ಜೈಲಿಗೆ ಹೋಗಿ ಬಂದವರಿಗೆ ಜೈಕಾರದ ಜತೆಗೆ ಸೇಬಿನ ಹಾರ ಹಾಕಿ ಸ್ವಾಗತಿಸುತ್ತಿದ್ದಾರೆ. ಇದು ಸಮಾಜದ ಭಾವನೆ, ಹೀಗಾದರೆ ಭವಿಷ್ಯ ಏನು? ಹಿಂದೆ ತಪ್ಪು ಮಾಡಲು ಹೆದರುತ್ತಿದ್ದರು. ಜೈಲಿಗೆ ಹೋಗಿ ಬಂದವರ ಮನೆಯ ಹತ್ತಿರ ಹೋಗಬೇಡ ಎನ್ನುತ್ತಿದ್ದರು. ಈಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ವಿಳಂಬವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರ ಮಂಜೂರು ಮಾಡುವ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಖರ್ಚು ಮಾಡಲಾಗುತ್ತಿದೆ. ಜನರು ಸಂಕಷ್ಟದಲ್ಲಿದ್ದಾರೆ. ಈ ಸಮಾಜವನ್ನು ಬದಲಿಸುವುದು ಯಾವ ರೀತಿ ಎಂಬುದನ್ನು ವಿದ್ಯಾರ್ಥಿಗಳು ಗಂಭೀರವಾಗಿ ಆಲೋಚಿಸಬೇಕು ಎಂದು ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಿವಿಮಾತು ಹೇಳಿದರು.ಮೈಸೂರು ವಿವಿ ಸ್ಕೂಲ್ ಆಫ್ ಪ್ಲ್ಯಾನಿಂಗ್ ಅಂಡ್ ಆರ್ಕಿಟೆಕ್ಚರ್ ಸಭಾಂಗಣದಲ್ಲಿ ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಕಾನೂನು ಶಾಲೆ ಸಹಯೋಗದಲ್ಲಿ ಬುಧವಾರ ನಡೆದ 76ನೇ ಸಂವಿಧಾನ ದಿನ ಅಂಗವಾಗಿ ಭಾರತ ಮತ್ತು ಸಮಕಾಲೀನ ಸಮಾಜ ವಿಷಯ ಕುರಿತು ಅವರು ಮಾತನಾಡಿದರು.
ಗುತ್ತಿಗೆದಾರರು ಹಿಂದಿನ ಸರ್ಕಾರದಲ್ಲಿ ಶೇ. 40ರಷ್ಟು ಕಮಿಷನ್ ಇರುವುದಾಗಿ ಹೇಳುತ್ತಿದ್ದರು. ಈಗ ಅದೇ ಗುತ್ತಿಗೆದಾರರು ಶೇ. 60ರಷ್ಟು ಕಮಿಷನ್ ಇರುವುದಾಗಿ ಆರೋಪಿಸಿದ್ದಾರೆ. ಇದೆಂಥ ದೇಶ ದಶಕದಿಂದ ದಶಕಕ್ಕೆ ಲಕ್ಷಾಂತರ ಕೋಟಿ ರು. ಹಗರಣ ಕಾಣುತ್ತಿದೆ. ಜೀಪ್ ಹಗರಣ, ಬೊಫೋರ್ಸ್, ಕಾಮನ್ ವೆಲ್ತ್ ಗೇಮ್ಸ್, 2ಜಿ ಹಗರಣ ಹೀಗೆ ಸಾಲು ಸಾಲು ಹಗರಣಗಳನ್ನು ಕಾಣುತ್ತಿದ್ದೇವೆ,ಜೈಲಿಗೆ ಹೋಗಿ ಬಂದವರಿಗೆ ಜೈಕಾರದ ಜತೆಗೆ ಸೇಬಿನ ಹಾರ ಹಾಕಿ ಸ್ವಾಗತಿಸುತ್ತಿದ್ದಾರೆ. ಇದು ಸಮಾಜದ ಭಾವನೆ, ಹೀಗಾದರೆ ಭವಿಷ್ಯ ಏನು? ಹಿಂದೆ ತಪ್ಪು ಮಾಡಲು ಹೆದರುತ್ತಿದ್ದರು. ಜೈಲಿಗೆ ಹೋಗಿ ಬಂದವರ ಮನೆಯ ಹತ್ತಿರ ಹೋಗಬೇಡ ಎನ್ನುತ್ತಿದ್ದರು. ಈಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ವಿಳಂಬವಾಗುತ್ತಿದೆ. ಒಂದು ಕೇಸ್ 15 ರಿಂದ 20 ವರ್ಷಗಳು ನಡೆಯುತ್ತಿದೆ. ಹೀಗಾದರೆ ಜನರಲ್ಲಿ ಕಾನೂನಿನ ಮೇಲೆ ನಂಬಿಕೆ ಹೋಗುತ್ತದೆ. ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನ ನಮ್ಮದು. ಇದನ್ನು ವಿದ್ಯಾರ್ಥಿಗಳು ಓದಿ ಅರ್ಥ ಮಾಡಿಕೊಳ್ಳಬೇಕು. ಸಮಾಜ ಬದಲಾವಣೆಗೆ ಕೊಡುಗೆ ನೀಡಬೇಕು ಎಂದರು.
ನೇಪಾಳದಲ್ಲಿ ಆದದ್ದು ಭಾರತದಲ್ಲಿ ನಡೆಯಬಾರದು. ಕಾಂತ್ರಿಯಿಂದ ಯಾರು ಗೆದ್ದವರಿಲ್ಲ. ವಿದ್ಯಾರ್ಥಿಗಳು ಪ್ರಾಮಾಣಿಕತೆ, ಮಾನವೀಯತೆ ಬೆಳೆಸಿಕೊಳ್ಳಬೇಕು. ಯಾರೊಂದಿಗೂ ತಮ್ಮನ್ನು ಹೋಲಿಕೆ ಮಾಡಿಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಡಾ. ನರೇಂದ್ರ ಕುಮಾರ್, ಕಾನೂನು ಶಾಲೆಯ ಮುಖ್ಯಸ್ಥ ಪ್ರೊ.ಆರ್.ಟಿ. ಮೂರ್ತಿ ಇದ್ದರು.ಯಾರನ್ನೂ ಸನ್ಯಾಸಿಯಾಗುವಂತೆ ನಾನು ಹೇಳುವುದಿಲ್ಲ. ಚೆನ್ನಾಗಿ ಓದಿ ಕೆಲಸ ಪಡೆಯಬೇಕು. ರಾಜಕಾರಣಿ ಕೂಡ ಆಗಬಹುದು. ಆದರೆ, ಯಾವುದೇ ಹುದ್ದೆ ಪಡೆದ ಮೇಲೆ ಅಲ್ಲಿ ನನಗೆ ಏನಿದೆ ಅನ್ನದೇ ದೇಶಕ್ಕಾಗಿ ಕೆಲಸ ಮಾಡಬೇಕು.
- ನ್ಯಾ. ಸಂತೋಷ್ ಹೆಗ್ಡೆ , ನಿವೃತ್ತ ಲೋಕಾಯುಕ್ತ