ಗ್ಯಾರಂಟಿ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಅದನ್ನು ಸರಿಯಾಗಿ ಜನರಿಗೆ ತಲುಪಿಸುತ್ತಿಲ್ಲ ಈಗ ವಿರೋಧ ಪಕ್ಷದ ನಾಯಕರ ಮನೆಗೆ ಚಾಕು-ಚೂರಿ ಕಳಿಸುತ್ತಿದ್ದಾರೆ. ಇದೇ ಇವರ ಸಂಸ್ಕಾರ. ಬಿಜೆಪಿ ಕಾರ್ಯಕರ್ತರಿಂದ ಕಾರ್ಯಕರ್ತರಿಗಾಗಿ ಕಾರ್ಯಕರ್ತರಿಗೋಸ್ಕರ ಇರುವ ಪಕ್ಷ. ದೇಶದ ೨೨ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್‌ನವರದು ಚಾಕು-ಚೂರಿ ಸಂಸೃತಿ. ಅದೇ ಸಂಸ್ಕೃತಿಯಲ್ಲಿ ಬೆಳೆದುಬಂದಿರುವವರಿಗೆ ಚಾಕು-ಚೂರಿ ಬಿಟ್ಟರೆ ಬೇರೇನೂ ಕಾಣಿಸುವುದೇ ಇಲ್ಲ. ಕಾಂಗ್ರೆಸ್‌ನವರ ಗೊಡ್ಡು ಬೆದರಿಕೆಗಳಿಗೆ ಹೆದರುವವರು ನಾವಲ್ಲ ಎಂದು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವರ್ತನೆಯ ವಿರುದ್ಧ ಕಿಡಿಕಾರಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಚಾಕು-ಚೂರಿ ಪಾರ್ಸೆಲ್ ಕಳುಹಿಸಿದ್ದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು

ನಗರದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು, ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕೊತ್ವಾಲ್ ಸರ್ಕಾರ ಆಡಳಿತದಲ್ಲಿದೆ. ಇದೊಂದು ಕೊಲೆಗಡುಕರ ಸರ್ಕಾರ ಎಂದು ಘೋಷಣೆಗಳನ್ನು ಕೂಗಿ ಕಿಡಿಕಾರಿದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಶಂಕರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಗೂಂಡಾ ಸಂಸ್ಕೃತಿಯ ಸರ್ಕಾರ ಆಡಳಿತ ನಡೆಸುತ್ತಿದೆ. ಹೀಗಾಗಿ ವಿರೋಧ ಪಕ್ಷದ ನಾಯಕರ ಮನೆಗೆ ಚಾಕು-ಚೂರಿ ಕಳಿಸುತ್ತಾರೆ. ಇದಕ್ಕೆಲ್ಲಾ ಕೈಕಟ್ಟಿ ಕೂರುವುದಕ್ಕೆ ಬಿಜೆಪಿ ಕಾರ್ಯಕರ್ತರು ಬಳೆ ತೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಅದನ್ನು ಸರಿಯಾಗಿ ಜನರಿಗೆ ತಲುಪಿಸುತ್ತಿಲ್ಲ ಈಗ ವಿರೋಧ ಪಕ್ಷದ ನಾಯಕರ ಮನೆಗೆ ಚಾಕು-ಚೂರಿ ಕಳಿಸುತ್ತಿದ್ದಾರೆ. ಇದೇ ಇವರ ಸಂಸ್ಕಾರ. ಬಿಜೆಪಿ ಕಾರ್ಯಕರ್ತರಿಂದ ಕಾರ್ಯಕರ್ತರಿಗಾಗಿ ಕಾರ್ಯಕರ್ತರಿಗೋಸ್ಕರ ಇರುವ ಪಕ್ಷ. ದೇಶದ ೨೨ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಕೇವಲ ಎರಡು ಸ್ಥಾನ ಹೊಂದಿದ್ದಾಗಲೂ ಕಾಂಗ್ರೆಸ್ಗೆ ಬಿಜೆಪಿ ಹೆದರಿಲ್ಲ. ಧಮ್ಕಿ, ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದರು.

ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆಂಪಬೋರಯ್ಯ ಛಲವಾದಿ ನಾರಾಯಣಸ್ವಾಮಿ ಅವರು ಸಭೆಯಲ್ಲಿ ಮಾತನಾಡುತ್ತಾ ರಾಜಕೀಯವಾಗಿ ಜನರಿಗೆ ವಂಚನೆ ಮಾಡುತ್ತಿರುವ ಬೆಲೆ ಏರುಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ ಎಂದು ಹೇಳಿರುವುದನ್ನು ಅಪಾರ್ಥ ಮಾಡಿಕೊಂಡು ಮನೆಗೆ ಚಾಕು-ಚೂರಿ ಕಳುಹಿಸಿದ ಘಟನೆ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಏಕೆಂದರೆ, ಈ ಗೃಹ ಸಚಿವರು ಛಲವಾದಿ ವಿರುದ್ಧ ಸದಾ ದ್ವೇಷ ಸಾಧಿಸುತ್ತಾ ಬಂದಿದ್ದಾರೆ. ಈ ಚಾಕು-ಚೂರಿ ಕಳುಹಿಸಿದ ಪ್ರಕರಣಕ್ಕೆ ಗೃಹ ಸಚಿವರೇ ನೇರ ಹೊಣೆಯಾಗಿದ್ದು, ಅವರ ವಿರುದ್ಧವೇ ಮೊದಲು ಎಫ್‌ಐಆರ್‌ ದಾಖಲಿಸಬೇಕು ಎಂದು ಆಗ್ರಹಿಸಿದರು.

ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಸಿ ಈ ಪ್ರಕರಣದಲ್ಲಿ ಯಾರೆದ್ದಾರೆ ಎಂಬುದನ್ನು ತನಿಖೆ ಮಾಡಬೇಕು ಎಂದರು.

ಬಿಜೆಪಿ ಮುಖಂಡ ನಿತ್ಯಾನಂದ ಮಾತನಾಡಿ, ಕಾಂಗ್ರೆಸ್‌ನಲ್ಲಿ ಗೂಂಡಾ ಸಂಸ್ಕೃತಿ ಇನ್ನೂ ಇದೆ ಎಂಬುದಕ್ಕೆ ವಿರೋಧ ಪಕ್ಷದ ನಾಯಕರ ಮನೆಗೆ ಚಾಕು-ಚೂರಿ ಕಳುಹಿಸಿರುವುದೇ ನಿದರ್ಶನ. ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಸಿಎಂ ಡಿ.ಕೆ. ಶಿವಕುಮಾರ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಂಪಬೋರಯ್ಯ, ನಿತ್ಯಾನಂದ ಶಂಕರ್‌, ಸಿದ್ದರಾಜು ಗೌಡ, ಮಲ್ಲಿಕಾರ್ಜುನ ಕೇಶವ್, ಭೀಮೇಶ್ ಓಬಿಸಿ ಆನಂದ, ಪ್ರಸನ್ನ, ಚಂದ್ರ, ಧರಣಿಂದ್ರ ಯೋಗೇಶ್ ಹರೀಶ, ವಿವೇಕ್ ಮಲ್ಲಿಕಾರ್ಜುನ ಸೆರಿದಂತೆ ಹಲವರು ಹಾಜರಿದ್ದರು.

ಕೆಪಿಸಿಸಿ ಕಚೇರಿಗೆ ಬದನೆಕಾಯಿ ಕಳುಹಿಸಿ ಪ್ರತಿಭಟನೆ

ಮಂಡ್ಯ: ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಚಾಕು-ಚೂರಿ ಪಾರ್ಸೆಲ್ ಕಳುಹಿಸಿದ್ದನ್ನು ವಿರೋಧಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೆಪಿಸಿಸಿ ಕಚೇರಿಗೆ ಬದನೆಕಾಯಿ ಪಾರ್ಸೆಲ್ ಕಳುಹಿಸಿ ಪ್ರತಿಭಟನೆ ನಡೆಸಿದರು.ನಗರದ ಪ್ರಧಾನ ಅಂಚೆ ಕಚೇರಿ ಬಳಿ ಸೇರಿ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಕಾರ್‍ಯಕರ್ತರ ವಿರುದ್ದ ಘೋಷಣೆ ಕೂಗಿದರು. ನಂತರ ಕೆಪಿಸಿಸಿ ಕಚೇರಿಗೆ ತರಕಾರಿಗಳುಳ್ಳ ಪೆಟ್ಟಿಗೆಯನ್ನು ಅಂಚೆ ಪಾರ್ಸಲ್ ಮೂಲಕ ರವಾನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್, ಹೊಸಹಳ್ಳಿ ಶಿವು, ಶಂಕರ್, ಯೋಗೇಶ್, ರಾಜೀವ್‌ಗೌಡ ಪಾಲ್ಗೊಂಡಿದ್ದರು.