪಡೆದುಕೊಂಡು ಬ್ಯಾಂಕಿನಲ್ಲಿ ಸಾಲ ಮತ್ತು ಮಾರಾಟ ಮಾಡಲು ಸಹಾಯವಾಗುತ್ತದೆ ಎಂದರು.2024ರ ಮೇ 10 ರ ಹಿಂದೆ ಆಗಿರುವ ಆಸ್ತಿ ನೋಂದಣಿ ಪತ್ರ ಪರಿಗಣಿಸಿ, 2025ರ ಮೇ 10 ರವರೆಗೆ ಬಿ-ಖಾತಾ ಮಾಡಿ ಕೊಳ್ಳಲು ಅವಕಾಶ ನೀಡಲಾಗಿದೆ. ಈ ನಿಗಧಿತ ಅವಧಿಯಲ್ಲಿ ನಾಗರಿಕರು ಆಸ್ತಿ ನೋಂದಣಿ ಮಾಡಿಕೊಳ್ಳಬೇಕು, ಇಲ್ಲ ವಾದರೆ ಮುಂದೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಈ ತಿಂಗಳ ಅಂತ್ಯದೊಳಗೆ ಕಡ್ಡಾಯವಾಗಿ ನೀರಿನ ತೆರಿಗೆ ಸೇರಿದಂತೆ ಎಲ್ಲಾ ರೀತಿ ತೆರಿಗೆಗಳನ್ನು ಪಾವತಿಸಬೇಕು, ವಿಳಂಬ ಮಾಡಿದರೆ ನಗರಸಭೆಯಿಂದ ನೀಡಲಾಗಿರುವ ಒಳಚರಂಡಿ ಸಂಪರ್ಕ, ಕುಡಿಯುವ ನೀರು ಮುಂತಾದ ಮೂಲ ಭೂತ ಸೌಕರ್ಯಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಈ ಸಂಬಂಧ ನಗರ ವ್ಯಾಪ್ತಿಯಲ್ಲಿ 10 ದಿನಗಳ ಕಾಲ ಜಾಥಾ ನಡೆಸಿ, ಜಾಗೃತಿ ಮೂಡಿಸಲಾಗುವುದು. ಬಾಕಿ ಉಳಿಸಿ ಕೊಂಡಿರುವ ನಗರದ ನಾಗರಿಕರು ಕೂಡಲೇ ತೆರಿಗೆ ಪಾವತಿಸಿ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ರವಿ, ಕಂದಾಯ ಅಧಿಕಾರಿ ದೀಪಕ್, ಕಂದಾಯ ನಿರೀಕ್ಷಕರಾದ ಶಿವಾನಂದ್, ವೆಂಕಟರಾಮ್ ಹಾಗೂ ಸಿಬ್ಬಂದಿ ಹಾಜರಿದ್ದರು. 10 ಕೆಸಿಕೆಎಂ 5ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರು ಇ- ಖಾತಾ ಅಭಿಯಾನಕ್ಕೆ ಚಾಲನೆ ನೀಡಿದರು. ಪೌರಾಯುಕ್ತ ಬಿ.ಸಿ. ಬಸವರಾಜ್, ರವಿ, ಶಿವಾನಂದ್ ಇದ್ದರು.