ನಾವು ನುಡಿದಂತೆ ನಡೆದಿದ್ದೇವೆ: ಸಿದ್ದರಾಮಯ್ಯ

| Published : Nov 07 2024, 11:46 PM IST

ಸಾರಾಂಶ

ನಾವು ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ತೀರ್ಮಾನ ಕೈಗೊಂಡು, ಅವುಗಳನ್ನು ಈಡೇರಿಸಿದ್ದೇವೆ.

ಸಂಡೂರು: "ಕರ್ನಾಟಕ ವಾದಾ ಕಿಯಾ, ಧೋಖಾ ದಿಯಾ " ಎಂಬ ಸುಳ್ಳು ಜಾಹೀರಾತನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ನೀಡಿದೆ. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ನಮ್ಮ ಸರ್ಕಾರ ಭರವಸೆ ನೀಡಿದಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಸಾಧನೆಗಳನ್ನು ಸಮರ್ಥಿಸಿಕೊಂಡರು.

ತಾಲೂಕಿನ ಬೊಮ್ಮಘಟ್ಟ, ಚೋರುನೂರು, ಬಂಡ್ರಿ, ಯಶವಂತನಗರ, ಕೃಷ್ಣಾನಗರ ಹಾಗೂ ತಾರಾನಗರ ಗ್ರಾಮಗಳಲ್ಲಿ ಗುರುವಾರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಬಹಿರಂಗ ಸಭೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಪರವಾಗಿ ಬಿರುಸಿನ ಪ್ರಚಾರ ನಡೆಸಿ, ಮತಯಾಚಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ನಂತರ ನಡೆದ ಪ್ರಥಮ ಕ್ಯಾಬಿನೆಟ್ ಮೀಟಿಂಗ್‌ನಲ್ಲಿಯೇ ನಾವು ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ತೀರ್ಮಾನ ಕೈಗೊಂಡು, ಅವುಗಳನ್ನು ಈಡೇರಿಸಿದ್ದೇವೆ. ಈ ಯೋಜನೆಗಳನ್ನು ಎಲ್ಲ ಜಾತಿ, ಧರ್ಮದವರಿಗೆ ಸಮಾನವಾಗಿ ನೀಡಿದ್ದೇವೆ. ಕಾಂಗ್ರೆಸ್ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಾತ್ರ ಇಲ್ಲವೇ ಇಲ್ಲ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ನಾ ಕಾವೂಂಗ, ನಾ ಖಾನೆದೂಂಗ, ಅಚ್ಛೇ ದಿನ್ ಆಯೇಗಾ ಎನ್ನುತ್ತಿದ್ದರು. ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವ ಜನಾರ್ದನ ರೆಡ್ಡಿ ಸುಮ್ಮನೇ ಜೈಲಿಗೆ ಹೋಗಿದ್ದಾರಾ? ಗಣಿ ಲೂಟಿ ಹೊಡೆದು ಜೈಲಿಗೆ ಹೋಗಿದ್ದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇದೆಯಾ? ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಯಾರು? ಅಚ್ಛೇ ದಿನ್ ಬಂದಿದೆಯಾ? ನಿಮ್ಮ ಅಕೌಂಟ್‌ಗಳಿಗೆ ₹೧೫ ಲಕ್ಷ ಬಂದಿದೆಯಾ? ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿದ್ದಾಗ ಒಂದು ಮನೆಯನ್ನಾದರೂ ಕಟ್ಟಿಸಿಕೊಟ್ಟರಾ? ಎಂದು ಪ್ರಶ್ನಿಸಿದ ಸಿಎಂ, ಅಂತಹವರಿಗೆ ಮತ ಕೊಡಬೇಡಿ. ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ದೇವೆ. ಕ್ಷೇತ್ರದ ಅಭಿವೃದ್ಧಿಗಾಗಿ ಪಣತೊಟ್ಟಿರುವ ಈ. ಅನ್ನಪೂರ್ಣಾ ತುಕಾರಾಂ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನನ್ನ ಹಾಗೂ ನಾಗೇಂದ್ರ ಮೇಲೆ ಸುಳ್ಳು ಕೇಸು ದಾಖಲು:

