ಲೋಡ್ ಶೆಡ್ಡಿಂಗ್ ನಿಲ್ಲದಿದ್ದಲ್ಲಿ ಹೋರಾಟ: ಶಾಸಕ ಬಾಲಕೃಷ್ಣ ಎಚ್ಚರಿಕೆ
KannadaprabhaNewsNetwork | Published : Oct 09 2023, 12:46 AM IST
ಲೋಡ್ ಶೆಡ್ಡಿಂಗ್ ನಿಲ್ಲದಿದ್ದಲ್ಲಿ ಹೋರಾಟ: ಶಾಸಕ ಬಾಲಕೃಷ್ಣ ಎಚ್ಚರಿಕೆ
ಸಾರಾಂಶ
ಚನ್ನರಾಯಪಟ್ಟಣ ತಾಲೂಕಿನ ಹಲವೆಡೆ ಅನಿಯಮಿತ ವಿದ್ಯುತ್ ಕಡಿತ ಉಂಟಾಗುತ್ತಿದ್ದು, ಲೋಡ್ ಶೆಡ್ಡಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಸಿ ಎನ್ ಬಾಲಕೃಷ್ಣ ಸಮರ್ಪಕ ವಿದ್ಯುತ್ ಪೂರೈಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ರೈತರು, ವಿದ್ಯಾರ್ಥಿಗಳು ಹಿತದೃಷ್ಠಿಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ: ಸಿ.ಎನ್.ಬಾಲಕೃಷ್ಣ ತಾಲೂಕಿನಾದ್ಯಂತ ಅನಿಯಮಿತ ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳು ಹಾಗೂ ರೈತರಿಗೆ ತೊಂದರೆಯಾಗುತ್ತಿದ್ದು, ವಿದ್ಯುತ್ ಇಲಾಖೆ ನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡಬೇಕು, ಇಲ್ಲದಿದ್ದಲ್ಲಿ ರೈತರು, ಮತ್ತು ವಿದ್ಯಾರ್ಥಿಗಳು ಹಿತದೃಷ್ಠಿಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಎಚ್ಚರಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕಿನಾದ್ಯಂತ ಪ್ರತಿದಿನ ಸಂಜೆ ಯಾವುದೇ ಪೂರ್ವ ಸೂಚನೆ ಇಲ್ಲದೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ಕುರಿತಾಗಿ ವಿವಿಧೆಡೆಯಿಂದ ಗ್ರಾಮಸ್ಥರು ತಮಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಸಂಜೆ ೬ ರಿಂದ ರಾತ್ರಿ ೯ ಗಂಟೆವರೆಗೆ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿದ್ದು, ಪರೀಕ್ಷಾ ಸಮಯವಾದ್ದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷಕ್ಕೆ ತೊಂದರೆಯಾಗುತ್ತಿದೆ. ಹಾಗೂ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಬೆಳೆಗಳಿಗೆ ನೀರುಣಿಸಲು ವಿದ್ಯುತ್ ಕೊರತೆಯಿಂದಾಗಿ ಬೆಳೆದೆ ಬೆಳೆ ಕೈ ಸೇರುತ್ತಿಲ್ಲ, ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು. ವಿದ್ಯುತ್ ಇಲಾಖೆಯ ಪ್ರಕಾರವೇ, ವಿದ್ಯುತ್ ಉತ್ಪಾದನಾ ಘಟಕಗಳ್ಲಲಿ ಸಮಸ್ಯೆ ಇದೆ. ರಾಯಚೂರು ಉಷ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಮಸ್ಯೆಯಿಂದ ಉತ್ಪಾದನೆ ಕುಸಿದಿದೆ. ಆದ್ದರಿಂದ ಲೋಡ್ ಹೆಚ್ಚಿರುವ ಅವಧಿಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಸರ್ಕಾರ ಕಲ್ಲಿದ್ದಲನ್ನಾಗಲಿ, ವಿದ್ಯುತ್‌ನ್ನಾಗಲಿ ಹೊರ ರಾಜ್ಯಗಳಿಂದ ಖರೀದಿಗೆ ಮುಂದಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದರು. ಬೆಳೆ ಕೊರತೆ: ಸರ್ಕಾರವು ತಾಲೂಕನ್ನು ಹಸಿರು ಬರ ಪ್ರದೇಶವೆಂದು ಘೋಷಿಸಿದೆ. ಬಿತ್ತಿದ ಬೆಳೆ ಹುಟ್ಟಿ, ಹಸಿರು ಇರುವಾಗಲೇ ಮಳೆ ಕೊರತೆಯಿಂದ ಒಣಗಿದೆ. ಇಂತಹ ಸಂದರ್ಭದಲ್ಲಿ ಕೊಳವೆಬಾವಿ ಹೊಂದಿರುವ ರೈತರು ಅಲ್ಪಸಲ್ಪ ಬೆಳೆಯನ್ನಾದರೂ ಉಳಿಸಿಕೊಳ್ಳಲು ವಿದ್ಯುತ್ ಕಣ್ಣಾಮುಚ್ಚಾಲೆ ತೊಡಕಾಗಿದೆ. ರೈತರು ಜೀವನ ನಡೆಸುವುದೇ ದುಸ್ತರವಾಗಿದೆ. ರೈತರಿಗೆ ಹಗಲಿನ ವೇಳೆ ತ್ರಿಫೇಸ್ ವಿದ್ಯುತ್ ನೀಡಬೇಕು. ಇದು ತುರ್ತು ವಿಷಯವಾಗಿದ್ದು ಅಧಿಕಾರಿಗಳು ಕೂಡಲೇ ಗಮನಹರಿಸಬೇಕು. ಇಲ್ಲದಿದ್ದರೆ ಬೆಳೆದು ನಿಂತಿರುವ ಬೆಳೆಗಳು ಒಣಗಿ ಲಕ್ಷಾಂತರ ರು. ನಷ್ಟ ಅನುಭವಿಸಬೇಕಾಗುತ್ತದೆ ಎಂದರು. ಇಲಾಖೆಯಲ್ಲಿನ ಸಮಸ್ಯೆಗಳನ್ನು, ಸರಿಪಡಿಸಿಕೊಂಡು ಸಮರ್ಪಕ ವಿದ್ಯುತ್ ನೀಡುವಂತೆ ಇಲಾಖೆಯ ಮೇಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದ್ದು, ಸೋಮವಾರದಂದು ಈ ಕುರಿತಾಗಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದ ಶಾಸಕರು, ಕಳೆದ ಸರ್ಕಾರಗಳ ಅವಧಿಯಲ್ಲಿ ಅಕ್ರಮ-ಸಕ್ರಮದ ಯೋಜನೆಯಡಿ ೪.೫ಸಾವಿರ ಪರಿವರ್ತಕಗಳನ್ನು ರೈತರು ಅಳವಡಿಸಿಕೊಂಡಿದ್ದರು, ಇದೀಗ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದೆ. ರೈತರ ಹಿತದೃಷ್ಠಿಯಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ಮುಂದಾಗಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕುಂಬಾರಹಳ್ಳಿ ರಮೇಶ್, ಇನಾಸಪ್ಪ, ಮಹೇಂದ್ರ, ಸಿ.ಎನ್.ಮಂಜುನಾಥ್ ಇದ್ದರು. ಕೇಂದ್ರ ಬರ ಅಧ್ಯಯನ ತಂಡವು ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸುತ್ತಿದ್ದು, ತಾಲೂಕಿನಲ್ಲಿ ಉಂಟಾಗಿರುವ ಬರಸ್ಥಿತಿಯನ್ನು ಅರಿಯಲು ತಾಲೂಕಿಗೆ ಅವರನ್ನು ಕರೆತರುವಲ್ಲಿ ಜಿಲ್ಲಾಧಿಕಾರಿಗಳು ಮುಂದಾಗಬೇಕು. ಇನ್ನೂ ತಾಲೂಕಿನಲ್ಲಿ ಕುಡಿಯುವ ನೀರು ಸಮಸ್ಯೆ ಇರುವ ಭಾಗಗಳಲ್ಲಿ ಜರೂರಾಗಿ ಕೊಳವೆ ಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುವುದು, ಇಲ್ಲವೇ ಅಕ್ಕಪಕ್ಕದ ಗ್ರಾಮಗಳ, ಜಮೀನುಗಳ ಕೊಳವೆ ಬಾವಿಗಳನ್ನು ಆಶ್ರಯಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕ್ರಮವನ್ನು ಆಯಾ ಗ್ರಾಮ ಪಂಚಾಯ್ತಿಗಳು ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.