ನಾನು ಮೋದಿ ಹಾಗೂ ಅಮಿತ್‌ ಶಾ ಅವರನ್ನು ಟೀಕೆ ಮಾಡುತ್ತಿದ್ದ ಕಾರಣ, ಟೀಕೆ ಮಾಡುವ ನನ್ನನ್ನು ಮುಗಿಸಲು ಹೊರಟಿದ್ದಾರೆ. ನನ್ನ ಹಾಗೂ ನಾಗೇಂದ್ರ ಮೇಲೆ ಸುಳ್ಳು ಕೇಸನ್ನು ದಾಖಲಿಸಿದರು. ಸಿದ್ದರಾಮಯ್ಯನನ್ನು ಮುಗಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಿದಂತೆ ಅಂತ ತಿಳಿದುಕೊಂಡಿದ್ದಾರೆ. ಜನರ ಆಶೀರ್ವಾದ ಇರುವವರೆಗೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ ಎಂದರು.

ಉಪ ಚುನಾವಣೆಯಲ್ಲಿ ಈ.ಅನ್ನಪೂರ್ಣಾ ತುಕಾರಾಂ ಗೆದ್ದರೆ, ನಾನು ಗೆದ್ದಂಗೆ. ಸಂಸದ ಈ. ತುಕಾರಾಂ ಹಾಗೂ ಈ. ಅನ್ನಪೂರ್ಣಾ ತುಕಾರಾಂ ಇಬ್ಬರು ಸೇರಿಕೊಂಡು ಕ್ಷೇತ್ರವನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಿದ್ದಾರೆ. ಕ್ಷೇತ್ರದ ಜನತೆ ಅನ್ನಪೂರ್ಣಾ ಅವರನ್ನು ಬೆಂಬಲಿಸಬೇಕು ಎಂದರು.

ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸಲ್ಲ:

ರೈತರು ಉಳುಮೆ ಮಾಡುತ್ತಿರುವ ಕೃಷಿ ಜಮೀನುಗಳನ್ನು ಬ ಖರಾಜು ಎಂದು ಮಾಡಿದ್ದು ಬಿಜೆಪಿ ಆಡಳಿತಾವಧಿಯಲ್ಲಿ. ನಾವು ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ. ಬಗರ್ ಹುಕುಂ ಜಮೀನುಗಳಲ್ಲಿನ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಭರವಸೆ ನೀಡಿದ ಸಿಎಂ, ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ಶಾದಿ ಭಾಗ್ಯ, ಪಶುಭಾಗ್ಯ, ಕೃಷಿ ಹೊಂಡ, ಇಂದಿರಾ ಕ್ಯಾಂಟೀನ್, ಪಂಚ ಗ್ಯಾರಂಟಿ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಹೀಗಾಗಿ ಜನತೆ ಕಾಂಗ್ರೆಸ್ ಬೆಂಬಲಿಸಬೇಕು ಎಂದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಂಸದ ಈ. ತುಕಾರಾಂ, ಮಾಜಿ ಸಚಿವ ಎಚ್. ಆಂಜನೇಯ, ಅಮರೇಗೌಡ ಬಯ್ಯಾಪುರ, ಬಸವರಾಜ ರಾಯರೆಡ್ಡಿ ಮಾತನಾಡಿ, ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಪರ ಮತಯಾಚಿಸಿದರು. ಅಭ್ಯರ್ಥಿ ಅನ್ನಪೂರ್ಣಾ ತುಕಾರಾಂ ಮತಯಾಚಿಸಿ, ಕ್ಷೇತ್ರದಲ್ಲಿ ಸಂತೋಷ್ ಲಾಡ್ ಹಾಗೂ ಈ. ತುಕಾರಾಂ ಅವರು ಆರಂಭಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಡಾ. ಶ್ರೀನಿವಾಸ್, ನಾಗೇಂದ್ರ, ರಘುಮೂರ್ತಿ, ದೇವೇಂದ್ರಪ್ಪ, ಎಚ್.ಆರ್. ಗವಿಯಪ್ಪ, ಲತಾ ಮಲ್ಲಿಕಾರ್ಜುನ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಮುಖಂಡರಾದ ತಿಪ್ಪೇಸ್ವಾಮಿ, ಜೆ.ಎಂ. ವೃಷಭೇಂದ್ರಯ್ಯ, ಜೆ.ಎನ್. ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶಕುಮಾರ್ ಹಾಗೂ ವಿವಿಧ ಗ್ರಾಮಗಳ ಸಾವಿರಾರು ಪಕ್ಷದ ಕಾರ್ಯಕರ್ತರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.